ಆನೆಚೌಕೂರು- ಪಿರಿಯಾಪಟ್ಟಣ ರಸ್ತೆ ಬಂದ್ ತೆರವಿಗೆ ಆಗ್ರಹ
ಕೊಡಗು

ಆನೆಚೌಕೂರು- ಪಿರಿಯಾಪಟ್ಟಣ ರಸ್ತೆ ಬಂದ್ ತೆರವಿಗೆ ಆಗ್ರಹ

April 3, 2020

ಗೋಣಿಕೊಪ್ಪ, ಏ.2- ಆನೆಚೌಕೂರು- ಪಿರಿಯಾಪಟ್ಟಣ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿದ್ದು, ಇದರಿಂದ ಮೀಸಲು ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದಲ್ಲಿ, ಅರಣ್ಯ ಇಲಾಖೆ ಕಾರ್ಯಾಚರಣೆಗೆ ಅಡ್ಡಿಯುಂಟಾ ಗಿದೆ ಎಂಬ ದೂರು ಕೇಳಿಬರುತ್ತಿದೆ.
ಕೊರೊನಾ ತಡೆಗೆ ಜಿಲ್ಲಾದ್ಯಂತ ಗಡಿ ಬಂದ್ ಮಾಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆ ಮೇರೆಗೆ ತಾಲೂಕು ಆಡಳಿತ ಈ ರಸ್ತೆಯನ್ನು ಬಂದ್ ಮಾಡಿದೆ. ಇದರಿಂದ ಆಗುತ್ತಿರುವ ತೊಂದರೆ ಬಗ್ಗೆ ಉಸ್ತುವಾರಿ ಸಚಿವ ಸೋಮಣ್ಣ ಅವರ ನೇತೃತ್ವದ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿ ಮಣ್ಣು ತೆರವುಗೊಳಿಸುವಂತೆ ಆದೇಶಿಸಿದ್ದರೂ ಮಣ್ಣು ತೆರವುಗೊಳಿಸಿಲ್ಲ ಎಂದು ಸಮೀಪದ ಬೂದಿತಿಟ್ಟು ಗ್ರಾಮಸ್ಥರು ಆರೋಪಿಸಿದ್ದಾರೆ. ಆನೆಚೌಕೂರು- ಪಿರಿಯಾಪಟ್ಟಣ ನಡುವೆ ಅಂತರರಾಜ್ಯ ಸಂಚಾರ ಇಲ್ಲದಿದ್ದರೂ, ಈ ರಸ್ತೆ ಬಂದ್‍ನಿಂದ ಕೊರೊನಾ ತಡೆಗೆ ಯಾವುದೇ ಪ್ರಯೋಜನವಿಲ್ಲ. ಅಲ್ಲದೆ, ಹುಣಸೂರು-ಗೋಣಿಕೊಪ್ಪ ಮುಖ್ಯರಸ್ತೆ ಸಂಚಾರಕ್ಕೆ ಮುಕ್ತವಾಗಿದ್ದು, ಈ ರಸ್ತೆ ಬಂದ್ ಮಾಡಿರುವುದು ಯಾವುದೇ ಪ್ರಯೋಜನ ವಿಲ್ಲ. ಹಾಗಾಗಿ ಈ ರಸ್ತೆ ತೆರವುಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಅಲ್ಲದೆ, ಅರಣ್ಯ ಪ್ರದೇಶಕ್ಕೆ ಬೀಟ್ ಮಾಡಲು, ಬೆಂಕಿ ಬೀಳದಂತೆ ತಡೆಯಲು ಕಾವಲು ಕಾಯುವ ಕೆಲಸಕ್ಕೂ ಈ ರಸ್ತೆ ಬಂದ್ ಅಡ್ಡಿಯಾಗಿದೆ ಎಂದು ವನ್ಯಜೀವಿ ಆರ್‍ಎಫ್‍ಓ ಹನುಮಂತರಾಜ್ ತಿಳಿಸಿದ್ದಾರೆ.

Translate »