ಮನೆ ಬಾಗಿಲಿಗೇ ಹಣ್ಣು-ತರಕಾರಿ: ಮೈಸೂರು ಜನತೆಯಿಂದ ಉತ್ತಮ ಪ್ರತಿಕ್ರಿಯೆ
ಮೈಸೂರು

ಮನೆ ಬಾಗಿಲಿಗೇ ಹಣ್ಣು-ತರಕಾರಿ: ಮೈಸೂರು ಜನತೆಯಿಂದ ಉತ್ತಮ ಪ್ರತಿಕ್ರಿಯೆ

April 3, 2020

ಸಾಮಾಜಿಕ ಅಂತರ ಕಾಯ್ದುಕೊಂಡರು; ಇಂದಿನಿಂದ ಇನ್ನಷ್ಟು ವಾಹನ ಸೇರ್ಪಡೆ
ಮೈಸೂರು, ಏ.2(ಆರ್‍ಕೆಬಿ)- `ಲಾಕ್‍ಡೌನ್’ ಹಿನ್ನೆಲೆ ಯಲ್ಲಿ ಮೈಸೂರಿನ ಎಲ್ಲಾ ವಾರ್ಡ್‍ಗಳಲ್ಲಿ ಮನೆ ಬಾಗಿಲಿಗೇ ತರಕಾರಿ-ಹಣ್ಣು ತಲುಪಿಸುವ ಮಹಾನಗರ ಪಾಲಿಕೆ ಮತ್ತು ತೋಟಗಾರಿಕೆ ಇಲಾಖೆಯ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮಾರುಕಟ್ಟೆಯಲ್ಲಾದರೆ ತರಕಾರಿ ಖರೀದಿಗೆ ಬರುವ ಜನರು `ಅಂತರ’ ಕಾಯ್ದುಕೊಳ್ಳದೆ ಒತ್ತೊತ್ತಾಗಿ ನಿಲ್ಲುತ್ತಾರೆ. ಇದನ್ನು ತಪ್ಪಿಸುವ ಸಲುವಾಗಿ ಮನೆ ಬಾಗಿಲಿಗೇ ತರಕಾರಿ-ಹಣ್ಣು ತಲುಪಿಸುವ ವ್ಯವಸ್ಥೆಯನ್ನು ನಗರದಲ್ಲಿ ಜಾರಿಗೆ ತರಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಬುಧವಾರ ಚಾಲನೆ ನೀಡಿದ್ದರು.

ಮೈಸೂರಿನ ವಿವಿಧ ವಾರ್ಡ್‍ಗಳಿಗೆ ಗುರುವಾರ ಬೆಳಿಗ್ಗೆ 8 ಟಾಟಾ ಏಸ್ ವಾಹನಗಳಲ್ಲಿ ತರಕಾರಿ-ಹಣ್ಣುಗಳನ್ನು ಕಳಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನರು ತಮ್ಮ ಮನೆ ಬಳಿಯೇ ಬಂದ ತರಕಾರಿ-ಹಣ್ಣುಗಳನ್ನು ಖರೀದಿಸಿದರು. ಸದ್ಯ ಮಾರುಕಟ್ಟೆಗೆ ಹೋಗುವುದು ತಪ್ಪಿತಲ್ಲ ಎಂದು ಅನೇಕರು ನಿಟ್ಟುಸಿರುಬಿಟ್ಟರು.

ಕರ್ಜನ್ ಪಾರ್ಕ್ ಬಳಿಯ ಹಾಪ್‍ಕಾಮ್ಸ್ ಮಳಿಗೆ ಯಿಂದ ಹಣ್ಣು, ತರಕಾರಿಗಳನ್ನು ತುಂಬಿಕೊಂಡ ವಾಹನ ಗಳು ತಿಲಕ್ ನಗರ, ದಟ್ಟಗಳ್ಳಿ, ಹೆಬ್ಬಾಳ, ಇಟ್ಟಿಗೆಗೂಡು, ಜೆಎಸ್‍ಎಸ್ ಲೇಔಟ್, ಕುವೆಂಪುನಗರ, ಜೆಪಿ ನಗರ, ಯಾದವಗಿರಿ, ಬನ್ನಿಮಂಟಪ ಬಡಾವಣೆ, ಸಿದ್ದಾರ್ಥ ಬಡಾವಣೆ, ಗೋಕುಲಂ, ಗಂಗೋತ್ರಿ ಬಡಾವಣೆ, ಶಾರದಾದೇವಿನಗರ, ಕ್ಯಾತಮಾರನಹಳ್ಳಿ ಮೊದಲಾದ ಪ್ರದೇಶಗಳಿಗೆ ತೆರಳಿದವು.

ಮೈಕ್ ಅಳವಡಿಕೆ: ಈ ವಾಹನಗಳಿಗೆ ಶುಕ್ರವಾರದಿಂದ ಮೈಕ್ ಅಳವಡಿಸಲಾಗುವುದು. ಇದರಿಂದ ಹಣ್ಣು-ತರಕಾರಿ ವಾಹನ ತಮ್ಮ ಬಡಾವಣೆಗೆ ಬಂದಿರುವುದು ಜನರಿಗೆ ಸುಲಭವಾಗಿ ತಿಳಿಯುತ್ತದೆ. ಜನರು ಯಾವುದೇ ಒತ್ತಡ ಇಲ್ಲದೆ ಖರೀದಿಸಲು ಅನುಕೂಲವಾಗುತ್ತದೆ ಎಂದು ಇದರ ಜವಾಬ್ದಾರಿ ಹೊತ್ತಿರುವ ನಗರಪಾಲಿಕೆ ನಗರ ಯೋಜನಾಧಿಕಾರಿ ಜಯಸಿಂಹ `ಮೈಸೂರು ಮಿತ್ರ’ನಿಗೆ ತಿಳಿಸಿದರು.ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಾಳೆಯಿಂದ ವಾಹನಗಳ ಸಂಖ್ಯೆ ಹೆಚ್ಚಿಸುವ ಕುರಿತು ಚಿಂತಿಸಲಾಗುತ್ತಿದೆ ಎಂದರು.

Translate »