ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯ
ಮೈಸೂರು

ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯ

July 17, 2018

ಮೈಸೂರು: ನೆನೆಗುದಿಗೆ ಬಿದ್ದಿರುವ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಂತೆ ಕದಂಬ ಸೈನ್ಯ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಒತ್ತಾಯಿಸಿದೆ.

ಸೇನೆಯ ರಾಜ್ಯಾಧ್ಯಕ್ಷ ಬೇಕ್ರಿ ಮಹೇಶ್ ಸೋಮವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ, ಕನ್ನಡ ಭಾಷೆಯ ಪರಿಣಾಮಕಾರಿ ಅನುಷ್ಠಾನ ಇನ್ನಿತರ ಕನ್ನಡ ಬೆಳವಣಿಕೆಗೆ ಪೂರಕವಾದ ವರದಿಯನ್ನು ಸರೋಜಿನಿ ಮಹಿಷಿ ಅವರು ನೀಡಿದ್ದರು. ಆದರೆ ದಶಕಗಳೇ ಕಳೆದರೂ ವರದಿ ಜಾರಿಗೆ ಯಾವ ಸರ್ಕಾರಗಳು ಮನಸ್ಸು ಮಾಡಿಲ್ಲ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಪರಿಷ್ಕೃತ ವರದಿ ಪಡೆದುಕೊಂಡಿದ್ದರು. ಆದರೆ ಅನುಷ್ಠಾನಕ್ಕೆ ಇಚ್ಛಾಶಕ್ತಿ ತೋರಲಿಲ್ಲ. ಈಗ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಹಿಷಿ ವರದಿ ಜಾರಿಗೊಳಿಸಲು ಮನಸ್ಸು ಮಾಡಬೇಕು. ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನಿತರ ನಾಯಕರು ಮಹಿಷಿ ವರದಿ ಜಾರಿಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಆಗ್ರಹಿಸಿ ಕದಂಬ ಸೈನ್ಯದ ವತಿಯಿಂದ ಜು.27ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಮಹದೇವಸ್ವಾಮಿ, ರಾಜ್ಯ ಉಪಾಧ್ಯಕ್ಷ ಉಮ್ಮಡಹಳ್ಳಿ ನಾಗೇಶ್ ಉಪಸ್ಥಿತರಿದ್ದರು.

Translate »