ಹೈನುಗಾರಿಕೆಯಿಂದ ಗ್ರಾಮೀಣ ಜನರ ಪಟ್ಟಣ ವಲಸೆ ತಡೆ
ಮೈಸೂರು

ಹೈನುಗಾರಿಕೆಯಿಂದ ಗ್ರಾಮೀಣ ಜನರ ಪಟ್ಟಣ ವಲಸೆ ತಡೆ

July 17, 2018

ಮೈಸೂರು: ಹೈನುಗಾರಿಕೆ, ಗ್ರಾಮೀಣ ಜನರು ಪಟ್ಟಣಗಳಿಗೆ ವಲಸೆ ಹೋಗುವುದನ್ನು ತಡೆಗಟ್ಟಿದೆ ಎಂದು ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಹೆಚ್.ವಿ.ರಾಜೀವ್ ಅಭಿಪ್ರಾಯಪಟ್ಟರು.

ಮೈಸೂರಿನ ಜಿಲ್ಲಾ ಸಹಕಾರ ಒಕ್ಕೂಟದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಮೈಸೂರು ಜಿಲ್ಲಾ ಸಹಕಾರ ಒಕ್ಕೂಟ, ಮೈಸೂರು ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ಹಾಗೂ ಸಹಕಾರ ಇಲಾಖೆ ಆಶ್ರಯದಲ್ಲಿ ಸೋಮವಾರ ಮೈಸೂರು ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರಿಗೆ ಏರ್ಪಡಿಸಿದ್ದ ಒಂದು ದಿನದ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳ ರೈತರು ಹೈನುಗಾರಿಕೆಯನ್ನೇ ಹೆಚ್ಚು ಅವಲಂಭಿಸಿದ್ದಾರೆ. ರೈತರು ಹಾಲಿನ ಗುಣಮಟ್ಟವನ್ನು ಉತ್ತಮವಾಗಿ ಕಾಯ್ದುಕೊಳ್ಳಬೇಕು. ಹಾಲು ಉತ್ಪಾದಕರಿಗೆ ಹೆಚ್ಚು ಉತ್ತೇಜನ ನೀಡಿದರೆ ಹಾಲಿನ ಉತ್ಪಾದನೆ ಇನ್ನಷ್ಟು ಹೆಚ್ಚಲು ಅವಕಾಶವಾಗುತ್ತದೆ ಎಂದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಕೆ.ಜಿ.ಮಹೇಶ್, ಪ್ರತಿ ಸಾರಿ ಸಹಕಾರಿ ಬೈಲಾ ತಿದ್ದುಪಡಿ ಆಗುತ್ತಿರುವುದರಿಂದ ಅದರ ಬಗ್ಗೆ ಒಕ್ಕೂಟದ ಅಧ್ಯಕ್ಷರು, ಕಾರ್ಯದರ್ಶಿಗಳಿಗೆ ಮಾಹಿತಿ ನೀಡುವ ಸಲುವಾಗಿ ಅಧ್ಯಕ್ಷರಿಗೆ ತರಬೇತಿ ಆಯೋಜಿಸಲಾಗಿದೆ ಎಂದರು.

ಮುಂಬರುವ ಸಹಕಾರಿ ಹಾಲು ಒಕ್ಕೂಟದ ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ ಸದಸ್ಯರು ವಾರ್ಷಿಕ ಕನಿಷ್ಟ 500 ಲೀಟರ್ ಹಾಲು ಹಾಕಿರಬೇಕಾಗುತ್ತದೆ. ಅಥವಾ ವರ್ಷದಲ್ಲಿ 180 ದಿನವಾದರೂ ಒಕ್ಕೂಟಕ್ಕೆ ಹಾಲು ಹಾಕಿರಬೇಕಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಹೈನೋದ್ಯಮದಲ್ಲಿ ಶುದ್ಧ ಹಾಲು ಉತ್ಪಾದನೆಯ ಮಹತ್ವ ಹಾಗೂ ಹೈನುಗಾರಿಕೆಯಲ್ಲಿ ಹಾಲು ಉತ್ಪಾದನೆ ವೆಚ್ಚ ಕಡಿಮೆ ಮಾಡಲು ಹಸು ಮೇವಿನ ಪ್ರಾಮುಖ್ಯತೆ ಕುರಿತು ಹಾಲು ಒಕ್ಕೂಟದ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಜಗದೀಶ್, ಇತ್ತೀಚಿನ ತಿದ್ದುಪಡಿಯಾದ ಕಾಯಿದೆಯ ಮುಖ್ಯಾಂಶಗಳ ಕುರಿತು ರಾಜ್ಯ ಸಹಕಾರಿ ಮಹಾಮಂಡಳದ ನಿವೃತ್ತ ನಿರ್ದೇಶಕ ಗೋವಿಂದೇಗೌಡ ಮಾಹಿತಿ ನೀಡಿದರು.

ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರಾದ ಶ್ರೀನಿವಾಸ್, ಅಬ್ದುಲ್ ಮಜೀಬ್, ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕರಾದ ಲೀಲಾ ನಾಗರಾಜು, ವ್ಯವಸ್ಥಾಪಕ ಪಿ.ಎಸ್.ಹರೀಶ್, ಉಪ ವ್ಯವಸ್ಥಾಪಕ ಡಾ.ಸಿ.ದಿವಾಕರ್, ಜಿಲ್ಲಾ ಸಹಕಾರ ಒಕ್ಕೂಟದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಎಂ.ಚನ್ನಬಸಪ್ಪ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Translate »