ಜಗನ್ಮೋಹನ ಅರಮನೆ ಆರ್ಟ್  ಗ್ಯಾಲರಿಯಲ್ಲಿ ಆಡಿಯೋ ಗೈಡ್ ವ್ಯವಸ್ಥೆ : ದೇಶೀಯರ ಪ್ರವೇಶ ಶುಲ್ಕದಲ್ಲಿ 40 ರೂ. ಹೆಚ್ಚಳ
ಮೈಸೂರು

ಜಗನ್ಮೋಹನ ಅರಮನೆ ಆರ್ಟ್  ಗ್ಯಾಲರಿಯಲ್ಲಿ ಆಡಿಯೋ ಗೈಡ್ ವ್ಯವಸ್ಥೆ : ದೇಶೀಯರ ಪ್ರವೇಶ ಶುಲ್ಕದಲ್ಲಿ 40 ರೂ. ಹೆಚ್ಚಳ

July 17, 2018

ಮೈಸೂರು:  ನವೀಕರಣಗೊಂಡಿರುವ ಮೈಸೂರಿನ ಜಗನ್ಮೋಹನ ಅರಮನೆಯ ಆರ್ಟ್ ಗ್ಯಾಲರಿಗೆ ಪ್ರವೇಶ ಶುಲ್ಕ ಹೆಚ್ಚಳ ಮಾಡಲಾಗಿದ್ದು, ಪ್ರವಾಸಿಗರಿಗೆ ಹೊಸದಾಗಿ ಆಡಿಯೋ ಗೈಡ್ ವ್ಯವಸ್ಥೆ ಕಲ್ಪಿಸಲಾಗಿದೆ.

ಮೈಸೂರಿನ ಪಾರಂಪರಿಕ ಕಟ್ಟಡಗಳಲ್ಲಿ ಒಂದಾಗಿರುವ ಜಗನ್ಮೋಹನ ಅರಮನೆಗೆ 157 ವರ್ಷಗಳ ಇತಿಹಾಸವಿದ್ದು, ಕಳೆದ ಕೆಲ ವರ್ಷಗಳಿಂದ ಕಟ್ಟಡದ ಕೆಲ ಭಾಗ ಶಿಥಿಲಾವಸ್ಥೆ ತಲುಪಿ, ಮಳೆ ನೀರು ಸುರಿಯ ತೊಡಗಿತ್ತು. ಹಾಗಾಗಿ ಕಳೆದ ಒಂದು ವರ್ಷದಿಂದ ಈ ಅರಮನೆಯ ಆರ್ಟ್ ಗ್ಯಾಲರಿ ಕಟ್ಟಡವನ್ನು ಹಂತ ಹಂತವಾಗಿ ದುರಸ್ಥಿ ಕಾರ್ಯ ನಡೆಸಲಾಗಿತ್ತು. ಮೈಸೂರಿನ ಪ್ರವಾಸಿ ತಾಣಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿರುವ ಈ ಆರ್ಟ್ ಗ್ಯಾಲರಿಯಲ್ಲಿರುವ ಅಪರೂಪ ತೈಲಚಿತ್ರಗಳು, ಮಹಾರಾಜರು ಬಳಸುತ್ತಿದ್ದ ವಸ್ತುಗಳು ಪ್ರವಾಸಿಗರ ಆಕರ್ಷಣೆಯಾಗಿವೆ.

ಈ ಹಿಂದೆ ಆರ್ಟ್ ಗ್ಯಾಲರಿಗೆ ಒಬ್ಬರಿಗೆ (ಭಾರತೀಯರಿಗೆ) 35 ರೂ. ಪ್ರವೇಶ ಶುಲ್ಕವಿದ್ದು, ಇಂದಿನಿಂದ ಹೆಚ್ಚುವರಿ 40 ರೂ.ಗೆ ಹೆಚ್ಚಳ ಮಾಡಲಾಗಿದೆ. ಇದರಿಂದ ದೇಶೀಯರಿಗೆ ಒಬ್ಬರಿಗೆ 75 ರೂ. ದೇಶೀಯರ ಮಕ್ಕಳಿಗೆ 20 ರೂ., ವಿದೇಶಿಗರಿಗೆ 175 ರೂ., ವಿದೇಶಿಯರ ಮಕ್ಕಳಿಗೆ 70 ರೂ. ಇದ್ದುದ್ದನ್ನು ಹಾಗೆ ಮುಂದುವರೆಸಲಾಗಿದೆ. ಪ್ರವೇಶ ಶುಲ್ಕ ಹೆಚ್ಚಳ ಮಾಡಿರುವುದಕ್ಕೆ ಪ್ರತಿಯಾಗಿ ಟಿಕೆಟ್ ಪಡೆದು ಗ್ಯಾಲರಿ ಪ್ರವೇಶಿಸುವ ಪ್ರವಾಸಿಗರಿಗೆ ಆಡಿಯೋ ಗೈಡ್ ವ್ಯವಸ್ಥೆ ಮಾಡಲಾಗಿದೆ. ಪ್ರವಾಸಿಗರು ಗ್ಯಾಲರಿ ಒಳಗೆ ಹೋದ ಬಳಿಕ ಯಾವುದಾದರೂ ಚಿತ್ರ ಅಥವಾ ವಸ್ತುಗಳ ಮುಂದೆ ನಿಂತರೆ ಆ ಚಿತ್ರ ಅಥವಾ ವಸ್ತುವಿನ ಬಗ್ಗೆ ಮಾಹಿತಿಯುಳ್ಳ ಆಡಿಯೋ ತಾನಾಗಿಯೇ ಪ್ಲೇ ಆಗುತ್ತದೆ. ಇದರಿಂದ ಅಲ್ಲಿರುವ ಚಿತ್ರಗಳು, ಮಹತ್ವದ ವಸ್ತುಗಳ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ಲಭ್ಯವಾಗುವುದಲ್ಲದೆ, ಯಾವ ಕಡೆ ಹೋಗಬೇಕೆಂಬ ಕ್ರಮಬದ್ದ ಮಾರ್ಗವನ್ನು ಆಡಿಯೋ ಮೂಲಕವೇ ಪಡೆದುಕೊಳ್ಳಬಹುದಾಗಿದೆ.

ಟಿಕೆಟ್ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಜಗನ್ಮೋಹನ ಅರಮನೆಯ ಉಸ್ತುವಾರಿ ರಿಚರ್ಡ್ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಈ ಹಿಂದೆ 35 ರೂ. ಪ್ರವೇಶ ಶುಲ್ಕವಿತ್ತು. ಆದರೆ ಇಂದಿನಿಂದ 40 ರೂ. ಹೆಚ್ಚಳ ಮಾಡಿ ಒಬ್ಬರಿಗೆ 75 ರೂ. ನಿಗಧಿ ಮಾಡಲಾಗಿದೆ. ಇದಕ್ಕೆ ಪ್ರತಿಯಾಗಿ ಆರ್ಟ್ ಗ್ಯಾಲರಿಯಲ್ಲಿ ಆಡಿಯೋ ಗೈಡ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಪ್ರವಾಸಿಗರು ಗ್ಯಾಲರಿಯಲ್ಲಿರುವ ವಸ್ತುಗಳು ಮತ್ತು ಚಿತ್ರಗಳ ಮುಂದೆ ನಿಂತರೆ ಸಾಕು ಅದರ ಹಿನ್ನೆಲೆ, ಕಾಲಮಾನ, ಮಹತ್ವ ಸೇರಿದಂತೆ ಎಲ್ಲವನ್ನು ವಿವರಿಸುತ್ತದೆ ಎಂದು ಹೇಳಿದರು.

Translate »