ಅರಮನೆಯಲ್ಲಿ ಆಚರಿಸುವುದು ಮಾತ್ರವೇ ಸಾಂಪ್ರದಾಯಿಕ ದಸರಾ, ಸರ್ಕಾರದ್ದು ನಾಡಹಬ್ಬ
ಮೈಸೂರು

ಅರಮನೆಯಲ್ಲಿ ಆಚರಿಸುವುದು ಮಾತ್ರವೇ ಸಾಂಪ್ರದಾಯಿಕ ದಸರಾ, ಸರ್ಕಾರದ್ದು ನಾಡಹಬ್ಬ

September 17, 2018

ಮೈಸೂರು: ರಾಜ್ಯ ಸರ್ಕಾರದ ವತಿಯಿಂದ ಆಚರಣೆ ಮಾಡುವುದು ಸಾಂಪ್ರದಾಯಿಕ ದಸರಾ ಅಲ್ಲ. ಅದು ಕೇವಲ ನಾಡಹಬ್ಬ. ಅರಮನೆಯಲ್ಲಿ ಆಚರಿಸುವುದು ಮಾತ್ರ ಸಾಂಪ್ರದಾಯಿಕ ದಸರಾ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ವಿಶ್ಲೇಷಿಸಿದ್ದಾರೆ.

ಮೈಸೂರಿನ ಜಗನ್ಮೋಹನ ಅರಮನೆಯ ವಸ್ತು ಸಂಗ್ರಹಾಲಯದ ಕಟ್ಟಡದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸರ್ಕಾರದ ವತಿಯಿಂದ ಆಚರಿಸುವುದು ಸಾಂಪ್ರದಾಯಿಕ ದಸರಾ ಅಲ್ಲ. ಆದರೆ ಎಲ್ಲೆಡೆ ನಾವು ಸಾಂಪ್ರದಾಯಿಕ ದಸರಾ ಆಚರಣೆ ಮಾಡುತ್ತಿದ್ದೇವೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ ಸರ್ಕಾರ ಮಾಡುವುದು ನಾಡಹಬ್ಬವಾಗಿದೆ. ಅರಮನೆಯಲ್ಲಿ ರಾಜ ಮನೆತನದಿಂದ ನಡೆಯುವ ದಸರಾ ಸಾಂಪ್ರದಾಯಿಕ ದಸರಾವಾಗಿದೆ ಎಂದು ಹೇಳಿದ ಅವರು, ದಸರಾ ಪದ ಬಳಕೆಗೆ ನಮ್ಮ ಆಕ್ಷೇಪವಿಲ್ಲ ಎಂದು ಅವರು ಹೇಳಿದರು.

ಯದುವಂಶದ ವತಿಯಿಂದ ಕಳೆದ 400 ವರ್ಷದಿಂದಲೂ ದಸರಾ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಆದರೆ ರಾಜ್ಯ ಸರ್ಕಾರ 1981ರಿಂದ ದಸರಾವನ್ನು ನಾಡಹಬ್ಬವಾಗಿ ಆಚರಿಸುತ್ತಿದೆ. ಇದರಿಂದ ಅರಮನೆಯಲ್ಲಿ ನಡೆಯುವ ಆಚರಣೆಗಳು ಸಾಂಪ್ರ ದಾಯಿಕವಾಗಿರುತ್ತವೆ ಎಂದು ಹೇಳಿದ ಅವರು, ದಸರಾ ಮಹೋತ್ಸವದ ಪೋಸ್ಟರ್‌ಗಳಲ್ಲಿ ರಾಜಮನೆತನದವರ ಭಾವಚಿತ್ರ ಇಲ್ಲದೆ ಇರುವುದಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ನಾವು ಸಂಪ್ರದಾಯದಂತೆ ನವರಾತ್ರಿಯ ವೇಳೆ ದಸರೆ ಆಚರಣೆ ಮಾಡು ತ್ತೇವೆ. ಸರ್ಕಾರ ಖಾಸಗಿಯಾಗಿ ಮಾಡುವುದ ರಿಂದ ಯದುವಂಶಸ್ಥರ ಭಾವಚಿತ್ರ ಹಾಕುವುದು, ಬಿಡುವುದು ಅವರಿಗೆ ಬಿಟ್ಟ ವಿಷಯವಾಗಿದೆ. ಭಾವಚಿತ್ರ ಹಾಕದೆ ಇರುವುದು ನಮಗೆ ಬೇಸರವೇನಿಲ್ಲ ಎಂದು ಹೇಳಿದರು.

ಅರಮನೆಯಲ್ಲಿ ದಸರಾ ಮಹೋತ್ಸವಕ್ಕಾಗಿ ಇನ್ನೂ ಸಿದ್ದತೆ ಮಾಡಿಕೊಂಡಿಲ್ಲ. ಈ ತಿಂಗಳ ಕೊನೆಯಲ್ಲಿ ಸಿದ್ದತೆ ಕಾರ್ಯ ಮಾಡಿಕೊಳ್ಳುತ್ತೇವೆ. ಖಾಸಗಿ ದರ್ಬಾರ್ ಸೇರಿದಂತೆ ಅರಮನೆಯಲ್ಲಿ ಈ ಹಿಂದೆ ನಡೆದುಕೊಂಡು ಬಂದಿರುವ ಆಚರಣೆಗಳು ನಡೆಯಲಿವೆ. ರಾಜ ಮನೆತನಕ್ಕೆ ಗೌರವಧನ ನೀಡುವ ವಿಷಯ ಖಾಸಗಿ ವಿಚಾರವಾಗಿದೆ. ಕೆಲವರು ಗೌರವ ಧನ ನೀಡುವ ಕುರಿತು ಆಕ್ಷೇಪ ಎತ್ತಿದ್ದಾರೆ. ಅವರು ಯಾರೆಂದುನಿಮಗೂ ತಿಳಿದಿದೆ, ನಮಗೂ ತಿಳಿದಿದೆ. ಕಳೆದ ವರ್ಷವೂ ಗೌರವಧನ ನೀಡದಂತೆ ಸುಪ್ರಿಂಕೋರ್ಟ್‍ವರೆಗೂ ಹೋಗಿದ್ದರು. ಆದರೆ ಎಲ್ಲಾ ನ್ಯಾಯಾಲಯಗಳಲ್ಲಿಯೂ ಗೌರವದನಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಲ್ಲಿಸಿದ್ದ ಅರ್ಜಿ ವಜಗೊಂಡಿದ್ದರೂ ಆ ವ್ಯಕ್ತಿ ಆಕ್ಷೇಪಿಸುತ್ತಲೇ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಬಗ್ಗೆ ನಾನೇನು ಪ್ರತಿಕ್ರಿಯಿಸುವುದಿಲ್ಲ ಎಂದು ತಿಳಿಸಿದರು.

ನನಗೆ ರಾಜಕೀಯ ಆಸಕ್ತಿ ಇಲ್ಲ: ನನಗೆ ರಾಜಕೀಯದ ಬಗ್ಗೆ ಆಸಕ್ತಿ ಇಲ್ಲ ಎಂದು ರಾಜಕೀಯ ಕುರಿತಂತೆ ನೀವು(ಪತ್ರಕರ್ತರು)ಕೇಳಿದಾಗಲೆಲ್ಲಾ ಹೇಳಿದ್ದೇನೆ. ಆದರೂ ನೀವು ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಜನರ ಅಪೇಕ್ಷೆಯಂತೆ ರಾಜಕಾರಣದಲ್ಲೇ ಎಲ್ಲವನ್ನೂ ಮಾಡಲಾಗದು. ಬೇರೆ ಚಟುವಟಿಕೆಗಳ ಮೂಲಕವೂ ಜನರ ಸೇವೆ ಮಾಡ ಬಹುದು ಎಂದರಲ್ಲದೆ, ಯದುವೀರ್ ಅವರು ರಾಜಕೀಯ ಪ್ರವೇಶ ಮಾಡುವುದು ಅವರಿಗೆ ಬಿಟ್ಟ ವಿಚಾರ. ಅದು ಅವರ ವೈಯುಕ್ತಿಕ ನಿಲುವಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಶಾ ಭೇಟಿ ಮಾಡಿದ್ದರ ಬಗ್ಗೆ ಕೇಳಿದ್ದಕ್ಕೆ ಅಮಿತ್‍ಶಾ ಒಬ್ಬರೇ ಭೇಟಿ ನೀಡಿಲ್ಲ. ಅದಕ್ಕಿಂತಲೂ ಮೊದಲು ಅನೇಕ ನಾಯಕರು ಭೇಟಿ ಮಾಡಿದ್ದಾರೆ. ಅಮಿತ್‍ಶಾ ಒಬ್ಬರನ್ನೇ ಯಾಕೇ ಕೇಳುತ್ತೀರಾ? ಎಂದು ಮರು ಪ್ರಶ್ನಿಸಿದರು.

Translate »