ಸರ್ಕಾರ ಉಳಿಸ್ಕೋತ್ತೀರ? ಚುನಾವಣೆಗೆ ಹೋಗೋಣ್ವ
ಮೈಸೂರು

ಸರ್ಕಾರ ಉಳಿಸ್ಕೋತ್ತೀರ? ಚುನಾವಣೆಗೆ ಹೋಗೋಣ್ವ

September 17, 2018

ಬೆಂಗಳೂರು:  ಬಿಜೆಪಿಯವರು ಆಪರೇಷನ್ ಕಮಲ ಮಾಡಿ ತೊಂದರೆ ಕೊಡುವುದಕ್ಕಿಂತಲೂ ಹೆಚ್ಚಾಗಿ ಕಾಂಗ್ರೆಸ್‍ನವರು ಒಳಗೊಳಗೆ ನಡೆಸುತ್ತಿರುವ ಕುತಂತ್ರಗಳೇ ದೊಡ್ಡ ಸಮಸ್ಯೆಯಾಗಿದೆ… ನೀವು ಸರ್ಕಾರ ಉಳಿಸಿಕೊಳ್ಳು ತ್ತೀರಾ? ಇಲ್ಲಾ ನಾನೇ ಸರ್ಕಾರ ಬಿಟ್ಟು ಹೋಗಬೇಕಾ… ಚುನಾವಣೆಗೆ ಹೋಗ್ಬೇಕಾ? ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಬಳಿ ಕಿಡಿಕಾರಿದರು ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.

ಜಾರಕಿಹೊಳಿ ಸಹೋದರರ ಬಂಡಾಯದಿಂದಾಗಿ ಮೈತ್ರಿ ಸರ್ಕಾರ ಉರುಳುತ್ತದೆ ಎಂಬ ಸುದ್ದಿಗಳ ಹಿನ್ನೆಲೆಯಲ್ಲಿ ಕಳೆದ ರಾತ್ರಿ ವಿದೇಶದಿಂದ ವಾಪಸ್ಸಾದ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಬೆಂಗಳೂರಿಗೆ ಆಗಮಿಸಿದ್ದ ಕೆ.ಸಿ.ವೇಣುಗೋಪಾಲ್ ಅವರನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ ಮಾಡಿ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‍ನಲ್ಲಿನ ಆಂತರಿಕ ಭಿನ್ನಮತದಿಂದಾಗಿ ಸರ್ಕಾರದ ಅಸ್ಥಿರತೆಯ ವದಂತಿಗಳು ಹೆಚ್ಚಾಗುತ್ತಿವೆ. ಇದರಿಂದಾಗಿ ಆಡಳಿತದ ಮೇಲೂ ಅಡ್ಡ ಪರಿಣಾಮ ಉಂಟಾಗುತ್ತದೆ. ಉತ್ತಮ ಆಡಳಿತ ನೀಡಬೇಕೆಂಬ ಉದ್ದೇಶದಿಂದ ಮೈತ್ರಿ ಸರ್ಕಾರ ರಚಿಸಲಾಗಿದೆ. ಆದರೆ ಕಾಂಗ್ರೆಸ್‍ನಲ್ಲಿನ ಗೊಂದಲದಿಂದಾಗಿ ಯಾವುದೇ ಪ್ರಮುಖ ನಿರ್ಣಯಗಳನ್ನು ತೆಗೆದು ಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾದರೆ ನಾವು ರಾಜ್ಯದ ಜನರ ವಿಶ್ವಾಸ ಕಳೆದುಕೊಳ್ಳಬೇಕಾಗುತ್ತದೆ. ಜೆಡಿಎಸ್ ನಲ್ಲಂತೂ ಯಾವುದೇ ಅಸಮಾಧಾನವಿಲ್ಲ.

ಆದರೆ ಕಾಂಗ್ರೆಸ್ ಶಾಸಕರು ದಿನೇ ದಿನೆ ಒಂದೊಂದು ರೀತಿಯ ಗೊಂದಲ ಸೂಚಿಸುತ್ತಿದ್ದಾರೆ. ಎಂ.ಬಿ.ಪಾಟೀಲ್ ಮನೆಯಲ್ಲೂ ಈ ಹಿಂದೆ ಭಿನ್ನಮತೀಯ ಚಟುವಟಿಕೆಗಳು ನಡೆದಿತ್ತು. ಈಗ ಜಾರಕಿಹೊಳಿ ಸಹೋದರರು ಗೊಂದಲ ಸೃಷ್ಟಿಸುತ್ತಿದ್ದಾರೆ. ಇದರ ಹಿಂದೆ ಕಾಂಗ್ರೆಸ್ ನಾಯಕರೇ ಇದ್ದಾರೆ ಎಂಬ ಮಾಹಿತಿ ಇದೆ. ಈ ರೀತಿಯ ತೆರೆ ಮರೆಯ ಆಟಗಳು ಬೇಡ. ಇಷ್ಟವಿದ್ದರೆ ಸರ್ಕಾರ ನಡೆಸೋಣ. ಇಲ್ಲವಾದರೆ ನೇರವಾಗಿ ಹೇಳಿಬಿಡಿ. ಬಲವಂತವಾಗಿ ಸರ್ಕಾರ ಉಳಿಸಿಕೊಳ್ಳುವ ಅಗತ್ಯ ನಮಗೂ ಇಲ್ಲ. ಬೇಕಾದರೆ ನಾನು ಸರ್ಕಾರದಿಂದ ಹೊರ ಹೋಗುತ್ತೇನೆ. ಮತ್ತೆ ಚುನಾವಣೆಗೆ ಹೋಗೋಣ ಎಂದು ವೇಣುಗೋಪಾಲ್ ಬಳಿ
ಕುಮಾರಸ್ವಾಮಿ ಖಡಕ್ಕಾಗಿಯೇ ಹೇಳಿದರು ಎನ್ನಲಾಗಿದೆ.

ಕುಮಾರಸ್ವಾಮಿಯವರ ಮಾತುಗಳಿಗೆ ಬಹುತೇಕ ಸಹಮತ ವ್ಯಕ್ತಪಡಿಸಿದ ವೇಣುಗೋಪಾಲ್, ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆಯಾಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದರೆಂದು ತಿಳಿದು ಬಂದಿದೆ. ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕಾತಿ, ಅಧಿಕಾರಿಗಳ ವರ್ಗಾವಣೆ ಕುರಿತು ಸಹ ಚರ್ಚೆಗಳು ನಡೆದಿವೆ. ಬಿಜೆಪಿಯ ಆಪರೇಷನ್ ಕಮಲ ಹಿಂದೆ ಯಾರೆಲ್ಲಾ ಇದ್ದಾರೆ. ಕಾಂಗ್ರೆಸ್ ನಾಯಕರ ಜೊತೆ ಬಿಜೆಪಿ ನಾಯಕರು ಯಾವ್ಯಾವ ಹಂತದಲ್ಲಿ ಮಾತುಕತೆ ನಡೆಸಿದ್ದಾರೆ ಎಂಬುದರ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿಯವರು ವೇಣುಗೋಪಾಲ್ ಅವರಿಗೆ ವಿವರಿಸಿದರು ಎಂದು ಹೇಳಲಾಗಿದೆ.

Translate »