ಆಪರೇಷನ್ ಕಮಲ ಮಾಡುವುದಿಲ್ಲ… ಕಾಂಗ್ರೆಸ್ ಗೊಂದಲಕ್ಕೂ ನಮಗೂ ಸಂಬಂಧವಿಲ್ಲ
ಮೈಸೂರು

ಆಪರೇಷನ್ ಕಮಲ ಮಾಡುವುದಿಲ್ಲ… ಕಾಂಗ್ರೆಸ್ ಗೊಂದಲಕ್ಕೂ ನಮಗೂ ಸಂಬಂಧವಿಲ್ಲ

September 17, 2018

ಅರಸೀಕೆರೆ: ನಾವು ಆಪರೇಷನ್ ಕಮಲಕ್ಕೆ ಕೈಹಾಕುವು ದಿಲ್ಲ. ಕಾಂಗ್ರೆಸ್‍ನಲ್ಲಿನ ಗೊಂದಲಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಅರಸೀಕೆರೆಯ ಕಲ್ಯಾಣ ಮಂಟಪವೊಂದರಲ್ಲಿ ನಡೆದ ಆರತಕ್ಷತೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿಯಲ್ಲಿ 104 ಶಾಸಕರಿದ್ದೇವೆ. ಪ್ರತಿಪಕ್ಷವಾಗಿ ಒಳ್ಳೆಯ ರೀತಿ ಕೆಲಸ ಮಾಡಿಕೊಂಡು ಹೋಗಬೇಕೆಂದು ನಿರ್ಧರಿಸಿದ್ದೇವೆ. ಆದರೆ ರಾಜ್ಯ ಸರ್ಕಾರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಸಮನ್ವಯತೆ ಇಲ್ಲ. ಕಾಂಗ್ರೆಸ್‍ನಲ್ಲಿ ಒಳ ಜಗಳಗಳು ನಡೆಯುತ್ತಿವೆ. ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿದರು. ಸರ್ಕಾರದಲ್ಲಿನ ಗೊಂದಲದಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಇದರಿಂದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಪ್ರತಿಪಕ್ಷವಾದ ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಅವರು ಇಂತಹ ವರ್ತನೆಯನ್ನು ಬಿಟ್ಟು ಅಭಿವೃದ್ಧಿ ಕೆಲಸಗಳತ್ತ ಗಮನ ಹರಿಸಲಿ ಎಂದರು.

ರಿಯಲ್ ಎಸ್ಟೇಟ್ ಕುಳಗಳು, ಬಡ್ಡಿ ದಂಧೆಕೋರರನ್ನು ಬಳಸಿಕೊಂಡು ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿಗಳು ಬೇಜವಾಬ್ದಾರಿ ಆರೋಪ ಮಾಡಿದ್ದಾರೆ. ರಾಜ್ಯದ ಇಡೀ ಆಡಳಿತವೇ ಅವರ ಕೈಯಲ್ಲಿದೆ. ಹಾಗಿರುವಾಗ ಬಡ್ಡಿ ದಂಧೆಕೋರರು, ಮುಂತಾದವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ ಎಂಬುದಕ್ಕೆ ಅವರೇ ಉತ್ತರಿಸಬೇಕು. ಅದನ್ನು ಬಿಟ್ಟು ಬಿಜೆಪಿ ವಿರುದ್ಧ ಇಲ್ಲ-ಸಲ್ಲದ ಆರೋಪ ಮಾಡದೇ ಅಭಿವೃದ್ಧಿ ಕೆಲಸಗಳತ್ತ ಗಮನ ಹರಿಸಲಿ ಎಂದು ಟಾಂಗ್ ನೀಡಿದರು.

ರಾಜ್ಯದಲ್ಲಿ ಬಹಳಷ್ಟು ಜಿಲ್ಲೆಗಳು ಅತಿವೃಷ್ಟಿ ಮತ್ತು ಅನಾವೃಷ್ಟಿ ಯಿಂದ ತತ್ತರಿಸಿವೆ. ಆ ಜಿಲ್ಲೆಗಳ ಕಡೆ ಗಮನ ಹರಿಸದೇ ಮುಖ್ಯಮಂತ್ರಿಗಳು ಬೇಜವಾಬ್ದಾರಿ ಹೇಳಿಕೆಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಬಿಜೆಪಿ ಈ ಸರ್ಕಾರವನ್ನು ಉರುಳಿಸುವ ಪ್ರಯತ್ನ ಮಾಡುವುದಿಲ್ಲ. ನಾವು ಎಂದೂ ಸರ್ಕಾರ ಪತನಕ್ಕೆ ಜಪ ಮಾಡುವುದಿಲ್ಲ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳು ಅವರ ಜೆಡಿಎಸ್ ಪಕ್ಷವನ್ನು ಉಳಿಸಿಕೊಂಡು ಮೈತ್ರಿ ಪಕ್ಷದ ಜೊತೆ ಉತ್ತಮ ಬಾಂಧವ್ಯವಿಟ್ಟುಕೊಂಡು ಒಳ್ಳೆಯ ಆಡಳಿತ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.

ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರ ಸರ್ಕಾರ 1500 ಕೋಟಿ ಬಿಡುಗಡೆ ಮಾಡಿದೆ. ಆದರೆ ಖರ್ಚು ಮಾಡಿರುವುದು ಕೇವಲ 40 ಕೋಟಿ. ರಾಜ್ಯದಲ್ಲಿ ನೀರಾವರಿ ಯೋಜನೆಗಳು ಸ್ಥಗಿತಗೊಂಡಿದೆ. ಜನ ಹಿತ ಮತ್ತು ರೈತರ ಹಿತವನ್ನು ರಾಜ್ಯ ಸರ್ಕಾರ ಸಂಪೂರ್ಣವಾಗಿ ಮರೆತಿದೆ. ಸಾಲ ಮನ್ನಾ ಮಾಡಿರುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಆದರೆ ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ರೈತರಿಗೆ ನೋಟೀಸ್ ಕೊಡಲಾಗುತ್ತಿದೆ. ಸಹಕಾರಿ ಕ್ಷೇತ್ರಕ್ಕೆ ಸರ್ಕಾರದಿಂದ ಹಣ ಪಾವತಿ ಮಾಡದ ಕಾರಣ ಅವು ದಿವಾಳಿ ಸ್ಥಿತಿಗೆ ಬಂದಿವೆ. ಮುಖ್ಯಮಂತ್ರಿಗಳು ಸುಳ್ಳು ಭರವಸೆಗಳನ್ನು ನೀಡಿ ಓಡಾಡುತ್ತಿದ್ದಾರೆ. ಮೈತ್ರಿ ಸರ್ಕಾರ ಕೇವಲ ವರ್ಗಾವಣೆ ದಂಧೆಗೆ ಸೀಮಿತವಾಗಿದೆ ಎಂದು ಯಡಿಯೂರಪ್ಪ ಕಿಡಿಕಾರಿದರು.

Translate »