ಬೇಲೂರು: ಹೆದ್ದಾರಿಯ ಪಕ್ಕದಲ್ಲಿ ಹಾದು ಹೋಗಿರುವ ವಿದ್ಯುತ್ ಸರಬರಾಜು ತಂತಿಗಳ ಮೇಲೆ ರಸ್ತೆಬದಿಯ ಭಾರೀ ಗಾತ್ರದ ಮರಗಳ ಕೊಂಬೆಗಳು ಬಾಗಿದ್ದು, ಕೂಡಲೇ ತೆರವುಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪಟ್ಟಣದ ಮಿನಿವಿಧಾನಸೌಧ ಮುಂಭಾಗದ ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ಬದಿ ವಿದ್ಯುತ್ ತಂತಿ ಮಾರ್ಗ ಹಾದುಹೋಗಿದ್ದು, ಮರದ ಕೊಂಬೆಗಳು ವಿದ್ಯುತ್ ತಂತಿಗಳ ಮೇಲೆ ಹಾಗೂ ಸಮೀಪ ಬಾಗಿದ್ದು, ಅಪಾಯಕ್ಕೆ ಕಾದು ನಿಂತತಿದೆ.
ಹಾಸನದಿಂದ ಚಿಕ್ಕಮಗಳೂರಿಗೆ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಜೊತೆಗೆ ಮಿನಿ ವಿಧಾನಸೌಧದ ಕೆಲಸಕ್ಕಾಗಿ ಆಗಮಿಸುವ ರೈತರು, ಇನ್ನಿತರರು ತಮ್ಮ ವಾಹನಗಳಿಗೆ ನೆರಳಿಗಾಗಿ ಈ ಮರಗಳನ್ನೇ ಆಶ್ರಯಿಸಿದ್ದಾರೆ. ಅಲ್ಲದೆ ಹಣ್ಣುಗಳ ವ್ಯಾಪಾರಸ್ಥರು, ಕಾಫಿ, ಟೀ ವ್ಯಾಪಾರಿಗಳು ಮರಗಳ ಕೆಳಗೆ ವ್ಯಾಪಾರ ನಡೆಸುತ್ತಾರೆ. ವಿದ್ಯುತ್ ತಂತಿ ಮೇಲೆ ಮರಗಳ ಕೊಂಬೆಗಳು ಬಿದ್ದು, ಅವಘಡ ಸಂಭವಿಸಿದರೆ ಹೊಣೆ ಯಾರು ಎನ್ನುವ ಪ್ರಶ್ನೆ ನಾಗರಿಕರದ್ದಾಗಿದ್ದು, ಕೂಡಲೇ ವಿದ್ಯುತ್ ತಂತಿ ಹಾದು ಹೋಗಿರುವ ಕೊಂಬೆಗಳನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.