ಬೇಲೂರಲ್ಲಿ ಮೊಮ್ಮಗ ಪ್ರಜ್ವಲ್ ಪರ ತಾತ ಹೆಚ್.ಡಿ.ದೇವೇಗೌಡರ ಪ್ರಚಾರ
ಮೈಸೂರು

ಬೇಲೂರಲ್ಲಿ ಮೊಮ್ಮಗ ಪ್ರಜ್ವಲ್ ಪರ ತಾತ ಹೆಚ್.ಡಿ.ದೇವೇಗೌಡರ ಪ್ರಚಾರ

April 3, 2019

ಬೇಲೂರು: ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಮೊಮ್ಮಗ ಪ್ರಜ್ವಲ್ ರೇವಣ್ಣ ಅವರ ಪರ ಮಂಗಳವಾರ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಬಿರುಸಿನ ಪ್ರಚಾರ ನಡೆಸಿದರು.

ಪಟ್ಟಣದ ಚೆನ್ನಕೇಶವಸ್ವಾಮಿ ದೇವಾ ಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಪ್ರಚಾರವನ್ನು ಆರಂಭಿಸಿದ ಅವರು, ಸುಡು ಬಿಸಿಲನ್ನು ಲೆಕ್ಕಿಸದೆ ತಾಲೂಕಿನ ಹಗರೆ, ಇಬ್ಬೀಡು, ಅರೇಹಳ್ಳಿ, ಗೆಂಡೆಹಳ್ಳಿ, ಚಿಕನ ಹಳ್ಳಿ, ಸನ್ಯಾಸಿಹಳ್ಳಿ, ಬಿಕ್ಕೋಡು ಗ್ರಾಮ ಸೇರಿದಂತೆ ವಿವಿಧೆಡೆ ಪ್ರಜ್ವಲ್ ಪರ ಮತ ಯಾಚಿಸಿದರು. ಗೆಂಡೆಹಳ್ಳಿ, ಚಿಕನಹಳ್ಳಿ, ಸನ್ಯಾಸಿಹಳ್ಳಿ ಗ್ರಾಮದಲ್ಲಿ ಪಕ್ಷದ ಕಾರ್ಯ ಕರ್ತರ ಸಭೆ ನಡೆಸಿ, ಪ್ರಜ್ವಲ್ ರೇವಣ್ಣ ಅವರ ಗೆಲುವಿಗೆ ಎಲ್ಲರೂ ಸಂಘಟಿತರಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಪ್ರಚಾರದ ವೇಳೆ ಮಾತನಾಡಿದ ದೇವೇ ಗೌಡರು, ಈ ಬಾರಿ ಹಾಸನದಿಂದ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿ ಸೂಕ್ತ ಅಭ್ಯರ್ಥಿಗಾಗಿ ಶಾಸಕರು, ಮುಖಂಡರ ಜೊತೆ ಚರ್ಚಿಸಿದಾಗ ಎಲ್ಲರೂ ಪ್ರಜ್ವಲ್ ಅವರ ಹೆಸರನ್ನು ಸೂಚಿಸಿ ಅವರೇ ಸೂಕ್ತ ಅಭ್ಯರ್ಥಿ ಎಂದು ಆಯ್ಕೆ ಮಾಡಿದರು. ಅವರ ಆಯ್ಕೆಯನ್ನು ಪ್ರಶ್ನಿಸದೇ ನಾನು ಒಪ್ಪಿಕೊಂಡಿದ್ದೇನೆ. ಪ್ರಜ್ವಲ್ ಉತ್ತಮ ಕೆಲಸಗಾರ. ಜನರ ಸೇವೆಯೇ ಅವನ ಕನಸಾಗಿದೆ. ಅವನಿಗೆ ಕ್ಷೇತ್ರದ ಜನರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ವರಿಷ್ಠರ ಇಚ್ಛೆಯಂತೆ ಹೆಚ್‍ಡಿಕೆ ಸಿಎಂ: 2018ರಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ 37ಸ್ಥಾನ ಪಡೆಯಿತು. ನಾವು ಯಾರೂ ಅಧಿಕಾರಕ್ಕಾಗಿ ಬೇರೆಯವರನ್ನು ಕೇಳಲಿಲ್ಲ. ಆದರೆ, ಕಾಂಗ್ರೆಸ್‍ನ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್‍ಗಾಂಧಿ ಅವರು ಕೋಮುವಾದಿ ಬಿಜೆಪಿಯನ್ನು ದೂರವಿಡಲು ಕುಮಾರಸ್ವಾಮಿ ಅವರನ್ನು ಕರೆದು ಬೆಂಬಲ ನೀಡಲು ಮುಂದಾದರು. ನಮಗೆ ಮುಖ್ಯಮಂತ್ರಿ ಸ್ಥಾನ ಬೇಡ ಎಂದು ಹೇಳಿದರೂ ಬಿಡದೇ ಮುಖ್ಯಮಂತ್ರಿ ಸ್ಥಾನವನ್ನು ಕೊಟ್ಟರು. ಇದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರೂ ಕೈ ಜೋಡಿಸಿದರು ಎಂದರು. ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಸ್.ಪೂರ್ಣೇಶ್ ಮಾತನಾಡಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಬಗ್ಗೆ ಎಲ್ಲರಿಗೂ ಅಪಾರ ಗೌರವವಿದೆ. ಮೈತ್ರಿಧರ್ಮ ಪಾಲನೆಯಂತೆ ರಾಜ್ಯದಲ್ಲಿ 2 ಪಕ್ಷಗಳು ಪರಸ್ವರ ಸಹಕಾರ ನೀಡುತ್ತಿದ್ದಾರೆ. ಅದರಂತೆ ಹಾಸನ ಜಿಲ್ಲೆಯಲ್ಲೂ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ಬೆಂಬಲಿಸಲಾಗುತ್ತಿದೆ. ಅಧಿಕಾರದ ಆಸೆಗಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಎ.ಮಂಜುಗೆ ಮಾತನಾಡುವ ಹಕ್ಕಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಪಶುಸಂಗೋಪನಾ ಸಚಿವರಾಗಿ ಪಶುಗಳ ಆಹಾರವನ್ನೆಲ್ಲಾ ತಿಂದು ತೇಗಿ ಈಗ ಮತ್ತಷ್ಟು ತಿನ್ನಲು ಬಿಜೆಪಿಯನ್ನು ಹುಡುಕಿಕೊಂಡು ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು. ಈ ಸಂದರ್ಭದಲ್ಲಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ಶಾಸಕ ಕೆ.ಎಸ್.ಲಿಂಗೇಶ್, ತಾಲೂಕು ಅಧ್ಯಕ್ಷ ತೊ.ಚ.ಅನಂತ ಸುಬ್ಬರಾಯ, ವೈ.ಎನ್.ಕೃಷ್ಣೇಗೌಡ, ಮುಖಂಡರಾದ ಎಂ.ಎ.ನಾಗರಾಜು, ಸಿ.ಎಸ್.ಪ್ರಕಾಶ್, ಚಂದ್ರೇಗೌಡ, ಅಶ್ವಥ್‍ಕುಮಾರ್ ಇತರರಿದ್ದರು.

Translate »