ಹೈವೋಲ್ಟೇಜ್ ಕಣ ಮಂಡ್ಯದಲ್ಲಿ ಜೋಡೆತ್ತು ಸಂಚಾರ-ಸಂಚಲನ
ಮೈಸೂರು

ಹೈವೋಲ್ಟೇಜ್ ಕಣ ಮಂಡ್ಯದಲ್ಲಿ ಜೋಡೆತ್ತು ಸಂಚಾರ-ಸಂಚಲನ

April 3, 2019

ಮಂಡ್ಯ: ಭಾರೀ ಹೈವೋಲ್ಟೇಜ್ ಕಣವೆಂದೇ ಬಿಂಬಿತವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಯಾಂಡಲ್‍ವುಡ್ ಸ್ಟಾರ್‍ಗಳಾದ ದರ್ಶನ್ ಮತ್ತು ಯಶ್ ಜೋಡಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಮಂಗಳವಾರ ಭರ್ಜರಿ ರೋಡ್ ಶೋ ನಡೆಸಿತು.

ಮಂಡ್ಯ ಚುನಾವಣಾ ಕಣದ ಜೋಡೆತ್ತುಗಳೆಂದೇ ಹೆಸರಾಗಿರುವ ದರ್ಶನ್ ಮತ್ತು ಯಶ್ ಜೋಡಿ ಮಂಡ್ಯ ಜಿಲ್ಲೆಯ ವಿವಿಧೆಡೆ ಪ್ರತ್ಯೇಕವಾಗಿ ಪ್ರಚಾರ ನಡೆಸುವ ಮೂಲಕ ಸುಮಲತಾ ಅಂಬರೀಶ್ ಅವರ ಪರ ಪ್ರಚಾರ `ರಣಕಹಳೆ’ ಮೊಳಗಿಸಿದರು.

ಮಂಗಳವಾರ ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕೊತ್ತತ್ತಿ ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 24ಕ್ಕೂ ಹೆಚ್ಚು ಹಳ್ಳಿಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ರೋಡ್ ಶೋ ನಡೆಸಿದರೆ, ಮಂಡ್ಯ ನಗರದ 30ಕ್ಕೂ ಹೆಚ್ಚು ಬಡಾವಣೆಗಳು ಮತ್ತು ವೃತ್ತಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹಿರಂಗ ಪ್ರಚಾರ ನಡೆಸಿದರು.

`ಅಣ್ತಮ್ಮಾಸ್’ ರಣಕಹಳೆ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪರ ಮಂಗಳವಾರ ಪ್ರಚಾರ ಆರಂಭಿಸಿದ ರಾಕಿಂಗ್ ಸ್ಟಾರ್ ಯಶ್ ಮೊದಲಿಗೆ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕೊತ್ತತ್ತಿ ಹೋಬಳಿಯ ಉರಮಾರ ಕಸಲಗೆರೆ
ಗ್ರಾಮದ ದೇವಾಲಯದ ಆವರಣದಲ್ಲಿ `ಕಹಳೆ’ ಮೊಳಗಿಸಿದರು.

`ಅಣ್ತಮ್ಮಾಸ್’ ಎಂದೇ ಮಾತು ಶುರು ಮಾಡಿದ ಯಶ್‍ಗೆ ನೆರೆದಿದ್ದ ಅಪಾರ ಅಭಿಮಾನಿಗಳು ಹರ್ಷೋದ್ಘಾರ ವ್ಯಕ್ತಪಡಿಸಿದರು. ಸಿಳ್ಳೆ, ಯಶ್ ಮತ್ತು ಸುಮಲತಾ ಅಂಬರೀಶ್ ಪರ ಜೈಕಾರ ಕೇಳಿಬಂದಿತು.

ಅಂಬರೀಶ್ ಅಣ್ಣ ನಮಗೆಲ್ಲ ಬಹಳ ಮುಖ್ಯವಾದ ವ್ಯಕ್ತಿ. ನನ್ನನ್ನೂ ಸೇರಿದಂತೆ ಹಲವರಿಗೆ ಬೇಕಾದಷ್ಟು ಸಹಾಯ ಮಾಡಿದ್ದಾರೆ. ಅದನ್ನು ನೆನಪಿಸಿಕೊಂಡು ನಾನು ಇಂದು ಚುನಾವಣೆ ಪ್ರಚಾರಕ್ಕೆ ಬಂದಿದ್ದೇನೆ. ನಾನು ಇವತ್ತು ಏನೇ ಆಗಿದ್ದರೂ ನನ್ನ ಕಷ್ಟ ಕಾಲದಲ್ಲಿ ಕೈಹಿಡಿದ ಅವರನ್ನು ನೆನೆಸಿಕೊಳ್ಳೋದು ನಮ್ಮ ಕರ್ತವ್ಯ ಎಂದು ಯಶ್ ಹೇಳಿದರು

ನಿಮ್ಮೂರ ಸೊಸೆ: ಯಾವುದೇ ಹೆಣ್ಣಾಗಲಿ ಮದುವೆ ಮಾಡಿಕೊಟ್ಟ ಮೇಲೆ ಆ ಹೆಣ್ಣು ಗಂಡನ ಮನೆಯವರಾಗ್ತಾರೆ. ಆದರೂ ಕೆಲವರು ಅಲ್ಲಿಯವರು, ಇಲ್ಲಿಯವರು ಅಂತಾರೆ. ಇವತ್ತು ಸುಮಲತಾ ಅವರ ಬಗ್ಗೆಯೂ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಇದೆಲ್ಲ ರಾಜಕೀಯ. ಹೆಣ್ಣು ಮಗಳು ಜೀವನದಲ್ಲಿ ತುಂಬಾ ತ್ಯಾಗ ಮಾಡಿರುತ್ತಾರೆ. ಅವರು ಹುಟ್ಟಿದ ಮನೆಯಲ್ಲಿ ಎಲ್ಲ ರೀತಿಯ ಕೆಲಸ, ಸೇವೆ ಮಾಡಿರುತ್ತಾರೆ. ಮದುವೆಯಾದ ಮೇಲೆ ಪತಿಯ ಮನೆಯಲ್ಲೂ ದುಡಿಯುತ್ತಾರೆ. ಅವರ ಗೌರವವನ್ನು ಕಾಪಾಡಿಕೊಂಡು ಹೋಗುತ್ತಾರೆ. ಆದರೆ ಅಂತಹವರನ್ನು ಈಗ ಮಂಡ್ಯಕ್ಕೆ ಸೇರದವರಲ್ಲ ಎಂದರೆ ನ್ಯಾಯವೆ? ಸುಮಲತಾ ಅವರು ನಿಮ್ಮೂರಿನ ಸೊಸೆ. ಅಂಬರೀಶ್ ಅವರು ಇಲ್ಲಾ ಅಂತಾ ಹೀಗೆಲ್ಲ ಮಾತನಾಡೋದು ಸರಿಯೇ? ಎಂದು ನೆರೆದಿದ್ದ ಅಭಿಮಾನಿಗಳನ್ನು ನಟ ಯಶ್ ಪ್ರಶ್ನಿಸಿದರು.

ಒಂದು ಅವಕಾಶ ಕೊಡಿ: ಯಾವುದೇ ಹೆಣ್ಣು ಮಗಳು ಮುಂದೆ ಹೆಜ್ಜೆಯಿಟ್ಟರೆ ಅವರನ್ನು ಹೊಸಕಿ ಹಾಕಲು ನೋಡಬಾರದು. ಅವರಿಗೂ ಬೆಳೆಯಲು ಅವಕಾಶ ಕೊಡಬೇಕು. ಮಂಡ್ಯ ಜನತೆ ರಾಜಕಾರಣಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಮಹಾನ್ ಮುಖಂಡರನ್ನು ಕೊಟ್ಟಿದ್ದಾರೆ. ಈ ಬಾರಿ ಸುಮಲತಾ ಅವರನ್ನು ಗೆಲ್ಲಿಸುವ ಮೂಲಕ ಇದೊಂದು ಕೊಡುಗೆ ನೀಡಿ. ನೀವು ತುಂಬಾ ಜನರಿಗೆ ಅವಕಾಶ ಕೊಟ್ಟಿದ್ದೀರಿ. ಹೀಗಾಗಿ ಸುಮಾ ಅಮ್ಮಾವರಿಗೂ ಒಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು.

ಅಂಬರೀಶ್ ಅವರದ್ದು ನಾಟಕದ ಪ್ರೀತಿಯಲ್ಲ. ಮಂಡ್ಯ ಅಂದ್ರೆ ಅಂಬರೀಶಣ್ಣಂಗೆ ಅತೀ ಹೆಚ್ಚು ಪ್ರೀತಿ ಇತ್ತು. ಈಗ ಅಣ್ಣನ ಹೆಸರು ಉಳಿಸುವುದಕ್ಕೆ ಅವರ ಪತ್ನಿ ನಿಮ್ಮ ಮುಂದೆ ಬಂದಿದ್ದಾರೆ. ಇದು ಮಂಡ್ಯದ ಸ್ವಾಭಿಮಾನದ ಪ್ರಶ್ನೆ. ಇವತ್ತು ಕಣದಲ್ಲಿರುವ ಪ್ರತಿಸ್ಪರ್ಧಿಗಳು ಗೊಂದಲ ಸೃಷ್ಟಿಸಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಮಂಡ್ಯದ ಜನ ಗೊಂದಲಕ್ಕೀಡಾಗುವಷ್ಟು ದಡ್ಡರಲ್ಲ. ಕ್ರಮ ಸಂಖ್ಯೆ 20, `ಕಹಳೆ ಹಿಡಿದ ರೈತ’ನ ಗುರುತು ನೋಡಿಕೊಂಡು ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದರು.

ಉರಮಾರ ಕಸಲಗೆರೆ, ಕೊತ್ತತ್ತಿ, ಬೇವಿನಹಳ್ಳಿ, ಇಂಡುವಾಳು, ಕೊಡಿಯಾಲ, ಅರಕೆರೆ, ಕೆ.ಶೆಟ್ಟಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ರಾಜಾಹುಲಿ ಘರ್ಜಿಸಿತು. `ಕೆಜಿಎಫ್’ ಖ್ಯಾತಿಯ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು, ಮಹಿಳೆಯರು, ಯುವಕರು, ಯುವತಿಯರು, ಮಕ್ಕಳು ಅಪಾರ ಸಂಖ್ಯೆಯಲ್ಲಿ ಅಗಮಿಸಿದ್ದರು. `ರಾಕಿಂಗ್ ಸ್ಟಾರ್’ ಕಡೆಗೆ ಕೈ ಬೀಸಿ ಅಭಿಮಾನ ವ್ಯಕ್ತಪಡಿಸುತ್ತಿದ್ದುದು ಕಂಡು ಬಂತು. ಯಶ್ ಕೂಡ ಅಭಿಮಾನಿಗಳಿಗೆ ಕೈ ಮುಗಿಯತ್ತಾ ಸುಮಲತಾ ಅವರ ಚಿಹ್ನೆ ಕಹಳೆ ಗುರುತಿಗೆ ಮತದಾನ ಮಾಡುವಂತೆ ಮನವಿ ಮಾಡುತ್ತಾ ಸಾಗಿದರು. ಮಾರ್ಗದುದ್ದಕ್ಕೂ ನೆಚ್ಚಿನ ನಟನಿಗೆ ಹಾರ ತುರಾಯಿ ಹಾಕುತ್ತಿದ್ದ ಅಭಿಮಾನಿಗಳು, ಸುಮಲತಾ, ಅಂಬರೀಶ್, ಯಶ್ ಪರ ಜೈಕಾರ ಮೊಳಗಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಯುವಕರು ನೂರಾರು ಬೈಕ್‍ಗಳಲ್ಲಿ ರ್ಯಾಲಿ ನಡೆಸುತ್ತಾ ಮೆರವಣಿಗೆ ಜತೆಗೇ ಸಾಗಿದರು.

ಮರದ ಕೆಳಗೆ ಊಟ: ಬಿರುಬಿಸಿಲಿನಲ್ಲೇ ಮತಪ್ರಚಾರ ನಡೆಸಿದ ಯಶ್, ಮಧ್ಯಾಹ್ನದ ಊಟವನ್ನು ಮಾರ್ಗ ಮಧ್ಯೆ ಮರದ ನೆರಳಿನಲ್ಲೇ ಸೇವಿಸಿದರು. ಕೆಪಿಸಿಸಿ ಸದಸ್ಯರಾಗಿದ್ದ (ಈಗ ಉಚ್ಛಾಟಿತ) ಇಂಡುವಾಳು ಸಚ್ಚಿದಾನಂದ, ಶೆಟ್ಟಹಳ್ಳಿ ಲಿಂಗರಾಜು, ಉರಮಾರಕಸಲಗೆರೆ ನಾಗರಾಜು ಮತ್ತಿತರರು ನಟ ಯಶ್ ಪ್ರಚಾರದ ವೇಳೆ ಜತೆಗಿದ್ದರು.

ಬೀದಿ ಬೀದಿಯಲ್ಲಿ `ಸುಂಟರಗಾಳಿ’: ಸುಮಲತಾ ಅವರು ನಾಮಪತ್ರ ಸಲ್ಲಿಕೆ ದಿನ ನಡೆದ ಕಾರ್ಯಕ್ರಮದಲ್ಲಿ ಕೊಟ್ಟ ಮಾತಿನಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸೋಮವಾರದಿಂದ ಜಿಲ್ಲೆಯಾದ್ಯಂತ ಪ್ರಚಾರ ಆರಂಭಿಸಿದ್ದು, ಮಂಗಳವಾರ ಮಂಡ್ಯ ನಗರವಿಡೀ ಸುತ್ತಾಡಿ ಮತ ಯಾಚಿಸಿದರು. ಎತ್ತಿನ ಗಾಡಿ ಏರಿ ಮೆರವಣಿಗೆ ಮಾಡುವ ಮೂಲಕ ಮತಬೇಟೆ ನಡೆಸಿದರು. ಸಕ್ಕರೆ ನಗರಿಯ ಪ್ರತಿ ಬೀದಿಗೂ ನುಗ್ಗಿದ `ಸುಂಟರಗಾಳಿ’ ಅಭಿಮಾನ ಮತದಾರರ ಮನದಲ್ಲಿ `ಕ್ರಮಸಂಖ್ಯೆ 20, ಕಹಳೆ ಊದುವ ರೈತನ ಗುರುತು ಮರೆಯದಿರಿ. ಏ.18ರಂದು ಮತದಾನ ತಪ್ಪದೇ ಮಾಡಿ’ ಎಂದು ಪ್ರಚಾರ ನಡೆಸಿದರು.

ಚುನಾವಣಾ ಪ್ರಚಾರಕ್ಕೆಂದೇ ಶುಗರ್ ಟೌನ್‍ನಲ್ಲಿ ಅಭಿಮಾನಿಯೊಬ್ಬರು `ಕನ್ವರ್ ಲಾಲ್, ಜಲೀಲ-ದರ್ಶನ್’ ಹೆಸರಿನ ಜೋಡೆತ್ತುಗಳ ಗಾಡಿಯನ್ನು ಬೆಳಿಗ್ಗೆ ಏರಿದ ಚಾಲೆಂಜಿಂಗ್ ಸ್ಟಾರ್‍ಗೆ `ನೆನಪಿರಲಿ’ ಸಿನಿಮಾ ಖ್ಯಾತಿಯ ನಟ ಪ್ರೇಮ್, ಚೇತನ್ ಸಾಥ್ ನೀಡಿದರು. ಪ್ರಚಾರದ ವಾಹನವನ್ನೇರಿ ದರ್ಶನ್ ಬರುತ್ತಿದ್ದಂತೆ ಅಭಿಮಾನಿಗಳು ಹೂಮಳೆ ಸುರಿಸಿದರು. ದರ್ಶನ್ ಹಾಗೂ ಪ್ರೇಮ್‍ಗೆ ಜೈಕಾರ ಹಾಕುತ್ತಾ ಭರ್ಜರಿ ಸ್ವಾಗತ ಕೋರಿದರು.

ಹಸಿರು ಟವಲ್: ಮೆರವಣಿಗೆ ಮಧ್ಯೆ ಅಭಿಮಾನಿಯೊಬ್ಬರು ದರ್ಶನ್‍ಗೆ `ಹಸಿರು ಟವಲ್’ ಕೊಟ್ಟರು. ಅಭಿಮಾನಿ ಕೊಟ್ಟ ಟವಲ್ ಹೆಗಲಿಗೇರಿಸಿಕೊಂಡ ದರ್ಶನ್, ರೈತ ಪರ ಘೋಷಣೆ ಕೂಗಿದರು. ಪ್ರಚಾರದುದ್ದಕ್ಕೂ ಸುಮಲತಾ ಅಂಬರೀಶ್ ಪರ ಮತಯಾಚನೆ ಮಾಡಿದ ದರ್ಶನ್, `ಕ್ರಮಸಂಖ್ಯೆ 20, ಕಹಳೆ ಊದುವ ರೈತ’ ಗುರುತು ಮರೆಯಬೇಡಿ ಎಂದು ಸತತವಾಗಿ ಮನವಿ ಮಾಡುತ್ತಲೇ ಇದ್ದರು.

ನಗರದ ಬೀಡಿ ಕಾರ್ಮಿಕರ ಕಾಲೋನಿಯಲ್ಲಿ ಪ್ರಚಾರದ ವೇಳೆ ದರ್ಶನ್‍ಗೆ ಮುಸ್ಲಿಂ ಮುಖಂಡರು ಹೆಣಿಗೆಯ ಟೋಪಿ, ಶಾಲು ಹಾಕಿ ಅಭಿನಂದಿಸಿದರು. ಮಾತಿಗೂ ಮುನ್ನ `ಅಸ್ಸಲಾಮ್ ವಾಲೆಕೂಮ್’ ಎಂದು ಉರ್ದುವಿನಲ್ಲೇ ನಮಸ್ಕರಿಸಿದ ದರ್ಶನ್, ಕೆಲ ಕಾಲ ಉರ್ದುವಿನಲ್ಲೇ ಭಾಷಣ ಮಾಡಿ ಸುಮಲತಾ ಪರ ಮತ ಯಾಚಿಸಿದರು. ಆ ಮೂಲಕ ಅಭಿಮಾನಿಗಳ ಹೃದಯವನ್ನು ಮುಟ್ಟಿದರು.

ಈ ಮಧ್ಯೆ `ನೆನಪಿರಲಿ’ ಪ್ರೇಮ್ ಅವರು, ರೆಬೆಲ್ ಸ್ಟಾರ್ ಅಂಬರೀಶ್, ರವಿಚಂದ್ರನ್ ಹೆಸರು ಹೇಳಿ ಸುಮಲತಾ ಪರ ಮತಯಾಚನೆ ಮಾಡಿದರು.

ಎಳನೀರು: ಬಿರುಬಿಸಿಲನ್ನೂ ಲೆಕ್ಕಿಸದೆ ಪ್ರಚಾರ ನಡೆಸುತ್ತಿದ್ದ ನೆಚ್ಚಿನ ನಾಯಕ ನಟ ದರ್ಶನ್ ಅವರಿಗೆ ಅಭಿಮಾನಿಗಳು ಎಳನೀರು ಕೊಟ್ಟರು. ಬಳಿಕ ನಟ ಪ್ರೇಮ್, ಕೈ ಮುಖಂಡ ಅರವಿಂದ್ ಅವರಿಗೂ ಕೊಟ್ಟರು.

ಷುಗರ್ ಟೌನ್, ಜಬ್ಬಾರ್ ಸರ್ಕಲ್, ಕಾಮನ ಸರ್ಕಲ್, ಹೊಳಲು ಸರ್ಕಲ್, ಬೀಡಿ ಕಾರ್ಮಿಕರ ಕಾಲೋನಿ, ಮುಸ್ಲಿಂ ಬ್ಲಾಕ್, ಕಲ್ಲಹಳ್ಳಿ ರಾಮಮಂದಿರ, ನೂರಡಿ ರಸ್ತೆ, ಚಾಮುಂಡೇಶ್ವರಿ ದೇವಸ್ಥಾನ, ಎಂ.ಸಿ.ರಸ್ತೆ, ಗಾಂಧಿನಗರ, ಗುತ್ತಲು ರಸ್ತೆ, ತಮಿಳು ಕಾಲೋನಿ, ಹೊಸಹಳ್ಳಿ ಸರ್ಕಲ್ ಸೇರಿದಂತೆ 30ಕ್ಕೂ ಹೆಚ್ಚು ಬಡಾವಣೆಗಳಲ್ಲಿ ದರ್ಶನ್ ಭರ್ಜರಿ ಪ್ರಚಾರ ನಡೆಸಿದರು.

Translate »