ಗೆಲ್ಲಿಸಿದರೆ ದೆಹಲಿಯಲ್ಲಿ ನನ್ನ ಶಕ್ತಿ ತೋರಿಸುತ್ತೇನೆ: ನಿಖಿಲ್
ಮೈಸೂರು

ಗೆಲ್ಲಿಸಿದರೆ ದೆಹಲಿಯಲ್ಲಿ ನನ್ನ ಶಕ್ತಿ ತೋರಿಸುತ್ತೇನೆ: ನಿಖಿಲ್

April 3, 2019

ಕಿಕ್ಕೇರಿ: ನಾನು ಸದ್ಯ ಟೀಕೆ ಮಾಡುವಷ್ಟು ದೊಡ್ಡದಾಗಿ ಬೆಳೆದಿಲ್ಲ. ನನ್ನನ್ನು ನೀವು ಗೆಲ್ಲಿಸಿದರೆ ಆ ರಾಜಕೀಯ ಶಕ್ತಿಯಿಂದ ನಿಖಿಲ್ ಏನು ಮಾಡಬಲ್ಲ ಎಂಬುದನ್ನು ಮಾಡಿ ತೋರಿಸುವೆ ಎಂದು ಜೆಡಿಎಸ್ ಅಭ್ಯರ್ಥಿ ನಿಖಿಲ್‍ಕುಮಾರಸ್ವಾಮಿ ಹೇಳಿದರು.

ಪಟ್ಟಣದ ರಾಜ್ಯ ಹೆದ್ದಾರಿಯಲ್ಲಿ ತೆರೆದ ವಾಹನದಲ್ಲಿ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಪಕ್ಷದ ಜೆಡಿಎಸ್ ಅಭ್ಯರ್ಥಿ ಯಾಗಿ ಮತಯಾಚನೆ ಮಾಡಿದ ನಿಖಿಲ್, ಜಿಲ್ಲೆಯ ಜನರ ಶಕ್ತಿಯಾಗಿ ದೆಹಲಿಯಲ್ಲಿ ನಾನು ಎಂದರೆ ಏನು ಎಂದು ತೋರಿಸುವೆ ಎಂದು ನುಡಿದರು.

ಹಾಸನದ ಪಕ್ಕದ ಜಿಲ್ಲೆಯಾಗಿರುವ ಮಂಡ್ಯ ನನ್ನ ತವರು ಜಿಲ್ಲೆ ಎಂದೇ ಭಾವಿಸಿದ್ದೇನೆ. ಜೆಡಿಎಸ್‍ನ ಗಟ್ಟಿ ನೆಲವಾಗಿರುವ ಈ ಜಿಲ್ಲೆಯ ಋಣ ತೀರಿಸಲು ನನಗೊಂದು ಅವಕಾಶ ನೀಡಿ. ಇಡೀ ಕುಟುಂಬ ಜಿಲ್ಲೆಯವರಿಗಾಗಿ ದುಡಿಯಲು ನಿಶ್ಚಯಿಸಿದ್ದೇವೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಪಕ್ಷದಲ್ಲಿ ಒಗ್ಗಟ್ಟಿನ ಶಕ್ತಿ ಇದೆ ಎಂದರು.

ಕಿಕ್ಕೇರಿ ಹೋಬಳಿ ಜೆಡಿಎಸ್‍ನ ಭದ್ರಕೋಟೆ. ಏಳಕ್ಕೆ ಏಳೂ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಎಂದರೆ ಅದು ಹುಡುಗಾಟದ ವಿಷಯವಲ್ಲ. ನಮ್ಮ ಇಡೀ ಕುಟುಂಬವೇ ನಿಮ್ಮಗಳ ಋಣದ ಮೇಲೆ ನಿಂತಿದೆ. ತಂದೆ ಜಿಲ್ಲೆಯ ಋಣ ತೀರಿಸಲು ಕಟಿಬದ್ಧವಾಗಿದ್ದಾರೆ. ಜಿಲ್ಲೆಯ ಎಲ್ಲಾ ಸಮಸ್ಯೆ ಅರಿತು ಮತ್ತಷ್ಟು ಅನುದಾನ ನೀಡಲು ಆಲೋಚಿಸಿದ್ದಾರೆ ಎಂದರು. ರಾಜಕೀಯದಲ್ಲಿ ನಾನಿಂದು ಮಗು. ಜಿಲ್ಲೆಯ ಸಚಿವರು, ಸಂಸದರು, ಶಾಸಕರು, ಎಂಎಲ್‍ಸಿ, ಮಾಜಿ ಶಾಸಕರು, ಜೆಡಿಎಸ್ ಮುಖಂಡರು ಎಲ್ಲರೂ ಒಮ್ಮತದಿಂದ ನನ್ನನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಸಾಯುವವರೆಗೂ ದುಡಿಯುವೆ ಎಂದರು. ಅಭಿಮಾನಿಗಳು, ಕಾರ್ಯಕರ್ತರು ದಾರಿಯುದ್ದಕ್ಕೂ ವಾಹನಗಳ ಮೇಲೇರಿ ನಿಖಿಲ್‍ಗೆ ಪುಷ್ಪವೃಷ್ಟಿ ಮಾಡಿದರು. ಶ್ರವಣಬೆಳಗೂಳ ಶಾಸಕ ಬಾಲಕೃಷ್ಣ ಮಾತನಾಡಿ, ಮಂಡ್ಯ ಜಿಲ್ಲೆಯನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸಲಾಗುವುದು. ಮಂಡ್ಯ, ಹಾಸನ ಎಂದರೆ ಅಪ್ಪಾಜಿಗೆ ಬಲುಪ್ರೀತಿ. ನಿಮ್ಮ ಋಣ ತೀರಿ ಸಲು ಇದೊಂದು ಅವಕಾಶ ಕೊಡಿ ಎಂದು ವಿನಂತಿಸಿದರು.

ಮೊದಲ ಬಾರಿ ಮೈಕ್ ಹಿಡಿದ ಪ್ರಭಾಕರ್: ತಮ್ಮ ರಾಜಕೀಯ ಜೀವನದಲ್ಲಿ ಎಂದೂ ಮೈಕ್ ಹಿಡಿಯದ ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಪ್ರಭಾಕರ್ ಇದೇ ಪ್ರಪ್ರಥಮ ಬಾರಿಗೆ ಮೈಕ್ ಹಿಡಿದು ಮಾತನಾಡಿ, ನಿಖಿಲ್ ಪರ ಮತ ಯಾಚಿಸಿದರು.

ನಿಖಿಲ್ ರೋಡ್ ಶೋ ಆರಂಭವಾದೊಡನೆ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿ ಬಹು ದೂರದವರೆಗೂ ವಾಹನಗಳು ಸಾಲುಗಟ್ಟಿ ನಿಲ್ಲುವಂತಾ ಯಿತು. ಒಂದು ಗಂಟೆಗೂ ಹೆಚ್ಚಿನ ಕಾಲ ನಡೆದ ರೋಡ್ ಶೋಗಾಗಿ ಪ್ರಯಾಣಿಕರು ದೂರದ ಊರಿಗೆ ತೆರಳಲು ತೊಂದರೆಯಾಯಿತು. ಪೊಲೀಸರು ಹರಸಾಹಸಪಟ್ಟು ವಾಹನಗಳು ತೆರಳಲು ಅನುವು ಮಾಡಿಕೊಟ್ಟರು.

ಶಾಸಕ ಕೆ.ಸಿ. ನಾರಾಯಣಗೌಡ, ಜಿಪಂ ಸದಸ್ಯ ಬಿ.ಎಲ್. ದೇವರಾಜು, ಚೋಳೇನಹಳ್ಳಿ ಪುಟ್ಟಸ್ವಾಮಿಗೌಡ, ಮುಖಂಡ ಕೆ.ಶ್ರೀನಿವಾಸ್, ಜೆಡಿಎಸ್ ಹೋಬಳಿ ಅಧ್ಯಕ್ಷ ಕೆ.ಜೆ.ತಮ್ಮಣ್ಣ, ತಾಪಂ ಉಪಾಧ್ಯಕ್ಷ ರವಿ, ಸದಸ್ಯೆ ಶಾರದಾ, ಎಪಿಎಂಸಿ ನಿರ್ದೇಶಕ ಐನೋರಹಳ್ಳಿ ಮಲ್ಲೇಶ್, ಮೊಟ್ಟೆ ಮಂಜು ಮತ್ತಿತರರಿದ್ದರು.

Translate »