ಚಾಮರಾಜನಗರ, ಮೈಸೂರಲ್ಲಿ ಬಿಜೆಪಿ ಗೆಲುವು ನಿಶ್ಚಿತ
ಮೈಸೂರು

ಚಾಮರಾಜನಗರ, ಮೈಸೂರಲ್ಲಿ ಬಿಜೆಪಿ ಗೆಲುವು ನಿಶ್ಚಿತ

April 3, 2019

ಚಾಮರಾಜನಗರ: ಚಾಮ ರಾಜನಗರ ಮತ್ತು ಮೈಸೂರು ಲೋಕಸಭಾ ಕ್ಷೇತ್ರ ಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ಚಾಮರಾಜ ನಗರ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್‍ಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿ ಸಿದ್ದ ಬಿಜೆಪಿ ಜನಪ್ರತಿನಿಧಿಗಳು ಹಾಗೂ ಪದಾಧಿ ಕಾರಿಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತ ನಾಡಿದರು. ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಎಲ್ಲಾ 8 ವಿಧಾನಸಭಾ ಕ್ಷೇತ್ರ ಗಳಲ್ಲೂ ಬಿಜೆಪಿಗೆ ಲೀಡ್ ಬರಲಿದೆ. ಮೈಸೂರು ಕ್ಷೇತ್ರವನ್ನೂ ನಾವು ಉಳಿಸಿಕೊಳ್ಳಲಿದ್ದೇವೆ ಎಂಬ ವಿಶ್ವಾಸ ನನ್ನಲ್ಲಿದೆ. ಕ್ಷೇತ್ರದ ಮತದಾರರು ನರೇಂದ್ರ ಮೋದಿ, ಯಡಿಯೂರಪ್ಪ, ಶ್ರೀನಿವಾಸ್ ಪ್ರಸಾದ್ ಅವರನ್ನು ಇಷ್ಟ ಪಡುತ್ತಿದ್ದಾರೆ ಎಂದರು. ಲೋಕ ಸಭಾ ಚುನಾವಣೆಯ ಕಾವು ದಿನೇ ದಿನೆ ಹೆಚ್ಚುತ್ತಿದೆ. ನಮ್ಮ ಸಿದ್ಧತೆಗಳು ಹೇಗಿರಬೇಕು ಎಂಬುದನ್ನು ತಿಳಿದು ಕೊಳ್ಳುವ ಸಲುವಾಗಿ ಪಕ್ಷದ ಜನಪ್ರತಿನಿಧಿಗಳು ಹಾಗೂ ಮುಖಂಡರ ಸಭೆ ಕರೆಯಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಎಚ್ಚರಿಕೆ ವಹಿಸಿ ಸಿದ್ಧತೆ ಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದರು.

ಹೊಂದಾಣಿಕೆ ಇಲ್ಲ:ಕರ್ನಾಟಕದ ಜನತೆ ಬಿಜೆಪಿ ಮೇಲೆ ವಿಶ್ವಾಸ, ನಂಬಿಕೆ ಇಟ್ಟಿದ್ದಾರೆ. ಆದರೆ ತನ್ನ ನೆಲೆ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಮೇಲೆ ಜನರಿಗೆ ನಂಬಿಕೆ ಇಲ್ಲದಿರುವುದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಾಬೀತಾಗಿದೆ. ರಾಜ್ಯದ ಮೈತ್ರಿ ಸರ್ಕಾರದ ದೋಸ್ತಿಗಳ ಮಧ್ಯೆ ಹೊಂದಾಣಿಕೆ ಇಲ್ಲದೆ ಇರುವುದು ಜನರಿಗೆ ತಿಳಿದಿದೆ ಎಂದರು.

ಸಿದ್ದರಾಮಯ್ಯ ಮಗ್ಗಲು ಮುಳ್ಳು: ಸಿದ್ದರಾಮಯ್ಯ ಮಗ್ಗಲು ಮುಳ್ಳು ಎಂಬುದು ಜೆಡಿಎಸ್‍ನವರಿಗೆ ಗೊತ್ತು. ಹಾಗಾಗಿ ಮೈತ್ರಿ ಮಾಡಿಕೊಂಡು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರೂ ಸಹ ಕಾಂಗ್ರೆಸ್ ಮತ್ತು ಜೆಡಿಎಸ್‍ನಲ್ಲಿ ಹೊಂದಾಣಿಕೆ ಇಲ್ಲದಿರುವುದು ಬಹಿರಂಗವಾಗುತ್ತಿದೆ. ಜನ ಈ ಎರಡೂ ಪಕ್ಷಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಕ್ಷೇತ್ರದ ಉಸ್ತುವಾರಿ ರಾಜೇಂದ್ರ, ಜಿಲ್ಲಾ ಅಧ್ಯಕ್ಷ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಮಾಜಿ ಶಾಸಕರಾದ ಸಿ.ಗುರುಸ್ವಾಮಿ, ಡಾ.ಭಾರತೀಶಂಕರ್, ಜಿಪಂ ಮಾಜಿ ಅಧ್ಯಕ್ಷರಾದ ಎಸ್.ಮಹದೇವಯ್ಯ, ಎಂ.ರಾಮಚಂದ್ರ, ಸದಸ್ಯ ಸಿ.ಎನ್.ಬಾಲರಾಜು, ಮುಖಂಡರಾದ ಸಿ.ಬಸವೇಗೌಡ, ಅಮ್ಮನಪುರ ಮಲ್ಲೇಶ್, ಹನುಮಂತಶೆಟ್ಟಿ, ಪಾಪು, ಕೆ.ವೀರಭದ್ರಸ್ವಾಮಿ, ಸುಂದ್ರಪ್ಪ, ಸುಂದರ ರಾಜು ಇತರರು ಉಪಸ್ಥಿತರಿದ್ದರು.

ಬಿಜೆಪಿಗೆ ಸೇರ್ಪಡೆ: ಇಂದಿಲ್ಲಿ ನಡೆದ ಸಭೆಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ವಕೀಲ ಎಂ.ಚಿನ್ನಸ್ವಾಮಿ, ವಾಟಾಳ್ ಪಕ್ಷದ ಮುಖಂಡ ಎಪಿಎಂಸಿ ಸದಸ್ಯ ಕಾಗಲವಾಡಿ ಶಿವಕುಮಾರ್ ಅವರಿಗೆ ಪಕ್ಷದ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ಹಾಗೂ ಪಕ್ಷದ ಜಿಲ್ಲಾಧ್ಯಕ್ಷ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಪಕ್ಷದ ಬಾವುಟ ನೀಡಿ ಬರಮಾಡಿಕೊಂಡರು.

ಮಾಜಿ ಸಂಸದ ಕಾಗಲವಾಡಿ ಶಿವಣ್ಣ ಉಂಡಾಡಿಗುಂಡ…!
ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ ಪ್ರಸಾದ್ ಮಾಜಿ ಸಂಸದ ಕಾಗಲವಾಡಿ ಶಿವಣ್ಣ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು. ಇಂದಿಲ್ಲಿ ನಡೆದ ಪಕ್ಷದ ಜನಪ್ರತಿನಿಧಿಗಳು ಹಾಗೂ ಪದಾಧಿಕಾರಿ ಗಳ ಸಭೆಯಲ್ಲಿ ಮಾತನಾಡಿದ ಅವರು, ವಯಸ್ಸಾಗಿದೆ ಎಂಬುದು ನನಗೆ ಗೊತ್ತಿಲ್ಲವೇ? ನನ್ನ ವಯಸ್ಸನ್ನು ನನ್ನ ಎದುರಾಳಿ ಹೇಳ ಬೇಕಾ? ಎಂದ ಪ್ರಸಾದ್, 2004ರ ಲೋಕ ಸಭಾ ಚುನಾವಣೆಯಲ್ಲಿ ಆತನಿಗೆ(ಕಾಗಲ ವಾಡಿ ಶಿವಣ್ಣ) ಟಿಕೆಟ್ ನೀಡಲು ಎಲ್ಲರೂ ವಿರೋಧಿಸಿದ್ದರು. ಆದರೆ ನಾನು ಟಿಕೆಟ್ ಕೊಡಿಸಿದೆ. ಆದರೆ ಚುನಾವಣೆಯಲ್ಲಿ ಗೆದ್ದು ಅಧಿಕಾರ ಎಲ್ಲವನ್ನು ತಿಂದು ತೇಗಿ ಹಾಕಿದ ಎಂದು ಟೀಕಿಸಿದರು. ದೇವೇಗೌಡರಿಗೆ ಕೈ ಕೊಟ್ಟಿರುವವರು ಯಾರಾದರೂ ಇದ್ದರೆ ಅದು ಕಾಗಲವಾಡಿ ಶಿವಣ್ಣ ಎಂದ ಶ್ರೀನಿವಾಸ್ ಪ್ರಸಾದ್, ಒಂದು ಬಟನ್ ಒತ್ತಿ ಕೋಟ್ಯಾಧಿಪತಿ ಆದ. ನಂತರದ ಚುನಾವಣೆಯಲ್ಲಿ ಟಿಕೆಟ್ ಸಿಗದಿದ್ದಾಗ ಸೋನಿಯಾಗಾಂಧಿ ಕಾಲಿಗೆ ಬಿದ್ದು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷನಾದ. ಈ ವೇಳೆ ಆತ ಪ್ರವಾಸಿ ಮಂದಿರಕ್ಕೆ ಬರುತ್ತಿದ್ದಾಗ ನಾಟಿಕೋಳಿ ಸಾರು, ಮೀನು ರೆಡಿ ಇದೆ ಎನ್ನುತ್ತಿದ್ದರು. ಇದನ್ನು ತಿಳಿದು ನನಗೆ ನಾಚಿಕೆ ಆಗುತ್ತಿತ್ತು ಎಂದರು.

ನಾನು ಲೋಕಸಭಾ ಸದಸ್ಯನಾಗಿದ್ದಾಗ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೆ. ಆದರೆ ನನ್ನ ನಂತರ ಬಂದ ಸದಸ್ಯ 5 ವರ್ಷ ಏನೂ ಮಾಡಲಿಲ್ಲ. ಉಂಡಾಡಿ ಗುಂಡನಾಗಿದ್ದ ಎಂದು ಪರೋಕ್ಷವಾಗಿ ಕಾಗಲವಾಡಿ ಶಿವಣ್ಣ ವಿರುದ್ಧ ಆರೋಪ ಮಾಡಿದರು.

Translate »