ಬೇಲೂರು: ಬೇಲೂರು ತಾಲೂಕು ಪತ್ರಕರ್ತರ ಸಂಘದ ನೂತನ ಗ್ರಂಥಾಲಯ ಮತ್ತು ಹೆಚ್ಚುವರಿ ಕಟ್ಟಡ ಉದ್ಘಾಟನೆಯನ್ನು ತಾಪಂ ಅಧ್ಯಕ್ಷ ರಂಗೇಗೌಡ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಪತ್ರಕರ್ತರ ಪಾತ್ರ ಮಹತ್ತರವಾಗಿದೆ. ರಾಜಕಾರಣಿಗಳು ಹಾಗೂ ಅಧಿಕಾರಿ ಗಳು ಅಡ್ಡದಾರಿ ಹಿಡಿದಾಗ ಅವರನ್ನು ಎಚ್ಚರಿಸಿ ಸರಿದಾರಿಗೆ ತರುವಲ್ಲಿ ಪತ್ರಕರ್ತರ ಜವಾಬ್ದಾರಿ ಪ್ರಮುಖವಾಗಿದೆ ಎಂದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತಾನಾಡಿ, ಪತ್ರಕರ್ತರ ಆರೋಗ್ಯ ನಿಧಿಗೆ ಈ ಬಾರಿ ಸಮ್ಮಿಶ್ರ ಸರ್ಕಾರ ಮಂಡಿಸಿದ ಬಜೆಟ್‍ನಲ್ಲಿ 4 ಕೋಟಿ ಹಣವನ್ನು ಮೀಸಲಿಟ್ಟಿದ್ದು ಸ್ವಾಗತಾರ್ಹವಾಗಿದೆ. ಪತ್ರಕರ್ತರಾ ದವರು ಶಿಸ್ತುಬದ್ಧವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದರೆ ಸಮಾಜದಲ್ಲಿ ಗೌರವ ಸ್ಥಾನ ದೊರಕುತ್ತದೆ. ಮಾರ್ಚ್ 2 ಮತ್ತು 3ರಂದು ರಾಜ್ಯ ಮಟ್ಟದ ಪತ್ರಕರ್ತರ ಸಂಘದ ಸಮ್ಮೇಳನವನ್ನು ಮೈಸೂರು ಬಳಿಯ ಸುತ್ತೂರು ಮಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಮಾಧ್ಯಮ ಅಕಾಡೆಮಿ ಸದಸ್ಯ ಎಚ್.ಬಿ.ಮದನ್‍ಗೌಡ, ಟ್ರಸ್ಟ್‍ನ ಪ್ರಧಾನ ಕಾರ್ಯ ದರ್ಶಿ ಬಿ.ಎಂ.ರವೀಶ್, ಜಿಲ್ಲಾಧ್ಯಕ್ಷ ಬಿ.ಆರ್.ಉದಯಕುಮಾರ್, ತಾಲೂಕು ಅಧ್ಯಕ್ಷ ಡಿ.ಬಿ.ಮೋಹನ್‍ಕುಮಾರ್, ಕಾರ್ಯದರ್ಶಿ ನಂದಕುಮಾರ್, ಉಪಾಧ್ಯಕ್ಷ ಶ್ರೀನಿಧಿ, ಖಜಾಂಚಿ ಜಗದೀಶ, ರಾಜ್ಯ ಸಮಿತಿ ಸದಸ್ಯ ರವಿನಾಕಲಗೂಡು, ಸಂಪಾದಕ ತೊ.ಚ. ಅನಂತಸುಬ್ಬರಾಯ, ಚೆನ್ನಕೇಶವ ದೇಗುಲ ಸಮಿತಿ ಅಧ್ಯಕ್ಷ ವೈ.ಟಿ.ದಾಮೋದರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ್, ಪುರಸಭೆ ಅಧ್ಯಕ್ಷೆ ಭಾರತಿ, ತಾಪಂ ಉಪಾಧ್ಯಕ್ಷೆ ಕಮಲ ಇತರರಿದ್ದರು. ಪತ್ರಕರ್ತ ಹೆಬ್ಬಾಳು ಹಾಲಪ್ಪ ನಿರೂಪಣೆ, ಭಾರತಿಗೌಡ ಪ್ರಾರ್ಥನೆ ನೆರವೇರಿಸಿದರು.