ಸೈಬರ್ ಕ್ರೈಮ್ ವಿಚಾರದಲ್ಲಿ ಇಲಾಖಾ  ಸಿಬ್ಬಂದಿ ಎಚ್ಚರ ವಹಿಸುವುದು ಅವಶ್ಯ
ಮೈಸೂರು

ಸೈಬರ್ ಕ್ರೈಮ್ ವಿಚಾರದಲ್ಲಿ ಇಲಾಖಾ ಸಿಬ್ಬಂದಿ ಎಚ್ಚರ ವಹಿಸುವುದು ಅವಶ್ಯ

March 9, 2021

ಮೈಸೂರು,ಮಾ.8(ಎಂಟಿವೈ)-ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ ಹೆಚ್ಚಾಗುತ್ತಿದೆ. ಸರ್ಕಾರ ಜಾರಿಗೆ ತಂದಿರುವ `ಇ-ಆಡಳಿತ’ ವ್ಯವಸ್ಥೆ ಜಾರಿಗೆ ಎಲ್ಲಾ ಇಲಾಖೆ ಸಿಬ್ಬಂದಿ ಅಗತ್ಯವಾಗಿ ಸೈಬರ್ ಕ್ರೈಮ್ ತಡೆ ಕ್ರಮಗಳ ಬಗ್ಗೆ ತಿಳಿದುಕೊಳ್ಳುವುದು ಅನಿವಾರ್ಯ ಎಂದು ಡಿವೈಎಸ್ಪಿ ಮಾಥ್ಯೂ ಥಾಮಸ್ ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸರ್ಕಾರದ ಸಾಮಥ್ರ್ಯಾಭಿವೃದ್ಧಿ ಯೋಜನೆಯಡಿ ಮೈಸೂರಿನ ಆಡಳಿತ ಮತ್ತು ತರಬೇತಿ ಸಂಸ್ಥೆಯ ಸಭಾಂಗಣ ದಲ್ಲಿ ಸೋಮವಾರ ಇ-ಆಡಳಿತ ಕೋಶ, ಆಡಳಿತ ತರಬೇತಿ ಸಂಸ್ಥೆ, ಜಿಲ್ಲಾ ತರಬೇತಿ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ `ಸೈಬರ್ ಸೆಕ್ಯೂರಿಟಿ’ ಮತ್ತು `ಇ-ಆಡಳಿತ’ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ಅಂತರ್ಜಾಲದ ದುರುಪಯೋಗ ಹೆಚ್ಚಾಗುತ್ತಿದೆ. ಜನರು ಒಂದು ಸಣ್ಣ ತಪ್ಪಿನಿಂ ದಾಗಿ ಹಣ ಹಾಗೂ ಮಹತ್ವದ ಮಾಹಿತಿ ಕಳೆದುಕೊಳ್ಳುತ್ತಿದ್ದಾರೆ. ತಿಳಿದೋ ಅಥವಾ ತಿಳಿಯದೆಯೋ ಸಂಕಷ್ಟಕ್ಕೆ ಸಿಲುಕಿ, ನಷ್ಟ ಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು,

ಕಂಪ್ಯೂಟರ್, ಲ್ಯಾಪ್‍ಟಾಪ್, ಮೊಬೈಲ್‍ಗಳಿಗೆ ನೆಟ್ವರ್ಕ್ ಸಂಪರ್ಕ ಇದ್ದಾಗ ಮಾತ್ರ ಸೈಬರ್ ಕ್ರೈಮ್ ನಡೆಯುತ್ತದೆ. ಈ ಅಪರಾಧ ಜನರ ಗಮನಕ್ಕೆ ಬರಬಹುದು, ಬರದಂತೆಯೂ ನಡೆಯ ಬಹುದು. ಡಾಟಾ ಕಳ್ಳತನವೂ ಹೆಚ್ಚಾಗಿ ನಡೆಯುತ್ತಿದೆ. ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸುವುದು ಮಾಮೂ ಲಾಗಿದೆ. ಸೈಬರ್ ಕ್ರೈಮ್ ಪೊಲೀಸ್ ಇಲಾಖೆಗೂ ಸವಾಲಾಗಿ ಪರಿಣಮಿಸುತ್ತಿದೆ. ಅಲ್ಲದೆ ಈ ಅಪ ರಾಧಕ್ಕೆ ಸಂಬಂಧಿಸಿದ ಅಪರಾಧಿಗಳನ್ನು ಪತ್ತೆ ಹಚ್ಚು ವುದು ಕ್ಲಿಷ್ಟಕರವಾಗಿದೆ. ಈ ಹಿಂದೆ ಕೊಲೆ, ಸುಲಿಗೆ, ದರೋಡೆಯಂತಹ ಪ್ರಕರಣಗಳು ಹೆಚ್ಚಾಗಿ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದವು. ಇದೀಗ ಸೈಬರ್ ಕ್ರೈಮ್‍ಗೆ ಸಂಬಂಧಿಸಿದ ದೂರು ಹೆಚ್ಚಾಗುತ್ತಿದ್ದು, ದೊಡ್ಡ ಸವಾಲಾಗಿ ಕಾಡುತ್ತಿದೆ ಎಂದರು.
ಸರ್ಕಾರ ಈಗಾಗಲೇ ಕಾಗದ ರಹಿತ ಆಡಳಿತ ವ್ಯವಸ್ಥೆ ಜಾರಿಗೊಳಿಸಲು `ಇ-ಆಡಳಿತ’ ವ್ಯವಸ್ಥೆ ಜಾರಿಗೊಳಿಸಿದೆ. ಇದ ರಿಂದ ಎಲ್ಲಾ ಇಲಾಖೆಗಳ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿ ಜಾಗೃತರಾಗಬೇಕು. ಕಾಗದ ರಹಿತ ಸೇವೆ ನೀಡುವುದರೊಂದಿಗೆ `ಇ-ಆಡಳಿತ’ ವ್ಯವಸ್ಥೆಯಲ್ಲಿ ವ್ಯವಹಾರ ಮಾಡುವಾಗ ಸೈಬರ್ ಕ್ರೈಮ್‍ಗೆ ಒಳಗಾಗದಂತೆ ಕಟ್ಟೆಚ್ಚರ ವಹಿಸುವ ಅಗತ್ಯವಿದೆ. ಈ ಕಾರ್ಯಾಗಾರ ನಮ್ಮ ಇಲಾಖೆಗೆ ಸಂಬಂಧಿಸಿಲ್ಲ ಎಂದು ಭಾವಿಸಬಾರದು. ಇಲಾಖಾ ಕಾರ್ಯಚಟುವಟಿಕೆಯಲ್ಲಿ ಸೈಬರ್ ಕ್ರೈಮ್ ಕುರಿತ ಮಾಹಿತಿ ಅಸಮಂಜಸ ಎನ್ನಿಸಿದರೂ, ವೈಯಕ್ತಿಕ ವಿಚಾರದಲ್ಲಿ ಸೈಬರ್ ಕ್ರೈಮ್ ತಡೆಗೆ ಕೈಗೊಳ್ಳಬೇಕಾದ ಎಚ್ಚರಿಕಾ ಕ್ರಮ ಮಹತ್ವ ಪಡೆದುಕೊಳ್ಳುತ್ತದೆ. ಠಾಣೆಗಳಿಗೆ ಸೈಬರ್ ಕ್ರೈಮ್ ಬಗ್ಗೆ ಸಲ್ಲಿಕೆಯಾಗುವ ದೂರುಗಳನ್ನು ಗಮನಿಸಿದಾಗ ಬುದ್ಧಿ ವಂತರು ಹಾಗೂ ಸುಶಿಕ್ಷಿತರು ಹೆಚ್ಚಿನ ಸಂಖ್ಯೆಯಲ್ಲಿ ಹಣ ಕಳೆದುಕೊಂಡಿರುವುದು ಪತ್ತೆಯಾಗಿದೆ. ನಾವು ಮಾಡುವ ಸಣ್ಣ ತಪ್ಪಿನಿಂದ ನಷ್ಟಕ್ಕೆ ತುತ್ತಾಗುತ್ತಿರುವುದು ಕಂಡು ಬಂದಿದೆ ಎಂದು ಎಚ್ಚರಿಸಿದರು. ಕಾರ್ಯಕ್ರಮದಲ್ಲಿ ಸೈಬರ್ ಸೆಕ್ಯುರಿಟಿ ತಜ್ಞರಾದ ಅನಂತ ಪ್ರಭು, ಮೈಸೂರು ತರಬೇತಿ ಸಂಸ್ಥೆಯ ಪ್ರಾಂಶು ಪಾಲರಾದ ಶಿವರಾಮಯ್ಯ, ಬೋಧಕ ನಾಗೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Translate »