ಕೋವಿಡ್ ವಾರಾಂತ್ಯ ಕಫ್ರ್ಯೂ ನಿರ್ಬಂಧದ ನಡುವೆಯೂ ಪುಂಡರ ಜಾಲಿರೈಡ್… ಹರಟೆಯಲ್ಲಿ ನಿರತ ಧಮ್ ಅಡ್ಡಗಳು… ಅರ್ಧಕ್ಕೆ ತೆರೆದ ಅಂಗಡಿಗಳು…
ಮೈಸೂರು

ಕೋವಿಡ್ ವಾರಾಂತ್ಯ ಕಫ್ರ್ಯೂ ನಿರ್ಬಂಧದ ನಡುವೆಯೂ ಪುಂಡರ ಜಾಲಿರೈಡ್… ಹರಟೆಯಲ್ಲಿ ನಿರತ ಧಮ್ ಅಡ್ಡಗಳು… ಅರ್ಧಕ್ಕೆ ತೆರೆದ ಅಂಗಡಿಗಳು…

April 25, 2021

ಮೈಸೂರು,ಏ.24(ಪಿಎಂ)- ಕೋವಿಡ್ ವಾರಾಂತ್ಯ ಕಫ್ರ್ಯೂ ನಿರ್ಬಂಧದ ನಡುವೆಯೂ ಪುಂಡರ ಜಾಲಿರೈಡ್… ಪೊಲೀಸರ ಕಣ್ತಪ್ಪಿಸಿ, ಗುಂಪುಗೂಡಿ ಧಮ್ ಎಳೆಯುವ ಧಮ್ ಪ್ರಿಯರು… ಮಾಸ್ಕ್ ಇಲ್ಲದೆ, ದೈಹಿಕ ಅಂತರ ಕಾಯ್ದುಕೊಳ್ಳದೇ ಹರಟೆ… ಇದು ಶನಿವಾರ ನಗರದ ವಿವಿಧ ಬಡಾವಣೆಗಳ ವ್ಯಾಪ್ತಿಯಲ್ಲಿ ಕಂಡು ಬಂದ ನಿರ್ಲಕ್ಷ್ಯತನದ ದೃಶ್ಯಗಳು.

ಕೊರೊನಾ ಮಹಾಮಾರಿ ಮಣಿಸಲು ಸರ್ಕಾರ ಹರಸಾಹಸ ಪಡುತ್ತಿದೆ. ಮತ್ತೊಂದೆಡೆ ಆರೋಗ್ಯ ಕಾರ್ಯಕರ್ತರು ಜೀವದ ಹಂಗು ತೊರೆದು ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಈ ನಡುವೆ ಪುಂಡರು ತಮ್ಮ ನಿರ್ಲಕ್ಷ್ಯತನ ಮೆರೆಯುವ ಮೂಲಕ ಸೋಂಕು ವ್ಯಾಪಿಸಲು ವಾಹಕವಾಗುತ್ತಿದ್ದಾರೆ. ಕಫ್ರ್ಯೂ ಲೆಕ್ಕಿಸದೇ ಯುವ ಕರು ಬೈಕ್‍ನಲ್ಲಿ ಅದರಲ್ಲೂ ಒಬ್ಬರೂ ಮಾಸ್ಕ್ ಧರಿಸದೇ ತ್ರಿಬಲ್ ರೈಡ್ ನಡೆಸುತ್ತಿದ್ದ ದೃಶ್ಯಗಳು ಅಲ್ಲಲ್ಲಿ ಕಂಡು ಬಂದವು. ರೈಡ್ ಮಾತ್ರವಲ್ಲದೆ, ಸಿಗರೇಟು ಸೇದುತ್ತಾ ಪುಂಖಾನುಪುಂಖವಾಗಿ ಹೊಗೆ ಬಿಡುತ್ತಾ ಅಡ್ಡಾಡುತ್ತಿದ್ದರು. ಕೆಲವೆಡೆ ಕಾರುಗಳಲ್ಲೂ ಸ್ನೇಹಿತರ ದಂಡು ಜಾಲಿರೈಡ್ ನಡೆಸಿತು. ಈ ದಂಡುಗಳೂ ಧಮ್ ಎಳೆಯು ವುದರಲ್ಲಿ ನಿರತರಾಗಿದ್ದವು. ಪ್ರಮುಖ ಬಡಾವಣೆಗಳಲ್ಲಿ ಸಣ್ಣಪುಟ್ಟ ಪುಡಾರಿಗಳು ಅಡ್ಡಗಳಲ್ಲಿ ಹರಟೆ ಹೊಡೆಯುವಲ್ಲಿ ತಲ್ಲೀನರಾಗಿದ್ದರು. ಅದೂ ಮಾಸ್ಕ್ ಧರಿಸದೇ, ದೈಹಿಕ ಅಂತರವೂ ಇಲ್ಲದೇ ಸಿಗ ರೇಟು ಸೇದುತ್ತಾ ಒಬ್ಬೊರನ್ನೊಬ್ಬರು ಕಿಚಾಯಿಸುತ್ತ ಹರಟೆಗೆ ಜಾರಿದ್ದರು.

ವಾರಾಂತ್ಯದ ಕಫ್ರ್ಯೂ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳಿಗೆ ಮಾತ್ರ ಬೆಳಗ್ಗೆ 6ರಿಂದ 10ರವರೆಗೆ ವಿನಾಯಿತಿ ನೀಡಲಾಗಿತ್ತು. ಆದರೆ ಕೆಲವೆಡೆ ಬೀಡಿ, ಸಿಗರೇಟು ಅಂಗಡಿಗಳು ಅರೆ ಬಾಗಿಲು ವಹಿವಾಟು ನಡೆಯುತ್ತಿದ್ದ ದೃಶ್ಯ ಕೆಲ ಬಡಾವಣೆಗಳಲ್ಲಿ ಸಾಮಾನ್ಯವಾಗಿತ್ತು. ಇನ್ನಿತರ ಕೆಲವು ಮಳಿಗೆಗಳಲ್ಲಿ ಅರ್ಧಕ್ಕೆ ಶೆಲ್ಟರ್ ತೆರೆದು ವಹಿವಾಟು ನಡೆಸುವ ಮೂಲಕ ಕಫ್ರ್ಯೂ ಉಲ್ಲಂಘಿಸಲಾಗಿತ್ತು.

ಬೆಳಗ್ಗೆ 4 ಗಂಟೆ ಕಾಲ ನಡೆದ ಹಣ್ಣು ತರಕಾರಿ, ಹಾಲು ಸೇರಿ ದಂತೆ ಅಗತ್ಯ ವಸ್ತುಗಳ ವಹಿವಾಟು ಸಂದರ್ಭದಲ್ಲೂ ವ್ಯಾಪಾರಿ ಗಳು ಹಾಗೂ ಗ್ರಾಹಕರು ಮಾಸ್ಕ್ ಧರಿಸದ ದೃಶ್ಯಾವಳಿಗಳು ಹಲವೆಡೆ ಕಂಡು ಬಂದವು. ಹಲವು ಔಷಧ ಮಳಿಗೆಗಳೂ ಇಂತಹ ಸನ್ನಿವೇಶದಿಂದ ಹೊರತಾಗಿರಲಿಲ್ಲ ಎಂಬುದು ಬೇಸರದ ಸಂಗತಿ. ಇನ್ನು ಹಲವೆಡೆ ಹಲವರು ಮಾಸ್ಕ್ ಅನ್ನು ಮೂಗು ಹಾಗೂ ಬಾಯಿ ಸೇರಿಸಿ ಮುಚ್ಚಿಕೊಳ್ಳದೇ ಅಲಂಕಾರಕ್ಕೆ ಎಂಬಂತೆ ಕುತ್ತಿಗೆಯಲ್ಲಿ ಹಾಕಿಕೊಂಡು ಓಡಾಡುತ್ತಿದ್ದದ್ದೂ ಕಂಡು ಬಂದಿತು.

Translate »