‘ನಮ್ಮ ಆರೋಗ್ಯ ನಮ್ಮ ಸುರಕ್ಷತೆ’ ಸರ್ಕಾರದ ಮಾರ್ಗಸೂಚಿ ಪಾಲಿಸಿ, ಲಸಿಕೆ ಪಡೆದು ಆರೋಗ್ಯ ಕಾಪಾಡಿಕೊಳ್ಳಿ: ಜಿಟಿಡಿ ಮನವಿ
ಮೈಸೂರು

‘ನಮ್ಮ ಆರೋಗ್ಯ ನಮ್ಮ ಸುರಕ್ಷತೆ’ ಸರ್ಕಾರದ ಮಾರ್ಗಸೂಚಿ ಪಾಲಿಸಿ, ಲಸಿಕೆ ಪಡೆದು ಆರೋಗ್ಯ ಕಾಪಾಡಿಕೊಳ್ಳಿ: ಜಿಟಿಡಿ ಮನವಿ

April 25, 2021

ಮೈಸೂರು,ಏ.24-ಕೊರೊನಾ ಸೋಂಕಿತರು ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳ ಮಾರ್ಗಸೂಚಿಗಳನ್ನು ಚಾಚೂ ತಪ್ಪದೆ ಪಾಲಿಸುವ ಮೂಲಕ ತಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವಂತೆ ಮಾಜಿ ಸಚಿವರೂ ಆದ ಶಾಸಕ ಜಿ.ಟಿ.ದೇವೇಗೌಡ ಜನತೆಯಲ್ಲಿ ಕಳಕಳಿಯ ಮನವಿ ಮಾಡಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಕೋವಿಡ್-19 ಎರಡನೇ ಅಲೆ ಅತ್ಯಂತ ಅಪಾಯ ಕಾರಿ ಯಾಗಿ ಪರಿಣಮಿಸುತ್ತಿದೆ. ಇಡೀ ವಿಶ್ವವೇ ಈ ಮಹಾಮಾರಿ ಯಿಂದ ತತ್ತರಿಸಿ ಹೋಗಿದೆ. ನಮ್ಮ ದೇಶದಲ್ಲಿಯೂ ಈ ಸಾಂಕ್ರಾಮಿಕ ಸೋಂಕನ್ನು ತಡೆಯುವ ಸಲುವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಮಾರ್ಗಸೂಚಿ ಯನ್ನು ಜಾರಿಗೊಳಿಸಿವೆ. ಇವುಗಳನ್ನು ಜನತೆ ತಪ್ಪದೇ ಪಾಲಿಸುವ ಮೂಲಕ ಸುರಕ್ಷಿತವಾಗಿರಬೇಕೆಂದು ಸಲಹೆ ನೀಡಿದ್ದಾರೆ.

ಕೋವಿಡ್ ಲಕ್ಷಣಗಳು ಕಂಡುಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಸೂಕ್ತ ಸಲಹೆಯನ್ನು ಪಡೆದುಕೊಳ್ಳಬೇಕು. ಒಂದು ವೇಳೆ ಕೋವಿಡ್ ಪಾಸಿಟಿವ್ ಬಂದರೂ, ಆತಂಕಪಡುವುದು ಬೇಡ. ಬೇರೆ ಯಾವುದೇ ರೋಗ ಲಕ್ಷಣವಿಲ್ಲ ದಿದ್ದರೆ ಮನೆಯಲ್ಲೇ ಇದ್ದು ಅಗತ್ಯ ಔಷಧೋಪಚಾರ ಮಾಡಿಕೊಂಡರೆ, ಶೀಘ್ರ ಗುಣಮುಖರಾಗಬಹುದು ಎಂಬುದಕ್ಕೆ ನಾನೇ ಸಾಕ್ಷಿ. ನನಗೆ ಕೋವಿಡ್ ಪಾಸಿ ಟಿವ್ ಬಂದಂತಹ ಸಂದರ್ಭದಲ್ಲಿ ಹೋಂ ಐಸೋಲೇಷನ್ ಆಯ್ಕೆ ಮಾಡಿ ಕೊಂಡಿದ್ದೆ. ಈ ವೇಳೆ ಪ್ರತೀ ದಿನ ಶುಂಠಿ, ಬೆಳ್ಳುಳ್ಳಿ, ತುಳಸಿ ಹಾಗೂ ಅರಿಶಿನವನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ, 10 ನಿಮಿಷದ ನಂತರ ಅದರ ಹವಾ ಸೇವಿಸುವ ಮೂಲಕ ಶೀಘ್ರ ಉಪಶಮನವನ್ನು ಪಡೆಯುತ್ತಿದ್ದೆ ಎಂದು ಹೇಳಿದ್ದಾರೆ.

ಎರಡನೇ ಅಲೆ ತೀವ್ರತೆಯನ್ನು ಗಮನಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಈಗ ರಾತ್ರಿ ಕಫ್ರ್ಯೂ ಹಾಗೂ ವಾರಾಂತ್ಯ ಕಫ್ರ್ಯೂ ಅನ್ನು ಜಾರಿಗೊಳಿಸಿವೆ. ಸರ್ಕಾರದ ಈ ನಿರ್ಧಾರವನ್ನು ಗೌರವಿಸಿ, ಎಲ್ಲರೂ ಮನೆಯಲ್ಲಿ ಸುರಕ್ಷಿತವಾಗಿರಬೇಕು. ಅನವಶ್ಯಕ ವಾಗಿ ಓಡಾಡುವುದನ್ನು ನಿಲ್ಲಿಸಬೇಕು. ಸದಾ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು, ಸಾನಿಟೈಸರ್ ಬಳಸಿ, ಸ್ವಚ್ಛತೆಯನ್ನು ಕಾಯ್ದುಕೊಂಡರೆ ಕೊರೊನಾವನ್ನು ತಡೆಯುವುದು ಸುಲಭ ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹೋಂ ಕ್ವಾರಂಟೈನಲ್ಲಿರುವವರು ವೈದ್ಯರು ಸೂಚಿಸಿರುವ ಅವಧಿಯವರೆಗೆ ಮನೆಯಲ್ಲೇ ಅಗತ್ಯ ಎಚ್ಚರಿಕಾ ಕ್ರಮವನ್ನು ಅನುಸರಿಸುವುದು. ಒಂದು ವೇಳೆ ಆರೋಗ್ಯದಲ್ಲಿ ವ್ಯತ್ಯಾಸಗಳು ಕಂಡುಬಂದರೆ ಕೂಡಲೇ ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವಂತೆ ಗೌಡರು ತಿಳಿ ಹೇಳಿದ್ದಾರೆ.

ಇದೊಂದು ಸಂಕಷ್ಟದ ಕಾಲ, ಇದರಿಂದ ಪಾರಾಗಬೇಕಾದರೆ ಎಲ್ಲರೂ ಸರ್ಕಾ ರದ ಎಚ್ಚರಿಕಾ ಮಾರ್ಗಸೂಚಿಗಳನ್ನು ಪಾಲಿಸುವುದು ಅನಿವಾರ್ಯವಾಗಿದೆ. ಈ ವಿಷಯದಲ್ಲಿ ನಮ್ಮ ಜವಾಬ್ದಾರಿಯೂ ಇದೆ. ಆಗಾಗಿ `ನಮ್ಮ ಆರೋಗ್ಯ, ನಮ್ಮ ಸುರಕ್ಷತೆ’ ಇದಕ್ಕೆ ಆದ್ಯತೆ ನೀಡಿ ಎಲ್ಲರೂ ಸರ್ಕಾರದೊಂದಿಗೆ ಸಹಕರಿಸಿ, ಈ ಒಂದು ವಿಪತ್ತಿನ ಪರಿಸ್ಥಿತಿಯಿಂದ ಪಾರಾಗೋಣವೆಂದು ಮನವಿ ಮಾಡಿದ್ದಾರೆ.

ತಮ್ಮ ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಮೈಸೂರು ತಾಲೂಕಲ್ಲಿ 50 ಸಾವಿರಕ್ಕೂ ಅಧಿಕ ಮಂದಿ ಲಸಿಕೆ ಪಡೆದಿದ್ದಾರೆ. ಅವರಲ್ಲಿ ಯಾವುದೇ ಅಡ್ಡ ಪರಿಣಾಮ ಕಂಡುಬಂದಿಲ್ಲ. ಎಲ್ಲರೂ ಆರೋಗ್ಯದಿಂದಿರುವುದಾಗಿ ನನಗೆ ಮಾಹಿತಿ ಇದೆ. ಹಾಗಾಗಿ ಎಲ್ಲರೂ ನಿಶ್ಚಿಂತೆಯಿಂದ ಲಸಿಕೆ ಪಡೆಯಿರಿ. ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಿ ಎಂದು ಜಿಟಿಡಿ ಜನರನ್ನು ಕೋರಿದ್ದಾರೆ.

Translate »