ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ..!
ಮೈಸೂರು

ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ..!

April 25, 2021

ಸೈಕಲ್‍ನಲ್ಲಿ ಕಟ್ಟಿಗೆ ಸಾಗಿಸಿ ಜೀವನ ಸಾಗಿಸುವ ಸೋಮಣ್ಣನ ಕಥೆ-ವ್ಯಥೆ

ಮೈಸೂರು, ಏ. 24- ಜಗತ್ತಿನಲ್ಲಿ ತಂತ್ರಜ್ಞಾನ ಅಭಿವೃದ್ಧಿಯಾದರೂ, ಬಡ ಜನರ ಬದುಕು ಮಾತ್ರ ಬದಲಾಗಲಿಲ್ಲ, ಅದರಲ್ಲೂ ಕೊರೊನಾ ಆಘಾತದಲ್ಲಿ ನಿರ್ಗತಿಕರ ಬದುಕು ಬೀದಿಗೆ ಬಿದ್ದಿದೆ. ಅದಕ್ಕೆ ಮೈಸೂರು ಈ ಶ್ರಮಿಕನ ಕಥೆ-ವ್ಯಥೆ ನಿದರ್ಶನವಾಗಿದೆ.

‘ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ’ ಎಂಬ ‘ಮಂಕುತಿಮ್ಮ’ನ (ಡಿವಿಜಿ) ಮಾತಿಗೆ ಮೈಸೂರಿನ ಗಾಂಧಿನಗರದಲ್ಲಿ ‘ಫೋರಂ’ ಮಾಲ್ ಎದುರಿನ ನಿವಾಸಿ ಸೋಮಣ್ಣ ಅವರ ಬದುಕು ಉತ್ತಮ ನಿದರ್ಶನ. ಕೊರೊನಾದಂತಹ ಸಂಕಷ್ಟ ಪರಿಸ್ಥಿತಿಯಿಂದಾಗಿ ಮತ್ತಷ್ಟು ಸಮಸ್ಯೆಗೆ ಸಿಲುಕಿರುವ ಅವರ ಕುಟುಂಬದ ಬದುಕಿಗೆ ರಾತ್ರಿ ಕಫ್ರ್ಯೂ, ಸೆಕ್ಷನ್ 144 ನಿಷೇಧಾಜ್ಞೆ ಹಾಗೂ ವಾರಾಂತ್ಯದ ಕಫ್ರ್ಯೂ ಇನ್ನಷ್ಟು ಬರೆ ಎಳೆದಿವೆ.

ಪತ್ನಿ, ಇಬ್ಬರು ಪುತ್ರಿಯರು ಹಾಗೂ ಇಬ್ಬರು ಪುತ್ರರೊಂದಿಗೆ ಜೀವನ ಸಾಗಿಸುತ್ತಿರುವ ಅವಿದ್ಯಾವಂತ ಸೋಮಣ್ಣ ಕಟ್ಟಿಗೆ ಮಾರಿಯೇ ಕುಟುಂಬದ ಸದಸ್ಯರಿಗೆ ಎರಡು ಹೊತ್ತಿನ ಊಟ ಒದಗಿಸುತ್ತಿದ್ದಾರೆ.

ವಾರಾಂತ್ಯ ಕಫ್ರ್ಯೂ ಜಾರಿಯಾಗಿರುವ ಇಂದು ಹಳೇ ಸೈಕಲ್ ತುಂಬಾ ಒಣಗಿದ ಕಟ್ಟಿಗೆ (ಸೌದೆ) ಜೋಡಿಸಿ ಕೊಂಡು ಜೆ.ಕೆ. ಮೈದಾನದ ಸಿಗ್ನಲ್ ಲೈಟ್ ಸರ್ಕಲ್ ನಿಂದ ಓಲ್ಡ್ ಆರ್‍ಎಂಸಿ ಸರ್ಕಲ್ ಕಡೆಗೆ ಸೈಕಲ್ ತಳ್ಳಿಕೊಂಡು ಮೇಲುಸಿರು ಬಿಡುತ್ತಾ ಬರುತ್ತಿದ್ದ 55 ವರ್ಷದ ಸೋಮಣ್ಣ, ಶೇಷಾದ್ರಿ ಐಯ್ಯರ್ ರಸ್ತೆಯ ವಿದ್ಯಾವರ್ಧಕ ಕಾಲೇಜು ಬಳಿ ‘ಮೈಸೂರು ಮಿತ್ರ’ನ ಕಣ್ಣಿಗೆ ಬಿದ್ದರು. ಹಳೇ ಸೈಕಲ್ ತುಂಬಾ ಮುಂದೆ ರಸ್ತೆಯೇ ಕಾಣದಂತೆ ಸೌದೆಯನ್ನು ತುಂಬಿಕೊಂಡು ಬೆವರು ಸುರಿಯುತ್ತಿದ್ದರೂ, ಕಷ್ಟಪಟ್ಟು ಸೈಕಲ್ ತಳ್ಳಿಕೊಂಡು ಬರುತ್ತಿದ್ದ ಅವರನ್ನು ನಿಲ್ಲಿಸಿ ಮಾತನಾಡಿಸಿದಾಗ ಅವರ ಬದುಕಿನ ಕಥೆಯನ್ನು ಏದುಸಿರು ಬಿಡುತ್ತಾ ಹೇಳಿದರು.

‘ಬಡ ಕುಟುಂಬದಲ್ಲಿ ಹುಟ್ಟಿದ ನಾನು ಅರೆ ಹೊಟ್ಟೆಯಲ್ಲೇ ಬೆಳೆದೆ. ವಿದ್ಯೆ ಮರೀಚಿಕೆ. ಕಡೆಗೆ ಹೊಟ್ಟೆ ಪಾಡಿಗಾಗಿ ಸೌದೆ ಮಾರಲಾಂಭಿಸಿದೆ. ಕೊರೊನಾ ಹಿನ್ನೆಲೆಯಲ್ಲಿ ಒಂದೂವರೆ ವರ್ಷದಿಂದ ನಾವು ಅನುಭವಿ ಸುತ್ತಿರುವ ಯಾತನೆಯನ್ನು ಹೇಗೆ ತಾನೆ ವಿವರಿಸಲಿ ಎಂದು ಕಣ್ಣೀರಾದರು. ಮೈಯ್ಯಲ್ಲಿ ಶಕ್ತಿ ಇರುವವರೆಗೆ ದೇಹ ದಂಡಿಸುತ್ತೇನೆ. ನಂತರ ದೇವರು ಮಾಡಿದಂತಾ ಗಲಿ” ಎಂದು ಸೋಮಣ್ಣ ಪಂಕ್ಚರ್ ಆದ ಹಳೇ ಟೈರ್, ಚೈನೇ ಇಲ್ಲದ ಸೈಕಲ್ ತಳ್ಳಿಕೊಂಡು ಮುಂದೆ ಸಾಗಿದರು.
ಕೊರೊನಾ ಹಾವಳಿ ಸೋಮಣ್ಣನಂತಹ ಸಾವಿರಾರು ಕುಟುಂಬಗಳನ್ನು ಶೋಚನೀಯ ಸ್ಥಿತಿಗೆ ತಳ್ಳಿದೆ. ಜನಪ್ರತಿನಿಧಿಗಳು ಮನಸ್ಸು ಮಾಡಿದರೆ ಅವರ ಬದು ಕಿಗೂ ಅಲ್ಪ ಆಸರೆಯಾಗಬಹುದೇನೋ?

ಎಸ್.ಟಿ. ರವಿಕುಮಾರ್

 

Translate »