ಮರದ ಅಂಬಾರಿ ಹೊತ್ತು ಸರಾಗವಾಗಿ ಸಾಗಿದ ಧನಂಜಯ
ಮೈಸೂರು

ಮರದ ಅಂಬಾರಿ ಹೊತ್ತು ಸರಾಗವಾಗಿ ಸಾಗಿದ ಧನಂಜಯ

October 3, 2021

೮೦೦ ಕೆಜಿ ತೂಕ ಹೊತ್ತು ನಿರಾಳ ಹೆಜ್ಜೆ ಹಾಕಿ ಭರವಸೆ ಮೂಡಿಸಿದ
ಮೈಸೂರು, ಅ.೨(ಎಂಟಿವೈ)- ಜಂಬೂಸವಾರಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಗಜಪಡೆಗೆ ಅಂತಿಮ ಹಂತದ ತಾಲೀಮು ನಡೆಸುವ ಪ್ರಕ್ರಿಯೆ ಚುರುಕುಗೊಂಡಿದ್ದು, ಶನಿವಾರ ಧನಂಜಯನಿಗೆ ಮರದ ಅಂಬಾರಿ ಒಳಗೊಂಡAತೆ ೮೦೦ ಕೆಜಿ ತೂಕದ ಭಾರ ಹೊರಿಸಿ ತರಬೇತಿ ನೀಡಲಾಯಿತು.

ನವರಾತ್ರಿ ಆರಂಭಕ್ಕೆ ಕೇವಲ ೪ ದಿನ ಮಾತ್ರ ಇದ್ದು, ಶುಕ್ರವಾರವಷ್ಟೇ ಮರದ ಅಂಬಾರಿ ಕಟ್ಟಿ ತಾಲೀಮು ಆರಂಭಿಸಲಾಗಿತ್ತು. ಮೊದಲ ದಿನ ಅಭಿಮನ್ಯು ಮರದ ಅಂಬಾರಿ ಹೊತ್ತಿದ್ದ. ೨ನೇ ದಿನದ ತಾಲೀಮಿನಲ್ಲಿ ಧನಂಜಯ ಮರದ ಅಂಬಾರಿ ಸೇರಿ ೮೦೦ ಕೆಜಿ ಭಾರವನ್ನು ಸರಾಗವಾಗಿ ಹೊತ್ತು ಸಾಗಿದ. ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗ ಇಂದು ಬೆಳಗ್ಗೆ ಗಾದಿ ಮತ್ತು ನಮ್ದಾ ಕಟ್ಟಲಾಯಿತು. ಬಳಿಕ ಕುಮ್ಕಿ ಆನೆ ಗಳಾದ ಕಾವೇರಿ ಹಾಗೂ ಚೈತ್ರ ಳೊಂದಿಗೆ ಧನಂಜಯ ದಿ.ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ನಿವಾಸದ ಬಳಿಯಿರುವ ಕ್ರೇನ್ ಬಳಿ ಕರೆತಂದು ಮರದ ಅಂಬಾರಿ ಕಟ್ಟಲಾಯಿತು. ಬಳಿಕ ೩೦೦ ಕೆಜಿ ತೂಕದ ಮರಳಿನ ಮೂಟೆ ಹೊರಿಸಲಾಯಿತು. ೨೮೦ ಕೆಜಿ ತೂಕದ ಮರದ ಅಂಬಾರಿ, ೩೦೦ ಕೆಜಿ ಮರಳು ಮೂಟೆ, ೧೨೦ ಕೆಜಿ ತೂಕದ ಗಾದಿ, ಚಾಪು ೧೦೦ ಕೆಜಿ ತೂಕವನ್ನು ಹೊತ್ತ ಧನಂಜಯನನ್ನು ಮಾವುತ ಭಾಸ್ಕರ್ ಮುನ್ನಡೆಸಿದರು. ಎಂದಿನAತೆ ಅರಮನೆ ಮುಂಭಾಗದ ಪ್ರಾಂಗಣದ ಬಳಿ ಕರೆತಂದು ಜಂಬೂಸವಾರಿ ಮಾರ್ಗದಲ್ಲಿ ತಾಲೀಮು ನಡೆಸಲಾಯಿತು. ಈ ಸಂದರ್ಭದಲ್ಲಿ ಡಿಸಿಎಫ್ ಡಾ.ವಿ.ಕರಿಕಾಳನ್, ಪಶುವೈದ್ಯ ಡಾ.ಹೆಚ್.ರಮೇಶ, ಪಶುವೈದ್ಯರ ಸಹಾಯಕ ರಂಗರಾಜು, ಗುರಿಕಾರ ಅಕ್ರಮ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »