ಧರ್ಮಸ್ಥಳ ಸಂಸ್ಥೆಯಿಂದ ಕೊಡಗು  ಮಾಡೆಲ್ ಸ್ಕೂಲ್‍ಗೆ ಲಕ್ಷ ರೂ. ನೆರವು
ಮೈಸೂರು

ಧರ್ಮಸ್ಥಳ ಸಂಸ್ಥೆಯಿಂದ ಕೊಡಗು  ಮಾಡೆಲ್ ಸ್ಕೂಲ್‍ಗೆ ಲಕ್ಷ ರೂ. ನೆರವು

July 27, 2018

ಮೈಸೂರು: ಮೈಸೂರಿನ ಸಾತಗಳ್ಳಿಯ ವಿದ್ಯಾಶಂಕರನಗರದಲ್ಲಿರುವ ಕೊಡಗು ಮಾಡೆಲ್ ಸ್ಕೂಲ್‍ನ ಅಭಿವೃದ್ಧಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ (ಎಸ್‍ಕೆಡಿಆರ್‍ಡಿಪಿ) 1 ಲಕ್ಷ ರೂ. ಅನುದಾನವನ್ನು ಗುರುವಾರ ನೀಡಲಾಯಿತು.

ಶ್ರೀ ಕಾವೇರಿ ಕೊಡವ ಅಸೋಸಿಯೇಷನ್ ಮೈಸೂರು ಈಸ್ಟ್‍ನ ಆಶ್ರಯದಲ್ಲಿ ನಡೆಯುತ್ತಿರುವ ಕೊಡಗು ಮಾಡೆಲ್ ಸ್ಕೂಲ್‍ನ ಆವರಣದಲ್ಲಿ ಎಸ್‍ಕೆಡಿಆರ್‍ಡಿಪಿ ಮೈಸೂರು ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ್ ಅವರು 1 ಲಕ್ಷ ರೂ. ಮೊತ್ತದ ಚೆಕ್ ಅನ್ನು ಅಸೋಸಿಯೇಷನ್ ಅಧ್ಯಕ್ಷ ಕೆ.ಕೆ.ಅಯ್ಯಪ್ಪ ಅವರಿಗೆ ಹಸ್ತಾಂತರ ಮಾಡಿದರು.

ಇದೇ ವೇಳೆ ಮಾತನಾಡಿದ ವಿಜಯಕುಮಾರ್ ನಾಗನಾಳ್, ಇಂದು ನೀಡಲಾದ ಅನುದಾನ ಸದ್ಬಳಕೆಯಾಗುವ ಮೂಲಕ ಈ ಶಿಕ್ಷಣ ಸಂಸ್ಥೆ ಉಜ್ವಲವಾಗಿ ಬೆಳೆಯಲಿ ಎಂದು ಹಾರೈಸಿದರಲ್ಲದೆ, ಉನ್ನತ ಬದಲಾವಣೆ ಆಪೇಕ್ಷಿಸುವ ಮನಸ್ಸುಗಳಿಗೆ ಎಸ್‍ಕೆಡಿಆರ್‍ಡಿಪಿ ಯೋಜನೆ ಸದಾ ನೆರವಾಗಲಿದೆ ಎಂದು ನುಡಿದರು.

ಎಸ್‍ಕೆಡಿಆರ್‍ಡಿಪಿ ಯೋಜನೆಯಡಿ ಹಲವು ಸೇವಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಆ ಮೂಲಕ ಸಮಾಜದ ಉನ್ನತ ಬದಲಾವಣೆಗೆ ಶ್ರಮಿಸಲಾಗುತ್ತಿದೆ. ಬಡತನ ನಮ್ಮ ಶಾಪ ಎಂದು ಅಸಹಾಯಕತೆ ವ್ಯಕ್ತಪಡಿಸುವವರಿಗೆ ಆತ್ಮಸ್ಥೈರ್ಯ ತುಂಬಿ ಅವರನ್ನು ಮುಖ್ಯ ವಾಹಿನಿಗೆ ತರಲಾಗುತ್ತಿದೆ. ಅವರಲ್ಲಿರುವ ಶಕ್ತಿಯನ್ನು ಗುರುತಿಸಿ ಅದರಲ್ಲಿ ತೊಡಗಿಕೊಳ್ಳಲು ಉತ್ತೇಜನ ನೀಡಲಾಗುತ್ತದೆ. ಎಸ್‍ಕೆಡಿಆರ್‍ಡಿಪಿ ಅಡಿಯಲ್ಲಿ ಸ್ಥಾಪನೆಯಾಗುವ ಸ್ವಸಹಾಯ ಸಂಘಗಳಲ್ಲಿ ತೊಡಗಿಸಿಕೊಂಡು ಯಾವ ರೀತಿ ಆರ್ಥಿಕ ಪ್ರಗತಿ ಕಾಣಬೇಕೆಂಬ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ವಿವರಿಸಿದರು.

ಮೈಸೂರು ಜಿಲ್ಲೆಯಲ್ಲಿ 18 ಸಾವಿರ ಸ್ವಸಹಾಯ ಸಂಘಗಳು ಇದ್ದು, ಕಳೆದ ಆರು ವರ್ಷಗಳಲ್ಲಿ ಈ ಸಂಘಗಳಿಂದ 52 ಕೋಟಿ ರೂ. ಉಳಿತಾಯವಾಗಿದೆ. ಆರ್ಥಿಕ ಶಿಸ್ತಿನ ಬಗ್ಗೆ ಅರಿವು ಮೂಡಿಸಿ ತಮ್ಮ ಕುಟುಂಬದ ಅಭಿವೃದ್ಧಿಗೆ ಯಾವ ರೀತಿ ಹಣವನ್ನು ಸದ್ಬಳಕೆ ಮಾಡಬೇಕು ಹಾಗೂ ದುಡಿದ ಹಣದಲ್ಲಿ ಶೇ.10ರಷ್ಟು ಹಣವನ್ನು ಭವಿಷ್ಯಕ್ಕಾಗಿ ಉಳಿತಾಯ ಮಾಡುವ ಬಗೆಯನ್ನು ತಿಳಿಸಿ ವ್ಯಕ್ತಿ, ಕುಟುಂಬ ಹಾಗೂ ಸಮುದಾಯವನ್ನು ಶಕ್ತಿಯಾಗಿಸುವ ಎಸ್‍ಕೆಡಿಆರ್‍ಡಿಪಿ ಯೋಜನೆ ಮಹತ್ವದ ಯೋಜನೆಯಾಗಿದೆ ಎಂದು ನುಡಿದರು.

ಸಮುದಾಯದ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳು, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಮೂಲಸೌಲಭ್ಯ ಒದಗಿಸುವುದು ಸೇರಿದಂತೆ ಹಲವು ಸೇವಾ ಕಾರ್ಯಕ್ರಮಗಳು ಎಸ್‍ಕೆಡಿಆರ್‍ಡಿಪಿ ಅಡಿ ನಡೆಸಲಾಗುತ್ತಿದೆ. ಜೊತೆಗೆ ಅನಾರೋಗ್ಯ ಸೇರಿದಂತೆ ಅನೇಕ ಸಮಸ್ಯೆಗಳಿಂದ ಬಳಲುವ ಹಿರಿಯ ನಾಗರಿಕರಿಗೆ 750ರಿಂದ ಸಾವಿರ ರೂ.ವರೆಗೆ ಮಾಸಾಶನ ನೀಡಲಾಗುತ್ತಿದೆ ಎಂದು ವಿವರಿಸಿದರು.

ಶಾಲೆಯ ಶಿಕ್ಷಣ ಸಮಿತಿ ಅಧ್ಯಕ್ಷೆ ಸಿ.ಕೆ.ಸೀತಮ್ಮ, ಮುಖ್ಯ ಶಿಕ್ಷಕಿ ಅನಿತಾ ಮೇರಿ, ಶಾಲಾ ಕಟ್ಟಡ ಸಮಿತಿ ಅಧ್ಯಕ್ಷ ಪಿ.ಜಯಕುಮಾರ್, ಅಸೋಸಿಯೇಷನ್‍ನ ಖಜಾಂಚಿ ಕೆ.ಕೆ.ಪೊನ್ನಪ್ಪ, ಜಂಟಿ ಕಾರ್ಯದರ್ಶಿ ಪದ್ಮಾ ಬೋಪಯ್ಯ, ಕಾರ್ಯಕಾರಿ ಸಮಿತಿ ಸದಸ್ಯರಾದ ಪಿ.ರಾಜ ಬೋಪಯ್ಯ, ಪಿ.ಸಚಿನ್ ದೇವಯ್ಯ, ಎನ್.ಗಣಪತಿ, ಎ.ಸಿ.ಸುಬ್ಬಯ್ಯ, ಕೆ.ವಾಸು ಸೋಮಯ್ಯ, ಸಿ.ಪಿ.ಸುಬ್ಬಯ್ಯ, ಕವಿತಾ ಸುಬ್ಬಯ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೈಸೂರು ತಾಲೂಕು ಯೋಜನಾಧಿಕಾರಿ ಆನಂದ್, ಯೋಜನೆಯ ರಾಘವೇಂದ್ರನಗರ ವಲಯ ಮೇಲ್ವಿಚಾರಕ ಉಮೇಶ್, ಸೇವಾ ಪ್ರತಿನಿಧಿಗಳಾದ ಚಂದ್ರಕಲಾ, ಅಮೀನಾ ಮತ್ತಿತರರು ಹಾಜರಿದ್ದರು.

ಬಡ ಮಕ್ಕಳಿಗೆ ಆಶಾಕಿರಣವಾಗಿರುವ ಶಾಲೆ

ಮೈಸೂರು:  ಶ್ರೀ ಕಾವೇರಿ ಕೊಡವ ಅಸೋಸಿಯೇಷನ್ ಮೈಸೂರು ಈಸ್ಟ್‍ನ ಕೊಡಗು ಮಾಡೆಲ್ ಸ್ಕೂಲ್‍ನಲ್ಲಿ ಪ್ರಸ್ತುತ ಪ್ಲೇಹೋಂನಿಂದ 8ನೇ ತರಗತಿಯವರೆಗೆ 270ಕ್ಕೂ ಹೆಚ್ಚು ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದು, ಆ ಮೂಲಕ ಶಾಲೆಯು ಮಾದರಿ ಶಾಲೆಯಾಗಿ ಆಗಿ ಹೊರಹೊಮ್ಮಿದೆ.

2002ರಲ್ಲಿ ಎಲ್‍ಕೆಜಿಯಿಂದ ಆರಂಭವಾದ ಶಾಲೆ ಇಂದು 8ನೇ ತರಗತಿಯವರೆಗೆ ವಿಸ್ತøತ ಕಂಡಿದ್ದು, ಮುಂಬರುವ ಶೈಕ್ಷಣಿಕ ವರ್ಷಗಳಲ್ಲಿ 9ನೇ ಹಾಗೂ 10ನೇ ತರಗತಿ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಅನುಮೋದನೆಯೂ ದೊರೆತಿದೆ. ಸಾಕಷ್ಟು ಬಡಕುಟುಂಬದ ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಸಮರ್ಪಕ ಮೂಲಭೂತ ಸೌಲಭ್ಯದೊಂದಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಅಸೋಸಿಯೇಷನ್ ಹಾಗೂ ಶಿಕ್ಷಕ ವರ್ಗ ಶ್ರಮಿಸುತ್ತಿದೆ.

ಕೊಡಗು ಮಾಡೆಲ್ ಸ್ಕೂಲ್ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶ ಹೊಂದಿರುವ ಶಿಕ್ಷಣ ಸಂಸ್ಥೆಯಾಗಿದೆ. ರಾಜ್ಯ ಪಠ್ಯಕ್ರಮ ಹಾಗೂ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದ್ದು, 17ಕ್ಕೂ ಹೆಚ್ಚು ಶಿಕ್ಷಕರು ಹಾಗೂ ನಾಲ್ವರು ಆಯಾಗಳು ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಮರ್ಪಕ ಮೂಲಸೌಲಭ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಒತ್ತು ನೀಡುವ ಮೂಲಕ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ಶಿಕ್ಷಣ ನೀಡಲಾಗುತ್ತಿದೆ ಎಂದು ಶ್ರೀ ಕಾವೇರಿ ಕೊಡವ ಅಸೋಸಿಯೇಷನ್ ಮೈಸೂರು ಈಸ್ಟ್‍ನ ಅಧ್ಯಕ್ಷ ಕೆ.ಕೆ.ಅಯ್ಯಪ್ಪ ತಿಳಿಸಿದರು.

Translate »