ಊಟದ ನಂತರ ಅಸ್ವಸ್ಥರಾಗಿದ್ಧ ಆರ್‌ಐಇ ಹಾಸ್ಟೆಲ್ ವಿದ್ಯಾರ್ಥಿನಿಯರು
ಮೈಸೂರು

ಊಟದ ನಂತರ ಅಸ್ವಸ್ಥರಾಗಿದ್ಧ ಆರ್‌ಐಇ ಹಾಸ್ಟೆಲ್ ವಿದ್ಯಾರ್ಥಿನಿಯರು

July 27, 2018

ಮೈಸೂರು:  ಬುಧವಾರ ರಾತ್ರಿ ಊಟ ಮಾಡಿದ ಬಳಿಕೆ ಮೈಸೂರಿನ ಮಾನಸಗಂಗೋತ್ರಿ ಬಳಿಯ ರೀಜಿನಲ್ ಇನ್‍ಸ್ಟಿಟ್ಯೂಟ್ ಆಫ್ ಎಜುಕೇಷನ್(ಆರ್‌ಐಇ) ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ಧರು.

ಅಂದು ರಾತ್ರಿ 8 ಗಂಟೆ ವೇಳೆ ಊಟ ಮಾಡಿದ ನಂತರ ರಾತ್ರಿ ಸುಮಾರು 8.45 ಗಂಟೆ ವೇಳೆ 250 ಮಂದಿ ವಿದ್ಯಾರ್ಥಿನಿಯರ ಪೈಕಿ ಗಂಗಾ ಹಾಸ್ಟೆಲ್‍ನ 22 ಮಂದಿಗೆ ವಾಂತಿ ಆರಂಭವಾಯಿತು. ಅಸ್ವಸ್ಥರಾದಂತೆ ಕಂಡ ಅವರನ್ನು ಸರಸ್ವತಿಪುರಂನ ಕಾಮಾಕ್ಷಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿ 17 ಮಂದಿ ಚೇತರಿಸಿಕೊಂಡು ಹಾಸ್ಟೆಲ್‍ಗೆ ಹಿಂದಿರುಗಿದರು.

ಅಸ್ವಸ್ಥರಾಗಿದ್ದ ತೇಜಸ್ವಿನಿ, ಪೂಜಾ, ಅಂಕಿತಾ, ರೂಪಲ್ ಹಾಗೂ ವರ್ಷ ಅವರನ್ನು ಒಳರೋಗಿಗಳಾಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಗಂಗಾ ಹಾಸ್ಟೆಲ್‍ನಲ್ಲಿದ್ಧ 250 ಮಂದಿ ಪೈಕಿ ಕೇವಲ 22 ವಿದ್ಯಾರ್ಥಿನಿಯರಿಗೆ ಊಟದ ನಂತರ ತೊಂದರೆ ಕಾಣಿಸಿಕೊಂಡ ಕಾರಣ ಮುಂಜಾಗ್ರತವಾಗಿ ನಾವು ತಕ್ಷಣ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿದ್ದೇವೆ ಐವರು ಮಾತ್ರ ದಾಖಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹಾಸ್ಟೆಲ್ ವಾರ್ಡ್‍ನ ಚಂದ್ರಣ್ಣ ಅವರು `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಆಹಾರ ಪದಾರ್ಥವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವಿದ್ಯಾರ್ಥಿಗಳು ಅಸ್ವಸ್ಥರಾಗಲು ಕಾರಣವೇನೆಂದು ತಿಳಿಯಲು ಕ್ರಮಕೈಗೊಳ್ಳಲಾಗಿದೆ ಎಂದೂ ಅವರು ತಿಳಿಸಿದರು.

Translate »