ಡೆಂಗ್ಯೂ ಬಗ್ಗೆ ಎಚ್ಚರ ವಹಿಸಲು ಡಿಹೆಚ್‍ಓ ಸಲಹೆ ರೋಗ ಲಕ್ಷಣ ಕಂಡುಬಂದರೆ ಕೂಡಲೇ ವೈದ್ಯರ ಸಂಪರ್ಕಿಸಲು ಸೂಚನೆ
ಮೈಸೂರು

ಡೆಂಗ್ಯೂ ಬಗ್ಗೆ ಎಚ್ಚರ ವಹಿಸಲು ಡಿಹೆಚ್‍ಓ ಸಲಹೆ ರೋಗ ಲಕ್ಷಣ ಕಂಡುಬಂದರೆ ಕೂಡಲೇ ವೈದ್ಯರ ಸಂಪರ್ಕಿಸಲು ಸೂಚನೆ

June 10, 2018

ಮೈಸೂರು:  ಡೆಂಗ್ಯೂ ಜ್ವರದ ಲಕ್ಷಣಗಳು ಕಂಡಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಇದಕ್ಕೂ ಮುಖ್ಯವಾಗಿ ಡೆಂಗ್ಯೂ ರೋಗಾಣು ತಗುಲದಂತೆ ಎಚ್ಚರ ವಹಿಸುವುದೇ ಸೂಕ್ತ. ಹೀಗಾಗಿ ಈ ಬಗ್ಗೆ ಸಾರ್ವಜನಿಕರು ಹೆಚ್ಚು ಜಾಗೃತರಾಗಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಸವರಾಜು ತಿಳಿಸಿದರು.

ಡೆಂಗ್ಯೂ ಸಂಬಂಧ ಸಾರ್ವಜನಿಕರಿಗೆ ಜಾಗೃತಿ ಸಂದೇಶ ನೀಡಲು ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಈಗಾಗಲೇ ಮಳೆಗಾಲ ಆರಂಭವಾಗಿದ್ದು, ನಿಂತ ನೀರಿನಲ್ಲಿ ಡೆಂಗ್ಯೂ ಹರಡುವ ಎಡೆಸ್ ಸೊಳ್ಳೆ ಸಂತತಿ ಉತ್ಪತ್ತಿಯಾಗುವ ಹಿನ್ನೆಲೆಯಲ್ಲಿ ಮನೆ ಆವರಣದಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಶೀಘ್ರವಾಗಿ ಈ ಸೋಂಕನ್ನು ಪತ್ತೆ ಮಾಡುವ ಮೂಲಕ ಕ್ರಮಬದ್ಧವಾಗಿ ಅಗತ್ಯ ಚಿಕಿತ್ಸೆ ನೀಡಿದರೆ, ಯಾವುದೇ ಪ್ರಾಣ ಹಾನಿಯಾಗುವ ಆತಂಕ ಇರುವುದಿಲ್ಲ. ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಶುದ್ಧವಾಗಿಡುವ ಜೊತೆಗೆ ನೀರು ಒಂದೆಡೆ ಶೇಖರಣೆಯಾಗದಂತೆ ನೋಡಿಕೊಂಡರೆ ಈ ಎಡೆಸ್ ಸೊಳ್ಳೆಗಳ ಸಂತಾನೋತ್ಪತ್ತಿ ಸಾಧ್ಯವಿಲ್ಲ ಎಂದು ಹೇಳಿದರು.

ಮೀನಿಲ್ಲದ ಅಕ್ವೇರಿಯಂನಲ್ಲಿ ನೀರು ಶೇಖರಣೆ ಬೇಡ: ಡೆಂಗ್ಯೂ ಸಂಪೂರ್ಣವಾಗಿ ತಡೆಗಟ್ಟಬಹುದಾದ ರೋಗವಾಗಿರುವ ಹಿನ್ನೆಲೆಯಲ್ಲಿ ಆತಂಕಕ್ಕೀಡಾಗುವ ಅಗತ್ಯವಿಲ್ಲ. ಆದರೆ ರೋಗಾಣು ತಗುಲಿದ ಬಳಿಕ ಚಿಂತೆಗೀಡಾಗುವ ಬದಲು ಮುನ್ನೆಚ್ಚರಿಕಾ ಕ್ರಮ ಕೈಗೊಂಡು ಅದರಿಂದ ದೂರವಿರುವುದಕ್ಕೆ ಸಾರ್ವನಿಕರು ಗಮನ ನೀಡಬೇಕು. ಡೆಂಗ್ಯೂ ನಿಯಂತ್ರಿಸಲು ಸಾರ್ವಜನಿಕರ ಸಹಭಾಗಿತ್ವ ಮುಖ್ಯ ಪಾತ್ರ ವಹಿಸುತ್ತದೆ. ಕೆಲವರು ಮನೆಗಳಲ್ಲಿ ಅಕ್ವೇರಿಯಂ ಇಟ್ಟಿರುತ್ತಾರೆ. ಆದರೆ ಅದರಲ್ಲಿ ಮೀನುಗಳು ಇಲ್ಲವಾಗಿದ್ದರೂ ನೀರು ಶೇಖರಣೆ ಮಾಡಿ ಇಟ್ಟುಕೊಂಡಿರುತ್ತಾರೆ. ಇದರಿಂದ ಅಕ್ವೇರಿಯಂನಲ್ಲಿ ನಿಂತ ನೀರಿನಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಮೀನುಗಳಿಲ್ಲದ ಅಕ್ವೇರಿಯಂಗಳಲ್ಲಿ ನೀರು ಶೇಖರಣೆ ಮಾಡಿಡುವುದು ಸರಿಯಲ್ಲ ಎಂದು ಡಾ.ಬಸವರಾಜು ವಿವರಿಸಿದರು.

843 ಪ್ರಕರಣ ಖಾತ್ರಿಯಾಗಿದ್ದವು: ಕಳೆದ ವರ್ಷ ಜಿಲ್ಲೆಯಲ್ಲಿ ಒಟ್ಟು 4,437 ಶಂಕಿತ ಡೆಂಗ್ಯೂ ಪ್ರಕರಣಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ 843 ಪ್ರಕರಣಗಳಲ್ಲಿ ಡೆಂಗ್ಯೂ ಸೋಂಕು ಖಾತ್ರಿಯಾಗಿತ್ತು. ಇದರಲ್ಲಿ ಇಬ್ಬರು ಮಾತ್ರ ಸಾವನ್ನಪ್ಪಿದರು. ಡೆಂಗ್ಯೂ ಸೋಂಕಿಗೆ ಶೀಘ್ರ ಮತ್ತು ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಿದ್ದು, ಇದರ ಬಗ್ಗೆ ಭಯಭೀತರಾಗುವುದು ಅಗತ್ಯವಿಲ್ಲ. ಡೆಂಗ್ಯೂ ಸೋಂಕಿನ ಜತೆಗೆ ಇನ್ನಿತರ ಅನಾರೋಗ್ಯ ಸಮಸ್ಯೆ ಇದ್ದು ಸೂಕ್ತ ರೀತಿಯಲ್ಲಿ ಚಿಕಿತ್ಸೆ ಪಡೆದುಕೊಳ್ಳದಿದ್ದರೆ, ಪ್ರಾಣಾಪಾಯ ಸಂಭವಿಸಬಹುದು ಎಂದು ಹೇಳಿದರು.

ಜಿಲ್ಲೆಯಲ್ಲಿಲ್ಲ ನಿಫಾ: ನಂಜನಗೂಡು ತಾಲೂಕಿನಲ್ಲಿ ನಿಫಾ ಸೋಂಕಾಗಲೀ ಅಥವಾ ಶಂಕಿತ ನಿಫಾ ಸೋಂಕಾಗಲಿ ಹರಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಡಾ.ಬಸವರಾಜು, ಇದು ಕೇವಲ ವದಂತಿಯಷ್ಟೇ. ಹೀಗಾಗಿ ಸಾರ್ವಜನಿಕರು ಆಂತಕಪಡುವ ಅಗತ್ಯವಿಲ್ಲ. ಈಗಾಗಲೇ ತಾಲೂಕು ಆರೋಗ್ಯಾಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ನಾನು ಸಹ ಭೇಟಿ ನೀಡಿ ಪರಿಶೀಲಿಸಿದ್ದು, ನಿಫಾ ಇಲ್ಲವೇ ಶಂಕಿತ ನಿಫಾ ಸೋಂಕಿನಿಂದ ಜ್ವರ ಕಾಣ ಸಿಕೊಂಡಿಲ್ಲ. ಇದು ಕೇವಲ ಸಾಮಾನ್ಯ ಜ್ವರವಷ್ಟೇ ಎಂದು ಸ್ಪಷ್ಟಪಡಿಸಿದರು.

ಮೈಸೂರು ನಗರದಲ್ಲಿ ಮಹಾತ್ಮಗಾಂಧಿ ರಸ್ತೆ ಮಾರುಕಟ್ಟೆ ಸೇರಿದಂತೆ ಅನೇಕ ಕಡೆ ನೀರು ನಿಲ್ಲುವ ಬಗ್ಗೆ ಇದೇ ವೇಳೆ ಪ್ರತಿಕ್ರಿಯಿಸಿದ ಡಾ.ಬಸವರಾಜು, ಮಹಾನಗರ ಪಾಲಿಕೆ ಈ ಬಗ್ಗೆ ಕ್ರಮ ವಹಿಸಬೇಕಾಗುತ್ತದೆ. ಈ ಸಂಬಂಧ ಅವರಿಗೆ ಮಾಹಿತಿ ನೀಡಿ ಸೂಕ್ತ ಕ್ರಮ ವಹಿಸಲು ತಿಳಿಸಲಾಗುವುದು ಎಂದರು. ಕೊಲಂಬಿಯಾ ಏಷಿಯಾ ಆಸ್ಪತ್ರೆಯ ವೈದ್ಯರಾದ ಡಾ.ಉಪೇಂದ್ರಶೆಣೈ, ಡಾ.ಎಂ.ಜಿ.ಸತೀಶ್‍ಕುಮಾರ್, ಡಾ.ಸರಿತಾ ಪವಿತ್ರನ್, ಡಾ.ಯು.ಎಸ್.ಭುವನೇಶ್ವರ್, ಡಾ.ಮಹದೇವ್ ಗೋಷ್ಠಿಯಲ್ಲಿದ್ದರು.

Translate »