ಮೈಸೂರಲ್ಲಿ ಮಾರಕ ಡೆಂಗ್ಯೂ, ಚಿಕನ್ ಗುನ್ಯಾ ಅರಿವು ಜಾಥ
ಮೈಸೂರು

ಮೈಸೂರಲ್ಲಿ ಮಾರಕ ಡೆಂಗ್ಯೂ, ಚಿಕನ್ ಗುನ್ಯಾ ಅರಿವು ಜಾಥ

July 26, 2018

ಮೈಸೂರು: ಡೆಂಗ್ಯೂ ಹಾಗೂ ಚಿಕನ್‍ಗುನ್ಯಾ ಕುರಿತು ಮೈಸೂರಿನ ಕುವೆಂಪುನಗರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ಜಾಗೃತಿ ಜಾಥದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಭಿತ್ತಿ ಪತ್ರ ವಿತರಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ಕುವೆಂಪುನಗರ ಜೋಡಿ ರಸ್ತೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಬುಧವಾರ ಬೆಳಿಗ್ಗೆ ಜಾಗೃತಿ ಜಾಥಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಬಸವರಾಜು, ಪಾಲಿಕೆ ಸದಸ್ಯರಾದ ಎಂ.ಕೆ.ಶಂಕರ್ ಹಾಗೂ ಕೆ.ವಿ.ಮಲ್ಲೇಶ್ ಚಾಲನೆ ನೀಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಆರಂಭವಾದ ಜಾಥ ಶಾಂತಿಸಾಗರ್ ಕಾಂಫ್ಲೆಕ್ಸ್, ಎಂ.ಬ್ಲಾಕ್ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಡೆಂಗ್ಯೂ ಮತ್ತು ಚಿಕನ್ ಗುನ್ಯಾ ಬಗ್ಗೆ ಎಚ್ಚರದಿಂದಿರುವಂತೆ ಅರಿವು ಮೂಡಿಸಿದರು.

ಸೊಳ್ಳೆಯಿಂದ ಡೆಂಗ್ಯೂ ಮತ್ತು ಚಿಕನ್‍ಗುನ್ಯಾ ಹರಡುತ್ತವೆ. ಹಾಗಾಗಿ ಸೊಳ್ಳೆಗಳಿಂದ ರಕ್ಷಣೆ ಪಡೆಯುವ ವಿಧಾನವನ್ನು ಅಳವಡಿಸಿಕೊಳ್ಳಬೇಕು. ತೀವ್ರ ಜ್ವರ, ತಲೆನೋವು, ಕಣ್ಣುಗುಡ್ಡೆಯ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ನೋವು, ಮೂಗು, ಬಾಯಿ, ವಸಡುಗಳಿಂದ ರಕ್ತಸ್ರಾವವಾಗುತ್ತಿದ್ದರೆ ಕೂಡಲೇ ಸಮೀಪದ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳುವುದರೊಂದಿಗೆ ಅಗತ್ಯ ಚಿಕಿತ್ಸೆ ಪಡೆದುಕೊಳ್ಳುವಂತೆ ಜಾಥದಲ್ಲಿ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲಾಯಿತು.

ಇದೇ ವೇಳೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಬಸವರಾಜು ಮಾತನಾಡಿ, ಕಳೆದ ಕೆಲವು ದಿನಗಳಿಂದ ಮಳೆ ಸುರಿಯುತ್ತಿದ್ದು, ಚರಂಡಿ, ಕಾಯಿಮೊಟ್ಟೆ, ಟೈರ್. ಪ್ಲಾಸ್ಟಿಕ್ ಡ್ರಮ್ ಸೇರಿದಂತೆ ವಿವಿಧೆಡೆ ಸಂಗ್ರಹವಾಗಿರುವ ನೀರಿನಲ್ಲಿ ಸೊಳ್ಳೆಗಳ ಉತ್ಪತ್ತಿಯಾಗುತ್ತವೆ. ಚರಂಡಿಗಳಲ್ಲಿಯೂ ಒಂದೆರಡು ದಿನ ನೀರು ಸಂಗ್ರಹವಾಗಿದ್ದರೆ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ಸೋಂಕು ಹರಡುವ ಸೊಳ್ಳೆಗಳ ಸಂಖ್ಯೆ ಹೆಚ್ಚಾಗುತ್ತವೆ. ಈ ಹಿನ್ನೆಲೆಯಲ್ಲಿ ಸೊಳ್ಳೆಗಳ ಉತ್ಪತ್ತಿಯಾಗುವುದನ್ನು ತಡೆಗಟ್ಟುವುದರೊಂದಿಗೆ ಸೊಳ್ಳೆಗಳಿಂದ ಕಚ್ಚಿಸಿಕೊಳ್ಳುವುದನ್ನು ತಡೆಗಟ್ಟಲು ಸೊಳ್ಳೆ ಪರದೆ, ಸೊಳ್ಳೆ ಬತ್ತಿ, ಕಾಯಿಲ್ ಬಳಸುವುದಕ್ಕೆ ಮುಂದಾಗುವಂತೆ ಅವರು ಸಲಹೆ ನೀಡಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಚಿದಂಬರ ಮಾತನಾಡಿ, ಇಲಾಖೆಯ ವತಿಯಿಂದ ಎಷ್ಟೇ ಜಾಗೃತಿ ಮೂಡಿಸಿದರೂ ಸೊಳ್ಳೆಗಳ ಉತ್ಪಾದನೆಗೆ ಪೂರಕವಾದ ವಾತಾವರಣವನ್ನು ಕೆಲವು ಮನೆಗಳಲ್ಲಿ ಕಲ್ಪಿಸಲಾಗುತ್ತಿದೆ. ಬೆಡ್‍ರೋಮ್‍ಗಳಲ್ಲಿ ಇಡುವ ವಾಸ್ತು ಗಿಡದ ವಾಸ್‍ಗಳಲ್ಲಿ, ನೀರಿನ ಮನೆಯಲ್ಲಿರುವ ತೊಟ್ಟಿಗಳಲ್ಲಿ, ಹೂವಿನ ಕಪಾಟು, ಏರ್‍ಕೂಲರ್ ಸೇರಿದಂತೆ ಮನೆಯಲ್ಲಿರುವ ಕೆಲವು ವಸ್ತುಗಳಲ್ಲಿ ನೀರು ಐದಾರು ದಿನ ಸಂಗ್ರಹವಾದರೆ ಸೊಳ್ಳೆಗಳ ಉತ್ಪಾದನೆಗೆ ಕಾರಣವಾಗುತ್ತದೆ. ಎರಡು ದಿನ ನೀರು ಸಂಗ್ರಹಿಸಿದ್ದರೆ ಲಾರ್ವಗಳು ಕಂಡು ಬರುತ್ತದೆ. ಈ ಹಿನ್ನೆಲೆಯಲ್ಲಿ ನೀರನ್ನು ಚೆಲ್ಲುವಂತೆ ಸಲಹೆ ನೀಡಿದರೂ ಜನರು ಸಹಕರಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಡೆಂಗ್ಯೂ ಹಾಗೂ ಚಿಕನ್‍ಗುನ್ಯಾ ಸೋಂಕು ಕಾಣಿಸಿಕೊಳ್ಳುವ ಮುನ್ನವೇ ಜಾಗೃತಿ ಜಾಥ ನಡೆಸಿ ಅರಿವು ಮೂಡಿಸುವುದರೊಂದಿಗೆ ಕುವೆಂಪುನಗರದಲ್ಲಿರುವ ಮನೆಗಳು, ಅಂಗಡಿಗಳು ಸೇರಿದಂತೆ ಸುಮಾರು 4 ಸಾವಿರ ಬಿತ್ತಿಪತ್ರವನ್ನು ವಿತರಿಸಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Translate »