ಮೈಸೂರಲ್ಲಿ ಉದ್ಯೋಗ ಮೇಳ ಪಾಲ್ಗೊಂಡಿದ್ದ 720 ಮಂದಿಯಲ್ಲಿ 180 ಜನರಿಗೆ ಉದ್ಯೋಗ ಭಾಗ್ಯ
ಮೈಸೂರು

ಮೈಸೂರಲ್ಲಿ ಉದ್ಯೋಗ ಮೇಳ ಪಾಲ್ಗೊಂಡಿದ್ದ 720 ಮಂದಿಯಲ್ಲಿ 180 ಜನರಿಗೆ ಉದ್ಯೋಗ ಭಾಗ್ಯ

July 26, 2018

ಮೈಸೂರು: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಡಿ ಮೈಸೂರು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ 720 ಉದ್ಯೋಗಾಕಾಂಕ್ಷಿಗಳ ಪೈಕಿ 180 ಮಂದಿ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡರು.

ವಿಶ್ವ ಕೌಶಲ್ಯ ದಿನದ ಅಂಗವಾಗಿ ಮೈಸೂರಿನ ಎನ್‍ಆರ್ ಮೊಹಲ್ಲಾದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಏರ್ಪಡಿಸಿದ್ದ ಉದ್ಯೋಗ ಮೇಳದಲ್ಲಿ ಮೈಸೂರು ನಗರ ಹಾಗೂ ಗ್ರಾಮಾಂತರ ಭಾಗ ಮತ್ತು ಚಾಮರಾಜನಗರ, ಮಂಡ್ಯ ಸೇರಿದಂತೆ ಇನ್ನಿತರ ಜಿಲ್ಲೆಗಳ ಉದ್ಯೋಗಾಕಾಂಕ್ಷಿಗಳು ವಿವಿಧ ಖಾಸಗಿ ಕಂಪನಿಗಳಲ್ಲಿ ಉದ್ಯೋಗಕ್ಕಾಗಿ ಸಂದರ್ಶನ ಎದುರಿಸಿದರು.

ಕೇಂದ್ರದ ಆವರಣದಲ್ಲಿ ಇಂದು ಬೆಳಿಗ್ಗೆ 10ರಿಂದ ಮೇಳದಲ್ಲಿ ಪಾಲ್ಗೊಳ್ಳಲು ಆಧಾರ್ ಸಂಖ್ಯೆ ನಮೂದಿಸಿ ನೋಂದಾಯಿಸಿಕೊಂಡ ಉದ್ಯೋಗಾಕಾಂಕ್ಷಿಗಳು, ವಿದ್ಯಾರ್ಹತೆ ಸೇರಿದಂತೆ ಉದ್ಯೋಗಕ್ಕೆ ಸಂಬಂಧಿಸಿದ ಸ್ವವಿವರದ ಪ್ರತಿಯೊಂದಿಗೆ ಸಂದರ್ಶನದಲ್ಲಿ ಪಾಲ್ಗೊಂಡರು.

ಯುವತಿಯರೇ ಮೇಲುಗೈ: ಮೇಳದಲ್ಲಿ ಭಾಗವಹಿಸಿದ್ದ ಒಟ್ಟು 720 ಉದ್ಯೋಗಾಕಾಂಕ್ಷಿಗಳಲ್ಲಿ 486 ಮಂದಿ ಪುರುಷ ಅಭ್ಯರ್ಥಿಗಳಾದರೆ, ಕೇವಲ 234 ಮಂದಿ ಮಹಿಳಾ ಅಭ್ಯರ್ಥಿಗಳು ಇದ್ದರು. ಈ ಪೈಕಿ 25 ಮಂದಿ ಪುರುಷ ಅಭ್ಯರ್ಥಿಗಳು ಹಾಗೂ 55 ಮಂದಿ ಮಹಿಳಾ ಅಭ್ಯರ್ಥಿಗಳು ವಿವಿಧ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಂಡರು. ಪುರುಷರಿಗಂತಲೂ ಕಡಿಮೆ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಮಹಿಳಾ ಅಭ್ಯರ್ಥಿಗಳು ಹೆಚ್ಚು ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾದರು.

ಮೇಳದಲ್ಲಿ ಮೈಸೂರಿನ ಸುರಭಿ ಪ್ಲಾನ್‍ಟೆಕ್, ಬಿ.ಎಸ್.ಗೌಡ ಎಂಟರ್ ಪ್ರೈಸಸ್, ಯುರೇಕಾ ಫೋಬ್ರ್ಸ್, ತೇಜಸ್ವಿನಿ ಎಂಟರ್ ಪ್ರೈಸಸ್, ಹಿಂದುಜಾ ಗ್ಲೋಬಲ್ ಸಲ್ಯೂಷನ್, ರಾಜಾ ಬಯೋಟೆಕ್, ಗ್ರಾಸ್ ರೋಟ್, ಉಡ್‍ಲ್ಯಾಂಡ್, ರಾಣೆ ಮದ್ರಾಸ್ ಪ್ರೈ.ಲಿ. ಹಾಗೂ ಬೆಂಗಳೂರಿನ ರೀಟೇಲ್ ವಕ್ರ್ಸ್ ಇಂಡಿಯಾ ಪ್ರೈ.ಲಿ. ಸೇರಿದಂತೆ 24 ವಿವಿಧ ಕಂಪನಿಗಳು ಮೇಳದಲ್ಲಿ ಪಾಲ್ಗೊಂಡಿದ್ದವು.
ಎಸ್‍ಎಸ್‍ಎಲ್‍ಸಿ ಉತ್ತೀರ್ಣ-ಅನುತ್ತೀರ್ಣ, ಪಿಯುಸಿ, ಜೆಓಸಿ, ಐಟಿಐ, ಡಿಪ್ಲೋಮಾ ಹಾಗೂ ಯಾವುದೇ ವಿಷಯದಲ್ಲಿ ಪದವಿ ವಿದ್ಯಾರ್ಹತೆ ಹೊಂದಿರುವ ಉದ್ಯೋಗಾಕಾಂಕ್ಷಿಗಳಿಗೆ ಮೇಳದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕಿ ಡಿ.ಎಂ.ರಾಣಿ ಹಾಗೂ ಕೇಂದ್ರದ ಸಿಬ್ಬಂದಿ ಸೇರಿದಂತೆ ವಿವಿಧ ಕಂಪನಿಗಳ ಪ್ರತಿನಿಧಿಗಳು ಹಾಜರಿದ್ದರು.

Translate »