ಮಹಾರಾಜ ಪದವಿ ಪೂರ್ವ ಕಾಲೇಜು ಕಟ್ಟಡ ದುರಸ್ಥಿ ಕಾರ್ಯ ಕಾರ್ಮಿಕರ ಕುಟುಂಬಕ್ಕೆ ಆರೋಗ್ಯ ತಪಾಸಣೆ ಸ್ಫೂರ್ತಿ ಮಹಿಳಾ ಘಟಕದಿಂದ ಆಯೋಜನೆ
ಮೈಸೂರು

ಮಹಾರಾಜ ಪದವಿ ಪೂರ್ವ ಕಾಲೇಜು ಕಟ್ಟಡ ದುರಸ್ಥಿ ಕಾರ್ಯ ಕಾರ್ಮಿಕರ ಕುಟುಂಬಕ್ಕೆ ಆರೋಗ್ಯ ತಪಾಸಣೆ ಸ್ಫೂರ್ತಿ ಮಹಿಳಾ ಘಟಕದಿಂದ ಆಯೋಜನೆ

July 26, 2018

ಮೈಸೂರು: ಮೈಸೂರಿನ ಮಹಾರಾಜ ಪದವಿ ಪೂರ್ವ ಕಾಲೇಜಿನ ಕಟ್ಟಡದ ದುರಸ್ಥಿ ಕಾಮಗಾರಿಯಲ್ಲಿ ತೊಡಗಿರುವ ಕಟ್ಟಡ ಕಾರ್ಮಿಕರು ಹಾಗೂ ಅವರ ಕುಟುಂಬ ಸದಸ್ಯರಿಗೆ ಬುಧವಾರ ಬಿಲ್ಡರ್ಸ್ ಅಸೋಸಿಯೇಷನ್ ಮೈಸೂರು ಘಟಕದ ಸಹಯೋಗದಲ್ಲಿ `ಸ್ಫೂರ್ತಿ’ ಮಹಿಳಾ ಘಟಕ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿದ್ದು, ಇದರಲ್ಲಿ 120ಕ್ಕೂ ಹೆಚ್ಚು ಮಂದಿ ವಿವಿಧ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆದುಕೊಂಡರು.

`ಹೆಲ್ತ್ ಆನ್ ವೀಲ್ಸ್’ ಕಾರ್ಯಕ್ರಮದಡಿ ಸ್ಫೂರ್ತಿ ಮಹಿಳಾ ಘಟಕ, ಬಿಲ್ಡರ್ಸ್ ಅಸೋಸಿಯೇಷನ್ ಮೈಸೂರು ಘಟಕ ಹಾಗೂ ಮೈಸೂರು ಬಿಲ್ಡರ್ಸ್ ಚಾರಿಟೆಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಮೈಸೂರಿನ ಮಹಾರಾಜ ಪದವಿ ಪೂರ್ವ ಕಾಲೇಜಿನ ಕೊಠಡಿಯೊಂದರಲ್ಲಿ ಆಯೋಜಿಸಿದ್ದ ಶಿಬಿರವನ್ನು ಕಾಲೇಜಿನ ಪ್ರಾಂಶುಪಾಲ ಟಿ.ಆರ್.ಸಿದ್ದರಾಜು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಅನಕ್ಷರತೆ, ಬಡತನ ವಿವಿಧ ಕಾರಣದಿಂದ ಕಟ್ಟಡ ಕಾರ್ಮಿಕರಾಗಿರುವವರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸ್ಫೂರ್ತಿ ಸಂಸ್ಥೆ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳುತ್ತಿದ್ದು, ಶ್ರಮಜೀವಿಗಳಿಗೆ ಸಾಮಾನ್ಯವಾಗಿ ಆರೋಗ್ಯ ಸಮಸ್ಯೆಗಳು ಕಾಡುವುದಿಲ್ಲ. ಆದರೂ ಧೂಳಿನಲ್ಲಿ ಕೆಲಸ ಮಾಡಬೇಕಾಗಿರುವುದರಿಂದ ಸಣ್ಣ-ಪುಟ್ಟ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇಂತಹ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ಕೊಡಿಸಲು ಮುಂದಾಗಿರುವುದು ಶ್ಲಾಘನೀಯ ಎಂದರು.

ಕಟ್ಟಡ ಕಾರ್ಮಿಕರು ಸಹ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದಾಗಬೇಕು. ನಾವೂ ಕೂಲಿ ಕಾರ್ಮಿಕರಾಗಿದ್ದೇವೆ, ನಮ್ಮ ಮಕ್ಕಳೂ ಕೂಲಿ ಕಾರ್ಮಿಕರೇ ಆಗಬಾರದು ಎಂಬ ಭಾವನೆ ಕಾರ್ಮಿಕರಲ್ಲಿ ಮೂಡಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಕ್ಕರೆ ಮುಂದಿನ ದಿನಗಳಲ್ಲಿ ಒಳ್ಳೆಯ ಉದ್ಯೋಗಗಿಟ್ಟಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಸ್ಫೂರ್ತಿ ಸಂಘಟನೆಯ ಅಧ್ಯಕ್ಷೆ ಶ್ವೇತಾ ದಿನೇಶ್ ಮಾತನಾಡಿ, ಬಿಲ್ಡರ್ಸ್ ಅಸೋಸಿಯೇಷನ್ ಸಂಸ್ಥೆಯ ಮಹಿಳಾ ಘಟಕವಾದ ಸ್ಫೂರ್ತಿ ಸಂಸ್ಥೆಯಿಂದ ಇದುವರೆಗೂ ಕಟ್ಟಡ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವುದು, ಮಹಿಳಾ ಕಾರ್ಮಿಕರನ್ನು ಗುರುತಿಸಿ ಸನ್ಮಾನಿಸುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ ಎಂದರು.

ಶಿಬಿರದಲ್ಲಿ: ಆರೋಗ್ಯ ತಪಾಸಣಾ ಶಿಬಿರದಲ್ಲಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಡಾ.ಸೌಮ್ಯ, ಅನ್ನಪೂರ್ಣ ಕಣ್ಣಾಸ್ಪತ್ರೆಯ ವೈದ್ಯರು ಪಾಲ್ಗೊಂಡಿದ್ದರು. ರಕ್ತದೊತ್ತಡ, ಚರ್ಮರೋಗ, ಇಸಿಜಿ, ಕಣ್ಣಿನ ತಪಾಸಣೆಯನ್ನು ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಸ್ಫೂತಿ ಸಂಘಟನೆಯ ಸಹ ಸಂಚಾಲಕರಾದ ಗೀತಾಶ್ರೀ, ಮಾಲಾ ಪಾಲ್, ಬಿಲ್ಡರ್ಸ್ ಅಸೋಸಿಯೇಷನ್ ಮೈಸೂರು ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ರಾವ್, ಕಾರ್ಯದರ್ಶಿ ಅಜಿತ್ ನಾರಾಯಣ್, ಸ್ಫೂರ್ತಿ ಸಂಘಟನೆಯ ಕಾರ್ಯದರ್ಶಿ ರೀನಾ ಪಾಲ್, ಖಜಾಂಜಿ ಮಂಜುಳಾ ರೇವಣಿ ಪ್ರಸಾದ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಮೈಸೂರಿನ ಮಹಾರಾಜ ಪದವಿ ಪೂರ್ವ ಕಾಲೇಜಿನ ಕಟ್ಟಡದ ದುರಸ್ಥಿ ಕಾಮಗಾರಿಯಲ್ಲಿ ತೊಡಗಿರುವ ಕಟ್ಟಡ ಕಾರ್ಮಿಕರು ಹಾಗೂ ಅವರ ಕುಟುಂಬ ಸದಸ್ಯರಿಗೆ ಬುಧವಾರ ಬಿಲ್ಡರ್ಸ್ ಅಸೋಸಿಯೇಷನ್ ಮೈಸೂರು ಘಟಕದ `ಸ್ಫೂರ್ತಿ’ ಮಹಿಳಾ ಘಟಕದ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.
ಅನಾಮಿಕ ಸೈಕೋ ಅಟ್ಟಹಾಸ ಪ್ರಕರಣ

Translate »