ಕೆ.ಆರ್.ಆಸ್ಪತ್ರೆ ನರ್ಸಿಂಗ್ ಹಾಸ್ಟೆಲ್ ಸುರಕ್ಷತೆಗೆ ಕ್ಷಿಪ್ರ ಕಾಮಗಾರಿ ಆರಂಭ
ಮೈಸೂರು

ಕೆ.ಆರ್.ಆಸ್ಪತ್ರೆ ನರ್ಸಿಂಗ್ ಹಾಸ್ಟೆಲ್ ಸುರಕ್ಷತೆಗೆ ಕ್ಷಿಪ್ರ ಕಾಮಗಾರಿ ಆರಂಭ

July 26, 2018

ಮೈಸೂರು: ಅನಾಮಿಕ ಕಾಮುಕ ದಾಳಿ ನಡೆಸಿದ ಪ್ರಕರಣದ ಹಿನ್ನೆಲೆಯಲ್ಲಿ ಕೆ.ಆರ್.ಆಸ್ಪತ್ರೆ ಆಡಳಿತವು ನರ್ಸಿಂಗ್ ಹಾಸ್ಟೆಲ್ ಕಟ್ಟಡದಲ್ಲಿ ಸುರಕ್ಷತಾ ಕಾಮಗಾರಿಗಳನ್ನು ಆರಂಭಿಸಿದೆ.

ಮಂಗಳವಾರ ಸಂಜೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರು ಸ್ಥಳಕ್ಕೆ ಭೇಟಿ ನೀಡಿ, ಆಸ್ಪತ್ರೆ ಸರ್ಜಿಕಲ್ ಬ್ಲಾಕ್ ಪಕ್ಕದಲ್ಲಿರುವ ನರ್ಸಿಂಗ್ ಹಾಸ್ಟೆಲ್ ಮತ್ತು ಬಿಎಸ್ಸಿ ನರ್ಸಿಂಗ್ ಹಾಸ್ಟೆಲ್‍ಗಳ ಪರಿಶೀಲನೆ ನಡೆಸಿ ಕಟ್ಟಡಗಳ ಬಳಿ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಇಂದು ಬೆಳಗ್ಗೆಯಿಂದಲೇ ಕಾಮಗಾರಿ ಆರಂಭವಾಗಿದ್ದು, ಕಟ್ಟಡಗಳ ಸುತ್ತ ಯಾರೂ ಸುಳಿಯದಂತೆ ಕಬ್ಬಿಣದ ಗ್ರಿಲ್ ಮತ್ತು ಮೆಸ್ ಅಳವಡಿಸುವುದು, ಕಾಂಪೌಂಡ್ ಗೋಡೆ ಎತ್ತರಿಸುವುದು, ಸುತ್ತಲಿನ ಮರಗಳ ರೆಂಬೆಗಳನ್ನು ಕತ್ತರಿಸುವ ಕೆಲಸವನ್ನು ಕ್ಷಿಪ್ರಗತಿಯಿಂದ ನಡೆಸುತ್ತಿದ್ದಾರೆ.

ಕಟ್ಟಡದ ಸುತ್ತಲಿನ ಗಿಡಗಂಟಿಗಳನ್ನು ಕಿತ್ತು ಸ್ವಚ್ಚಗೊಳಿಸುವುದು, ಪೈಪ್‍ಗಳಿಂದ ಸೋರಿಕೆಯಾಗುತ್ತಿದ್ದ ನೀರು ನಿಲ್ಲಿಸಿ, ಹಾಸ್ಟೆಲ್ ಎದುರು ನೀರು ನಿಂತಿದ್ದ ಸ್ಥಳಕ್ಕೆ ಮಣ್ಣು ತುಂಬುವುದು ಸೇರಿದಂತೆ ಸಿವಿಲ್ ಕಾಮಗಾರಿಗಳನ್ನು ತೀವ್ರಗತಿಯಿಂದ ನಡೆಸಲಾಗುತ್ತಿದೆ.

ಮೈಸೂರು ಮಹಾನಗರ ಪಾಲಿಕೆಯ ಅಭಯ ತಂಡದ ಸಿಬ್ಬಂದಿ ಹಾಸ್ಟೆಲ್ ಕಟ್ಟಡಗಳ ಮುಂದೆ ಹರಡಿಕೊಂಡಿದ್ದ ಮರಗಳ ರೆಂಬೆಗಳನ್ನು ಕತ್ತರಿಸುತ್ತಿದ್ದರೆ, ಇತರರು ಜೆಸಿಬಿ ಮೂಲಕ ನೆಲ ಸಮತಟ್ಟುಗೊಳಿಸುವ ಕೆಲಸ ಮಾಡುತ್ತಿದ್ದಾರೆ.
ಹಾಲಿ ಇರುವ ಸಿಸಿ ಕ್ಯಾಮರಾಗಳ ಜೊತೆಗೆ ಇನ್ನಷ್ಟು ಕ್ಯಾಮರಾಗಳನ್ನು ಅಳವಡಿಸಿ ಕಟ್ಟೆಚ್ಚರ ವಹಿಸುವ ಜೊತೆಗೆ ದಿನದ 24 ಗಂಟೆಯೂ 3 ಪಾಳಯದಲ್ಲಿ ಕೆಲಸ ಮಾಡಲು ಹಾಸ್ಟೆಲ್‍ಗೆ ಇಬ್ಬಿಬ್ಬರು ಸೆಕ್ಯೂರಿಟಿಗಾರ್ಡ್‍ಗಳನ್ನು ಒದಗಿಸಿದ್ದೇವೆ ಎಂದು ಕೆ.ಆರ್.ಆಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಡಾ|| ಎಂ.ಎಸ್.ರಾಜೇಶ್‍ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದ ಸುದ್ದಿಗಾರರಿಗೆ ತಿಳಿಸಿದರು.

ಘಟನೆ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ನರ್ಸಿಂಗ್ ವಿದ್ಯಾರ್ಥಿಗಳನ್ನು ರಜೆ ಮೇಲೆ ಮನೆಗೆ ಕಳುಹಿಸಿ ಕಟ್ಟಡಕ್ಕೆ ಸುರಕ್ಷತಾ ಕಾರ್ಯವನ್ನು ಆರಂಭಿಸಲಾಗಿದೆ. ಈಗ ಯಾವುದೇ ಸಮಸ್ಯೆ ಇಲ್ಲ ಎಂದು ಡಾ|| ರಾಜೇಶ್‍ಕುಮಾರ್ ತಿಳಿಸಿದರು.

ಜಿಲ್ಲಾಧಿಕಾರಿಗಳು ಸೂಚಿಸಿರುವಂತೆ ಎಲ್ಲಾ ಕೆಲಸ ಆರಂಭವಾಗಿದ್ದು, ದೇವರಾಜ ಠಾಣೆ ಪೊಲೀಸರೂ ಹಾಸ್ಟೆಲ್ ಬಳಿ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ವಿದ್ಯಾರ್ಥಿಗಳು ಊರಿಗೆ ಹೋಗಿರುವುದರಿಂದ ಹಾಸ್ಟೆಲ್ ಕಟ್ಟಡಕ್ಕೆ ಬೀಗ ಹಾಕಿ ಯಾರೂ ನುಸುಳದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

Translate »