ಕೆ.ಆರ್ ಆಸ್ಪತ್ರೆ ನರ್ಸಿಂಗ್ ಹಾಸ್ಟೆಲ್ ಭದ್ರತೆ ಹೆಚ್ಚಿಸಲು ಶಾಸಕ ನಾಗೇಂದ್ರ ಸೂಚನೆ
ಮೈಸೂರು

ಕೆ.ಆರ್ ಆಸ್ಪತ್ರೆ ನರ್ಸಿಂಗ್ ಹಾಸ್ಟೆಲ್ ಭದ್ರತೆ ಹೆಚ್ಚಿಸಲು ಶಾಸಕ ನಾಗೇಂದ್ರ ಸೂಚನೆ

July 24, 2018

ಮೈಸೂರು: ಅನಾಮಿಕ ವಿಕೃತ ಕಾಮಿಯೋರ್ವ ಅತಿಕ್ರಮ ಪ್ರವೇಶ ಮಾಡಿ ವಿದ್ಯಾರ್ಥಿನಿಯರಿಗೆ ಆತಂಕ ಸೃಷ್ಟಿಸಿದ್ದ ಹಿನ್ನೆಲೆಯಲ್ಲಿ ಮೈಸೂರಿನ ಕೆ.ಆರ್.ಆಸ್ಪತ್ರೆ ಆವರಣದಲ್ಲಿರುವ ನರ್ಸಿಂಗ್ ಹಾಸ್ಟೆಲ್ ಭದ್ರತೆ ಹೆಚ್ಚಿಸುವಂತೆ ಶಾಸಕ ಎಲ್.ನಾಗೇಂದ್ರ ಅವರು ಇಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಇಂದು ನರ್ಸಿಂಗ್ ಕಾಲೇಜಿಗೆ ದಿಢೀರ್ ಭೇಟಿ ನೀಡಿದ ಶಾಸಕರು, ಹಾಸ್ಟೆಲ್ ವಿದ್ಯಾರ್ಥಿನಿಗಳಿಂದ ಮಾಹಿತಿ ಪಡೆದು ಸಮಸ್ಯೆಗಳನ್ನು ಆಲಿಸಿದರು. ಸರಿಯಾಗಿ ನಿರ್ವಹಣೆ ಮಾಡದ ಕಾರಣ ಶೌಚಾಲಯ, ಸ್ನಾನಗೃಹ, ಅಡುಗೆ ಮನೆಗಳು ಶಿಥಿಲಗೊಂಡಿರುವುದು ಪರಿಶೀಲನೆ ವೇಳೆ ಕಂಡು ಬಂದಿತು.

ಹಾಸ್ಟೆಲ್‍ಗೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ಭದ್ರತೆ ಮಾಡಿಕೊಡುವುದು, ಇಡೀ ಕಟ್ಟಡದ ಸುತ್ತ ಯಾರೂ ಸುಳಿಯದಂತೆ ಕಬ್ಬಿಣದ ಗ್ರಿಲ್‍ಗಳನ್ನು ಅಳವಡಿಸುವುದು, ಕಾಂಪೌಂಡ್‍ನ ಗೋಡೆ ಎತ್ತರಿಸುವುದು, ಶಿಥಿಲಾವಸ್ಥೆಗೊಂಡಿರುವ ಶೌಚಾಲಯ, ಸ್ನಾನಗೃಹಗಳು, ಅಡುಗೆ ಮನೆಯನ್ನು ದುರಸ್ಥಿಗೊಳಿಸಿ ಆಧುನೀಕರಣಗೊಳಿಸುವುದು, ಆವರಣದಲ್ಲಿ ಬೆಳೆದು ನಿಂತಿರುವ ಗಿಡಗಂಟೆಗಳನ್ನು ತೆರವುಗೊಳಿಸಿ ಸ್ವಚ್ಚತೆ ಕಾಪಾಡಬೇಕು ಹಾಗೂ ಒಳಚರಂಡಿ ವ್ಯವಸ್ಥೆ ಸರಿಪಡಿಸಬೇಕೆಂದು ನಾಗೇಂದ್ರ ಅವರು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಡೀನ್ ಮತ್ತು ಡೈರೆಕ್ಟರ್ ಡಾ. ನಂಜರಾಜ ಅವರಿಗೆ ಸೂಚಿಸಿದರು.

ಹಾಸ್ಟೆಲ್ ಸೂಪರಿಟೆಂಡೆಂಟ್ ನರ್ಸಿಂಗ್ ಕಾಲೇಜು ಪ್ರಾಂಶುಪಾಲರು ಹಾಗೂ ಕೆ.ಆರ್. ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರು ಆಗಿಂದ್ದಾಗೆ ನರ್ಸಿಂಗ್ ಹಾಸ್ಟೆಲ್‍ಗೆ ಭೇಟಿ ನೀಡಿ ಪರಿಶೀಲಿಸುತ್ತಿರಬೇಕು ಎಂದ ಶಾಸಕರು, ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕೆಂದೂ ತಾಕೀತು ಮಾಡಿದರು.

ಕೆ.ಆರ್. ಆಸ್ಪತ್ರೆಯ ಸರ್ಜಿಕಲ್ ಬ್ಲಾಕ್(ಕಲ್ಲು ಕಟ್ಟಡ), ಬಿಪಿಡಿ ಅಂಡ್ ಪಿಪಿಡಿ ಬ್ಲಾಕ್, ತುರ್ತು ಚಿಕಿತ್ಸಾ ವಾರ್ಡ್(ಎಮರ್ಜನ್ಸಿ ವಾರ್ಡ್)ಗಳಲ್ಲಿ ಸ್ವಚ್ಚತೆ ಕಾಪಾಡಬೇಕು ಎಂದು ನಾಗೇಂದ್ರ ತಿಳಿಸಿದರಲ್ಲದೆ, ಗುಣಮಟ್ಟದ ಊಟ ನೀಡಬೇಕು, ಭದ್ರತಾ ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕೆಂದು ಸೂಚಿಸಿದರು.

ಕೆ.ಆರ್.ಆಸ್ಪತ್ರೆ ಹಾಗೂ ಚೆಲುವಾಂಬ ಆಸ್ಪತ್ರೆಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಪಡಿಸಿ ಚಿಕಿತ್ಸೆ ನೀಡಲು ಹಾಗೂ ಔಷದೋಪಚಾರ ಕೊರತೆಯಾಗದಂತೆ ನೋಡಿಕೊಂಡು, ಸಮಸ್ಯೆ ಎದುರಾದರೆ ತಮ್ಮ ಗಮನಕ್ಕೆ ತಂದು ನೀಗಿಸಿಕೊಳ್ಳಬೇಕೆಂದೂ ಅವರು ಇದೇ ಸಂದರ್ಭ ತಿಳಿಸಿದರು.

Translate »