ಫಾಲ್ಕನ್ ಟೈರ್ಸ್ ಪುನರಾರಂಭ ಕುರಿತು ಇಂದು ಸಚಿವ ಕೆ.ಜೆ.ಜಾರ್ಜ್ ಸಭೆ
ಮೈಸೂರು

ಫಾಲ್ಕನ್ ಟೈರ್ಸ್ ಪುನರಾರಂಭ ಕುರಿತು ಇಂದು ಸಚಿವ ಕೆ.ಜೆ.ಜಾರ್ಜ್ ಸಭೆ

July 24, 2018

ಮೈಸೂರು:  ಮೂರು ವರ್ಷಗಳಿಂದ ಬಂದ್ ಆಗಿರುವ ಫಾಲ್ಕನ್ ಟೈರ್ಸ್ ಕಾರ್ಖಾನೆ ಪುನರಾರಂಭ ಸಂಬಂಧ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಕೆ.ಜೆ.ಜಾರ್ಜ್ ಅವರು ಮೈಸೂರಿನಲ್ಲಿ ಮಹತ್ವದ ಸಭೆ ನಡೆಸಲಿದ್ದು, 2 ಸಾವಿರಕ್ಕೂ ಹೆಚ್ಚು ಕಾರ್ಮಿಕ ಕುಟುಂಬಗಳ ಭವಿಷ್ಯ ತಿಳಿಯಲಿದೆ.

ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಾಳೆ(ಜು.24) ಬೆಳಿಗ್ಗೆ 11.30ಕ್ಕೆ ಸಭೆ ಏರ್ಪಡಿಸಲಾಗಿದ್ದು, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ರೇಷ್ಮೆ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಸೇರಿದಂತೆ ಸ್ಥಳೀಯ ಶಾಸಕರು, ಸಂಸದರು ಭಾಗವಹಿಸಲಿದ್ದಾರೆ. ಜೊತೆಗೆ ಸರ್ಕಾರದ ಉನ್ನತ ಅಧಿಕಾರಿಗಳು, ಕಾರ್ಮಿಕ ಇಲಾಖೆ ಅಧಿಕಾರಿಗಳು, ಫಾಲ್ಕನ್ ಟೈರ್ಸ್ ಕಾರ್ಖಾನೆ ಮುಖ್ಯ ಪ್ರವರ್ತಕ ಪವನ್‍ಕುಮಾರ್ ರೂಹಿಯಾ, ಕಾರ್ಖಾನೆಯನ್ನು ವಶಕ್ಕೆ ಪಡೆದಿರುವ ಎಡ್ವಲ್ವೀಸ್ ಸಂಸ್ಥೆಯ ಮುಖ್ಯಸ್ಥರು, ಸಾಲ ನೀಡಿರುವ ಬ್ಯಾಂಕ್‍ಗಳ ಅಧಿಕಾರಿಗಳು, ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು, ಫಾಲ್ಕನ್ ಟೈರ್ಸ್ ಕಾರ್ಮಿಕ ಸಂಘದ ಪದಾಧಿಕಾರಿಗಳನ್ನೂ ಸಭೆಗೆ ಆಹ್ವಾನಿಸಲಾಗಿದ್ದು, ಕಾರ್ಖಾನೆ ಪುನರಾರಂಭದ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ. ಸಭೆಯ ನಂತರ ಸಚಿವ ಜಾರ್ಜ್ ಅವರು, ಸುದ್ದಿಗೋಷ್ಠಿ ನಡೆಸಿ, ವಿವರಣೆ ನೀಡಲಿದ್ದಾರೆ. 3 ವರ್ಷಗಳಿಂದ ಕೆಲಸವೂ ಇಲ್ಲದೆ, ವೇತನವೂ ಇಲ್ಲದೆ ಅತಂತ್ರ ಸ್ಥಿತಿಯಲ್ಲಿರುವ ಕಾರ್ಮಿಕರು, ಸಭೆಯ ನಿರ್ಣಯದ ಬಗ್ಗೆ ಕಾತುರರಾಗಿದ್ದಾರೆ.

ಕಾರ್ಮಿಕರಲ್ಲಿ ವಿಶ್ವಾಸ: ಕಾರ್ಖಾನೆ ಮುಚ್ಚಿದಾಗಿನಿಂದ ಕಾರ್ಮಿಕ ಕುಟುಂಬಗಳ ಬದುಕು ದುಸ್ತರವಾಗಿದೆ. 3 ವರ್ಷದಿಂದ ದುಡಿಮೆಯಿಲ್ಲದೆ ಅತಂತ್ರ ಜೀವನ ನಡೆಸುತ್ತಿದ್ದಾರೆ. ವಯಸ್ಸಿನ ಕಾರಣದಿಂದ ಬಹುತೇಕ ಕಾರ್ಮಿಕರಿಗೆ ಬೇರೆ ಕಾರ್ಖಾನೆಗಳಲ್ಲೂ ಕೆಲಸ ಸಿಗುವುದಿಲ್ಲ. ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸಕ್ಕೂ ಹಣವಿಲ್ಲದೆ ಸಾಲ ಮಾಡಿಕೊಂಡು ಮತ್ತೊಂದು ಸಮಸ್ಯೆಗೆ ಸಿಲುಕಿದ್ದಾರೆ. ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ನೊಂದಿರುವ ಕಾರ್ಮಿಕರು, ನೂರಾರು ದಿನ ನಿರಂತರ ಪ್ರತಿಭಟನೆ ನಡೆಸಿದ್ದಲ್ಲದೆ, ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿಗಳ ಕಚೇರಿಗಳಿಗೆ ಅಲೆದು ಸೋತು ಹೋಗಿದ್ದಾರೆ. ಆದರೂ ಕಾರ್ಖಾನೆ ಪುನರಾರಂಭವಾಗಿ ನಮ್ಮ ಕಷ್ಟಗಳೆಲ್ಲಾ ತೀರುತ್ತವೆ ಎಂಬ ಆಶಾಭಾವನೆಯೊಂದಿಗೆ ದಿನ ಕಳೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಕೈಗಾರಿಕಾ ಸಚಿವ ಜಾರ್ಜ್ ಅವರು ಸಭೆ ಕರೆದಿರುವುದು ನೊಂದ ಕಾರ್ಮಿಕರ ವಿಶ್ವಾಸ ಹೆಚ್ಚಿಸಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಾರ್ಖಾನೆ ಪುನರಾರಂಭಿಸಿ, ನಮ್ಮ ಮನೆಗಳಲ್ಲಿ ಮತ್ತೆ ಸಂತೋಷದ ದೀಪ ಹಚ್ಚಲಿದ್ದಾರೆಂಬ ನಿರೀಕ್ಷೆಯಲ್ಲಿ 2 ಸಾವಿರ ಕಾರ್ಮಿಕ ಕುಟುಂಬಗಳು ಎದುರು ನೋಡುತ್ತಿವೆ.

Translate »