ಫಾಲ್ಕನ್ ಟೈರ್ಸ್ ಪುನರಾರಂಭ ಪ್ರಯತ್ನ
ಮೈಸೂರು

ಫಾಲ್ಕನ್ ಟೈರ್ಸ್ ಪುನರಾರಂಭ ಪ್ರಯತ್ನ

July 25, 2018
  • ಸರ್ಕಾರದ ಆಸಕ್ತಿಯ ಬಗ್ಗೆ ಕಾರ್ಮಿಕ ಸಂಘಟನೆಗೆ ಸಚಿವರಾದ ಜಾರ್ಜ್, ಜಿಟಿಡಿ ವಿವರಣೆ

ಮೈಸೂರು: ಪ್ರಮೋಟರ್ ಕರೆತಂದು ಮೈಸೂರಿನ ಕೆಆರ್‌ಎಸ್‌ ರಸ್ತೆಯಲ್ಲಿರುವ ಫಾಲ್ಕನ್ ಕಾರ್ಖಾನೆಯನ್ನು ಪುನರಾರಂಭಿಸಲು ಸರ್ಕಾರ ಆಸಕ್ತಿ ವಹಿಸಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಇಂದಿಲ್ಲಿ ಕಾರ್ಮಿಕ ಸಂಘಟನೆ ಮುಖಂಡ ರಿಗೆ ಭರವಸೆ ನೀಡಿದ್ದಾರೆ.

ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅವರು ಕಾರ್ಖಾನೆ ಕಾರ್ಮಿಕ ಸಂಘದ ಪದಾಧಿಕಾರಿಗಳು, ಸಿಪಿಐ ಪ್ರಧಾನ ಕಾರ್ಯದರ್ಶಿ ಹೆಚ್.ಆರ್.ಶೇಷಾದ್ರಿ, ಕಾರ್ಖಾನೆ ಆಡಳಿತ ಮಂಡಳಿ ಪ್ರತಿನಿಧಿಗಳು ಹಾಗೂ ಕೈಗಾರಿಕಾ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸುದೀರ್ಘ ಚರ್ಚೆ ನಡೆಸಿದರು. ಕಾರ್ಖಾನೆ ಕಾರ್ಮಿಕರ ಪರವಾಗಿ ಸಂಘದ ಕಾನೂನು ಸಲಹೆಗಾರರೂ ಆದ ಶೇಷಾದ್ರಿ ಅವರು ಮಾತನಾಡಿ, 1973ರಲ್ಲಿ ದಯಾನಂದ ಶೆಟ್ಟಿ ಎಂಬುವರಿಂದ ಪ್ರಾರಂಭವಾದ ಫಾಲ್ಕನ್ ಟೈರ್ಸ್ ಕಂಪನಿಯನ್ನು 2005ರಲ್ಲಿ ಕೋಲ್ಕತ್ತಾ ಮೂಲದ ಪವನ ಕುಮಾರ್ ರುಮ್ಯಾ ಪಡೆದು, ಅಗತ್ಯಕ್ಕಿಂತ ಹೆಚ್ಚು ಸಾಲ ಮಾಡಿದರು.

ಆ ಹಣವನ್ನು ಬೇರೆಡೆಗೆ ಹೂಡಿಕೆ ಮಾಡಿ ಕಂಪನಿಯನ್ನು ದುಸ್ಥಿತಿಗೆ ತಂದ ಕಾರಣ 2014ರಿಂದ ಉತ್ಪಾದನೆ ಕಡಿಮೆಯಾಗುತ್ತಾ ಬಂದಿತು. ಕಾರ್ಮಿಕರಿಗೆ ನೀಡಬೇಕಾದ ಸಂಬಳ, ಪಿಎಫ್, ಇಎಸ್‍ಐ, ಗ್ರಾಚ್ಯುಟಿ ಇನ್ನಿತರ ಭತ್ಯೆ ಕೊಡದೆ ವಂಚಿಸಲಾಗಿದೆ. ಸಾಲ ಮರುಪಾವತಿಸದ ಕಾರಣ ಬ್ಯಾಂಕುಗಳು ಕಂಪನಿಯನ್ನು ವಶಕ್ಕೆ ಪಡೆದಿವೆ. ನಂತರ 2500 ಕಾರ್ಮಿಕರು ಹಾಗೂ ಕುಟುಂಬ ಬೀದಿಪಾಲಾಗಿವೆ ಎಂದು ವಿವರಿಸಿದರು.

2018ರ ಮೇ ಮಾಹೆಯಲ್ಲಿ ಎನ್‍ಸಿಎಲ್‍ಟಿ ನ್ಯಾಯಾಲಯವು 6 ತಿಂಗಳೊಳಗಾಗಿ ಕಂಪನಿಯನ್ನು ಪುನರಾರಂಭಿಸುವಂತೆ ಆದೇಶಿಸಿ ಇನ್ಸಾಲ್‍ವೆನ್ಸಿ ರಿಸಾಲ್‍ವೆನ್ಸಿ ಪ್ರೊಫೆಷನಲ್ (ಐಆರ್‌ಪಿ) ಅನ್ನು ನೇಮಿಸಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಮಧ್ಯ ಪ್ರವೇಶಿಸಿ ಯಾವುದಾದರೊಂದು ಕಂಪನಿಗೆ ಫಾಲ್ಕನ್ ಟೈರ್ಸ್ ಅನ್ನು ವಹಿಸಿ, ಪುನರಾರಂಭಿಸಲೇಬೇಕು ಎಂದು ಒತ್ತಾಯಿಸಿದ ಶೇಷಾದ್ರಿ ಅವರು, ಅಲ್ಲಿಯವರೆಗೆ ಕಾರ್ಮಿಕರಿಗೆ ಮಾಹೆಯಾನ 10,000 ರೂ.ಗಳನ್ನು ಜೀವನೋಪಾಯಕ್ಕೆ ಕೊಡಿಸಬೇಕು ಎಂದು ಮನವಿ ಮಾಡಿದರು.

ಈ ಕುರಿತು ಫಾಲ್ಕನ್ ಟೈರ್ಸ್ ಆಡಳಿತ ಮಂಡಳಿ ಪರವಾಗಿ ಹಾಜರಿದ್ದ ಪ್ರತಿನಿಧಿಗಳು ಪ್ರತಿಕ್ರಿಯೆ ನೀಡಿ, ಕೋರ್ಟ್ ಆದೇಶದಂತೆ ನಿಯೋಜಿಸಿರುವ ಐಆರ್‌ಪಿಯು ಕಾರ್ಖಾನೆ ಪುನರಾರಂಭಿಸಲು ಹೊಸ ಟೆಂಡರ್ ಕರೆದಿದೆ. ಟೆಂಡರ್ ನಲ್ಲಿ ಭಾಗವಹಿಸಲು ಅಕ್ಟೋಬರ್ 28 ಕಡೇ ದಿನವಾಗಿದೆ. ಪ್ರಕ್ರಿಯೆ ಪೂರ್ಣ ಗೊಳ್ಳುವವರೆಗೆ ನಾವು ಈ ಹಂತದಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ. ನಮಗೂ ಕಾರ್ಮಿಕರ ನೋವಿಗೆ ಸ್ಪಂದಿಸಬೇಕೆಂಬ ಉದ್ದೇಶವಿದೆ ಎಂದು ತಿಳಿಸಿದರು.

ನಂತರ ಮಾತನಾಡಿದ ಸಚಿವ ಜಿ.ಟಿ.ದೇವೇಗೌಡರು, ಫಾಲ್ಕನ್ ಕಾರ್ಖಾನೆ ಪುನರಾರಂಭಿಸಿ ಕಾರ್ಮಿಕರ ರಕ್ಷಿಸಬೇಕೆಂಬುದರ ಬಗ್ಗೆ ಮುಖ್ಯಮಂತ್ರಿಗಳು ಆಸಕ್ತಿ ತೋರಿದ್ದಾರಷ್ಟೇ ಅಲ್ಲದೆ, ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದರು.

ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಪ್ರತಿಕ್ರಿಯಿಸಿ, ಈಗಾಗಲೇ ಹೊಸ ಕಂಪನಿಗಳ ಆಹ್ವಾನಿಸಿರುವುದರಿಂದ ನಾವೂ ಸರ್ಕಾರದ ವತಿಯಿಂದ ಪ್ರಮೋಟರ್ ಕರೆತರಲು ಪ್ರಯತ್ನಿಸುತ್ತೇವೆ. ಒಟ್ಟಿನಲ್ಲಿ ಫಾಲ್ಕನ್ ಫ್ಯಾಕ್ಟರಿ ಆರಂಭಕ್ಕೆ ಪೂರಕ ಪ್ರಯತ್ನ ನಡೆಸಲಾಗುವುದು ಎಂದು ಭರವಸೆ ನೀಡಿದರು. ಫಾಲ್ಕನ್ ಟೈರ್ಸ್ ಎಂಪ್ಲಾಯೀಸ್ ಯೂನಿಯನ್ ಅಧ್ಯಕ್ಷ ಆನಂದ, ಉಪಾಧ್ಯಕ್ಷ ಎಸ್.ಸ್ವಾಮಿ, ಪ್ರಧಾನ ಕಾರ್ಯದರ್ಶಿ ಶಿವಣ್ಣಗೌಡ ಸೇರಿದಂತೆ ಇನ್ನಿತರರು ಸಭೆಯಲ್ಲಿ ಭಾಗವಹಿಸಿದ್ದರು. ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಶಾಸಕರಾದ ತನ್ವೀರ್ ಸೇಠ್, ಎಲ್.ನಾಗೇಂದ್ರ, ಹರ್ಷ ವರ್ಧನ, ಡಾ. ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕ ವಾಸು, ಎಂಐಎ ಕಾರ್ಯದರ್ಶಿ ಸುರೇಶ ಕುಮಾರ್ ಜೈನ್, ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಜಯರಾಂ, ಕಾರ್ಮಿಕ ಇಲಾಖೆ ಕಾರ್ಯದರ್ಶಿ ಗೌರವ ಗುಪ್ತಾ, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಕಾರ್ಪೊರೇಷನ್ ಕಮೀಷ್ನರ್ ಹೆಚ್.ಕೆ.ಜಗದೀಶ್, ಮುಡಾ ಕಮೀಷ್ನರ್ ಪಿ.ಎಸ್.ಕಾಂತರಾಜು, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಲಿಂಗರಾಜು ಸೇರಿದಂತೆ ಹಲವರು ಸಭೆಯಲ್ಲಿ ಹಾಜರಿದ್ದರು.

Translate »