ಬೆಂಗಳೂರು: ರಾಜ ಮನೆತನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆ ಯರ್ ಅವರನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲು ಕಾಂಗ್ರೆಸ್ ಯತ್ನಿಸುತ್ತಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರೇ, ಯದುವೀರ್ ಅವರನ್ನು ರಾಜಕೀಯಕ್ಕೆ ಕರೆತರುವ ಆಸಕ್ತಿ ಹೊಂದಿದ್ದಾರೆ. ಸಂಸತ್ ಹಾಲ್‍ನಲ್ಲಿ ನಿನ್ನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಸ್ವಯಂ ಪ್ರೇರಿತವಾಗಿ ಈ ವಿಷಯ ಪ್ರಸ್ತಾಪಿಸಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆ ಯಲ್ಲಿ ನೀವು ಮೈಸೂರು ಇಲ್ಲವೆ, ಕೊಪ್ಪಳ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ಮಾಡಿ ಕೊಳ್ಳಿ ಎಂದಿದ್ದಾರೆ. ರಾಹುಲ್ ಆಹ್ವಾನವನ್ನು ನಯವಾಗಿ ತಿರಸ್ಕರಿಸಿದ ಸಿದ್ದರಾಮಯ್ಯ, ನಾನು ಚುನಾವಣಾ ಕಣಕ್ಕೆ ಇಳಿಯುವುದಿಲ್ಲ, ಅದರ ಬದಲು ಇಡೀ ರಾಜ್ಯಾದ್ಯಂತ ಪಕ್ಷದ ಪರ ಪ್ರಚಾರ ಮಾಡಿ, ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತೇನೆ. ವಿಷಯವನ್ನು ಅಲ್ಲಿಗೇ ಕೈಬಿಟ್ಟ ರಾಹುಲ್, ನೀವು ಕಣಕ್ಕೆ ಇಳಿಯದಿದ್ದರೆ ಮೈಸೂರು ರಾಜ ಮನೆತನದ ಯದುವೀರ್ ಅವರನ್ನು ಪಕ್ಷಕ್ಕೆ ಕರೆತಂದು ಕಣಕ್ಕಿಳಿಸಿ. ರಾಹುಲ್ ಮಾತು ಮುಗಿಯುತ್ತಿದ್ದಂತೆ ಸಿದ್ದರಾಮಯ್ಯ ಅವರು (ಯದುವೀರ್) ರಾಜಕೀಯ ಪ್ರವೇಶಿಸುವ ಆಸಕ್ತಿ ಹೊಂದಿಲ್ಲ. ಈ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಡುವುದು ಬೇಡ. ಇಲ್ಲಿ ನಮಗೆ ಬಲಿಷ್ಠ ಅಭ್ಯರ್ಥಿ ಇದ್ದಾರೆ. ನಾನು ಅವರನ್ನು ಗೆಲ್ಲಿಸಿಕೊಡುತ್ತೇನೆ ಎಂಬ ಭರವಸೆ ನೀಡಿದ್ದಾರೆ. ಓಕೆ, ಆದರೆ ಮತ್ತೊಮ್ಮೆ ಪ್ರಯತ್ನಿಸಿ ಎಂದು ಕಿವಿಮಾತು ಹೇಳಿದ್ದಾರೆ.
ಇದಕ್ಕೂ ಮುನ್ನ ಸಿದ್ದರಾಮಯ್ಯ, ಕರ್ನಾಟಕದ ಮಟ್ಟಿಗೆ ಸರ್ಕಾರದಲ್ಲಿ ಪಾಲುದಾರರಾಗಿರುವ ಜೆಡಿಎಸ್‍ನೊಂದಿಗೆ ಮೈತ್ರಿ ಬೇಡವೇ ಬೇಡ ಎಂದಿದ್ದಾರೆ. ಅದಕ್ಕೆ ರಾಹುಲ್, ಈಗಾಗಲೇ ರಾಷ್ಟ್ರ ಮಟ್ಟದಲ್ಲಿ ಮತೀಯ ಶಕ್ತಿಗಳ ವಿರುದ್ಧ ಒಂದಾಗಲು ಪ್ರಾದೇಶಿಕ ಪಕ್ಷಗಳು ಕೈಜೋಡಿಸುತ್ತಿವೆ. ಇಂತಹ ಸನ್ನಿವೇಶದಲ್ಲಿ ನಾವು ಕೊಟ್ಟ ಮಾತಿನಿಂದ ಹಿಂದೆ ಸರಿಯುವುದು ಬೇಡ. ನಾವೇ ಸ್ವಲ್ಪ ರಾಜೀ ಮಾಡಿಕೊಂಡರೂ, ಸೀಟು ಹೊಂದಾಣಿಕೆ ಸಂದರ್ಭದಲ್ಲಿ ಕೊಂಡು-ಕೊಳ್ಳುವ ನಿರ್ಧಾರ ಮಾಡೋಣ. ಯಾವುದೇ ಕಾರಣಕ್ಕೂ ನೀವು ಹೊರಗಡೆ ಅಪಸ್ವರ ಎತ್ತಬೇಡಿ. ಇಲ್ಲಿಂದ ತೆರಳುತ್ತಿದ್ದಂತೆ ನೀವೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‍ನೊಂದಿಗೆ ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಂಡು ಕಣಕ್ಕಿಳಿಯುತ್ತೇವೆ ಎಂದು ಮಾಧ್ಯಮಗಳಿಗೆ ತಿಳಿಸಿ ಎಂದು ಹೇಳಿದ್ದಾರೆ. ಒಲ್ಲದ ಮನಸ್ಸಿನಿಂದ ಸಿದ್ದರಾಮಯ್ಯ, ಪಕ್ಷದ ಅಧ್ಯಕ್ಷರ ಅಣತಿಯಂತೆ ನಿನ್ನೆ ದೆಹಲಿಯಲ್ಲಿ ಹೊಂದಾಣಿಕೆ ಸಂಬಂಧದ ಹೇಳಿಕೆ ನೀಡಿದ್ದಾರೆ.