ಇನ್ನೆರಡು ದಿನ ಕಳೆದರೆ ಹಣ್ಣು, ದಿನಸಿ ಪದಾರ್ಥಗಳ ಕೊರತೆ ಸಾಧ್ಯತೆ
ಮೈಸೂರು

ಇನ್ನೆರಡು ದಿನ ಕಳೆದರೆ ಹಣ್ಣು, ದಿನಸಿ ಪದಾರ್ಥಗಳ ಕೊರತೆ ಸಾಧ್ಯತೆ

July 25, 2018

ಮೈಸೂರು: ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಲಾರಿ ಮಾಲೀಕರು ನಡೆಸುತ್ತಿರುವ ಅನಿರ್ದಷ್ಟಾ ವಧಿಯ ಲಾರಿ ಮುಷ್ಕರ ಮಂಗಳವಾರ 5 ದಿನಕ್ಕೆ ಕಾಲಿಟ್ಟಿತು. ಮುಷ್ಕರದ ಹಿನ್ನೆಲೆ ಯಲ್ಲಿ ಮೈಸೂರಿನ ಬಂಡಿಪಾಳ್ಯದ ಎಪಿಎಂಸಿ ಮತ್ತು ಬಂಬೂ ಬಜಾರ್‍ನ ಆರ್‌ಎಂಸಿ ಮಾರುಕಟ್ಟೆಗಳಲ್ಲಿ ತರಕಾರಿ, ಹಣ್ಣು ಇನ್ನಿತರ ದಿನಸಿ ಪದಾರ್ಥಗಳ ಕೊರತೆ ಕಾಣತೊಡಗಿದೆ. ಮುಷ್ಕರ ಆರಂಭಕ್ಕೂ ಮುನ್ನ ಲಾರಿಗಳಲ್ಲಿ ತಂದಿ ಳಿಸಲಾಗಿದ್ದ ಆಹಾರ ಪದಾರ್ಥಗಳು, ಹಣ್ಣು ಮುಗಿಯುವ ಹಂತಕ್ಕೆ ಬಂದಿದ್ದು, ಇನ್ನೆರಡು ದಿನಗಳಲ್ಲಿ ಇದರ ಪರಿಣಾಮ ಜನಜೀವ ನದ ಮೇಲೆ ಆಗುವ ಸಂಭವವಿದೆ.

ಈ ಮಧ್ಯೆ ರೈತರಿಗೆ ತೊಂದರೆ ಆಗದಿರ ಲೆಂದು, ಸ್ಥಳೀಯ ರೈತರು ಎಪಿಎಂಸಿ ಮಾರುಕಟ್ಟೆಗೆ ತರುವ ತರಕಾರಿಗಳನ್ನು ಅಂದೇ ಮಾರಾಟಕ್ಕೆ ಎಪಿಎಂಸಿ ಕ್ರಮ ಕೈಗೊಂಡಿದೆ. ಲಾರಿಗಳು ಎಪಿಎಂಸಿ ಆವರಣಕ್ಕೆ ಬರುತ್ತಿಲ್ಲ. ಇಲ್ಲಿಂದ ಹೋಗುತ್ತಿಲ್ಲ. ಆದ್ದರಿಂದ ತರಕಾರಿಗಳು ಕೊಳೆತರೆ ಅದರಿಂದ ರೈತರು ನಷ್ಟ ಅನುಭವಿಸುತ್ತಾರೆ ಎಂಬ ಹಿನ್ನೆಲೆಯಲ್ಲಿ ಸ್ಥಳೀಯ ಸಣ್ಣ ವಾಹನಗಳ ಮೂಲಕ ಅದರ ಸಾಗಾಟಕ್ಕೆ ಕ್ರಮ ಕೈಗೊಂಡಿರುವುದಾಗಿ ಎಪಿಎಂಸಿ ಅಧ್ಯಕ್ಷ ಸಿದ್ದೇಗೌಡ `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಹೊರ ರಾಜ್ಯಗಳಿಂದ ಬಂಬೂ ಬಜಾರ್‍ನ ಹಳೇ ಆರ್‌ಎಂಸಿಗೆ ಬರುತ್ತಿದ್ದ ಅನಾನಸ್, ದಾಳಿಂಬೆ, ಸೇಬು, ಮೂಸಂಬಿ ಇನ್ನಿತರ ಹಣ್ಣುಗಳು ಲಾರಿ ಮುಷ್ಕರದಿಂದ ಸ್ಥಗಿತಗೊಂಡಿದ್ದು, ಇರುವ ದಾಸ್ತಾನು ಮುಗಿದಿದೆ. ಇದರಿಂದ ಹಣ್ಣುಗಳ ಕೊರತೆ ಎದುರಾಗಿದೆ ಎಂದು ಆರ್‌ಎಂಸಿ ಹಣ್ಣಿನ ವರ್ತಕ ಮೊಹಮ್ಮದ್ ಷರೀಫ್ ಹೇಳಿದ್ದಾರೆ.

ಬಂಡೀಪಾಳ್ಯ ಲಾರಿ ಮಾಲೀಕರ ಸಂಘದ ಮುಷ್ಕರದಲ್ಲಿ ಪಾಲ್ಗೊಂಡಿದ್ದು, 150 ಲಾರಿಗಳ ಓಡಾಟ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದಾಗಿ ಎಪಿಎಂಸಿ ಆವರಣಕ್ಕೆ ಯಾವುದೇ ದಿನಸಿ ಪದಾರ್ಥ ಗಳು ಒಳ ಬರುತ್ತಿಲ್ಲ ಮತ್ತು ಹೊರ ಹೋಗುತ್ತಿಲ್ಲ. ಪ್ರತಿಭಟನೆ ನಡೆಸುತ್ತಿದ್ದೇವೆ. ರೈತರ ಪರ ಇರುವ ನಾವು ತರಕಾರಿ ಸಾಗಾಟಕ್ಕೆ ಯಾವುದೇ ತೊಂದರೆ ನೀಡುತ್ತಿಲ್ಲ ಎಂದು ಸಂಘದ ಅಧ್ಯಕ್ಷ ಜಯಶೇಖರ್ ತಿಳಿಸಿದ್ದಾರೆ.

ಈ ಮಧ್ಯೆ ಬಂಡಿಪಾಳ್ಯದಲ್ಲಿ ಆಲೂಗಡ್ಡೆ ವ್ಯಾಪಾರ ನಡೆಯದ ಕಾರಣ ಕೊಳೆಯುವ ಹಂತಕ್ಕೆ ಬಂದಿದ್ದು, ಇದರಿಂದ ವರ್ತಕರಿಗೆ ನಷ್ಟವಾಗುತ್ತಿದೆ ಎಂದು ಆಲೂಗಡ್ಡೆ ವರ್ತಕ ಜಮೀಲ್ ಅಹ್ಮದ್ `ಮೈಸೂರು ಮಿತ್ರ’ನಿಗೆ ತಿಳಿಸಿದರು. 5 ದಿನವಾದರೂ ನಮ್ಮ ಮುಷ್ಕರಕ್ಕೆ ಕೇಂದ್ರ ಸರ್ಕಾರ ಮಣಿದಿಲ್ಲ. ನಮ್ಮ ಪ್ರತಿಭಟನೆ ಇನ್ನಷ್ಟು ತೀವ್ರಗೊಳಿಸಲಿದ್ದೇವೆ ಎಂದು ಮೈಸೂರು ಜಿಲ್ಲಾ ಲಾರಿ ಮಾಲೀಕರ ಒಕ್ಕೂಟದ ಅಧ್ಯಕ್ಷ ಬಿ.ಕೋದಂಡರಾಮು ಸ್ಪಷ್ಪಪಡಿಸಿದ್ದಾರೆ.

Translate »