ರಸ್ತೆ ಬದಿ ಉರುಳಿ ಬಿದ್ದ ಬಸ್: 40ಕ್ಕೂ ಹೆಚ್ಚು ಮಂದಿಗೆ ಗಾಯ
ಮೈಸೂರು

ರಸ್ತೆ ಬದಿ ಉರುಳಿ ಬಿದ್ದ ಬಸ್: 40ಕ್ಕೂ ಹೆಚ್ಚು ಮಂದಿಗೆ ಗಾಯ

July 25, 2018

ತಿ.ನರಸೀಪುರ: ಚಾಲಕನ ನಿಯಂತ್ರಣ ಕಳೆದುಕೊಂಡ ಖಾಸಗಿ ಬಸ್, ರಸ್ತೆ ಬದಿ ಉರುಳಿ ಬಿದ್ದ ಪರಿಣಾಮ 40ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಘಟನೆ ಮೈಸೂರು ತಿ.ನರಸೀಪುರ ಮುಖ್ಯರಸ್ತೆಯ ಇಂಡವಾಳು ಗ್ರಾಮದ ಬಳಿ ಮಂಗಳವಾರ ಬೆಳಿಗ್ಗೆ 10 ಗಂಟೆ ಸಮಯದಲ್ಲಿ ನಡೆದಿದೆ.

ಮೈಸೂರಿನಿಂದ ತಿ.ನರಸೀಪುರ ಮಾರ್ಗವಾಗಿ ಒಡೆಯರಪಾಳ್ಯಕ್ಕೆ ತೆರಳುತ್ತಿದ್ದ ಎಸ್‍ಎಂಆರ್ (ಸಚಿನ್) ಖಾಸಗಿ ಬಸ್ ಇಂಡವಾಳು ಗ್ರಾಮದ ಬಳಿ ಎದುರಿ ನಿಂದ ಬರುತ್ತಿದ್ದ ಬೈಕ್‍ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ಉರುಳಿ ಬಿದ್ದಿದೆ. ಪರಿಣಾಮ ತಿ.ನರಸೀ ಪುರ ತಾಲೂಕು ಕಛೇರಿ ಮುಜರಾಯಿ ಇಲಾಖೆ ಗುಮಾಸ್ತ ಕಿರಣ್, ಬಿಇಒ ಕಛೇರಿ ಬಿಆರ್‍ಸಿ ಮಂಜುಳಾ, ಸಿಇಓ ನಂಜುಂಡಸ್ವಾಮಿ ಹಾಗೂ ದಕ್ಷಿಣಮೂರ್ತಿ, ಪರಶಿವಮೂರ್ತಿ, ಮಹೇಶ್‍ನಾಯ್ಕ, ಮುರುಗೇಶ್, ಸುನೀತಾ, ಶಿವಮ್ಮ, ಮೋಹನ್‍ಕುಮಾರಿ, ಅಮರ್ ರಾಮ್, ಬ್ರಹ್ಮೇಶ್, ನಾಗರಾಜಪ್ಪ, ಪ್ರತಿಮಾ, ದಿನೇಶ್, ಶ್ರೀಕಾಂತ್, ಸುಚೇತಾ, ಚಂದ್ರಕಾಂತನಾಯ್ಕ, ಆಥೋಂಣಿ, ಪ್ರಮೀಳಾ, ಅನಂತೆಗೌಡ, ಸರೋಜ, ಅಂದಾನಿ, ಆಶಾ, ಎಲ್.ಪುನೀತ್, ಗಿರೀಶ್, ಶರವಣಕುಮಾರ್, ಮಹೇಶ್, ಲೋಕೇಶ್, ಉದಯ್‍ಕುಮಾರ್, ಅಶ್ವಿನಿ, ಭರತ್, ಪುಟ್ಟಸ್ವಾಮಿ, ಸಿದ್ದರಾಜು, ಶೇಖರ, ದ್ರಾಕ್ಷಾಯಿಣಿ, ಪರಶಿವಮೂರ್ತಿ, ಸಂಜೀವ್ ಕುಮಾರ್, ನಿಖಿಲ್ ಸೇರಿದಂತೆ 40 ಕ್ಕೂ ಹೆಚ್ಚು ಮಂದಿ ಗಾಯಾಳುಗಳನ್ನು ತಿ.ನರಸೀಪುರ ಸಾರ್ವ ಜನಿಕ ಆಸ್ಪತ್ರೆ ಹಾಗೂ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ತಿ.ನರಸೀಪುರ ಪೋಲಿಸ್ ಠಾಣೆಯ ಪಿಎಸ್‍ಐ ಎನ್.ಆನಂದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಗಾಯಾಳುಗಳಿಗೆ ಸಾಂತ್ವನ ಹೇಳಿದ ನ್ಯಾಯಾಧೀಶರು: ಅಫಘಾತದ ಸುದ್ದಿ ತಿಳಿಯುತ್ತಿದ್ದಂತೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಪಟ್ಟಣದ ಜೆಎಂಎಫ್‍ಸಿ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶ ಎ.ನಾಗಿರೆಡ್ಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರಲ್ಲದೇ ಸಕಾಲದಲ್ಲಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಸ್ಪಂದಿಸಿರುವ ಆಸ್ಪತ್ರೆಯ ವೈದ್ಯರಾದ ಡಾ.ಗೊವಿಂದಶೆಟ್ಟಿಯವರನ್ನು ಪ್ರಶಂಸಿಸಿದರು. ಈ ಸಂದರ್ಭ ಸ್ಥಳದಲ್ಲಿ ಹಾಜರಿದ್ದ ಸಾರ್ವಜನಿಕರು, ಖಾಸಗಿ ಬಸ್‍ಗಳ ಅತಿವೇಗದ ಚಾಲನೆ ಯಿಂದಾಗಿ ನಿರಂತರ ಅಫಘಾತಗಳು ಸಂಭವಿಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಪ್ರಾದೇಶಿಕ ಸಾರಿಗೆ ಆಯುಕ್ತರಿಗೆ ನಿರ್ದೇಶನ ನೀಡುವಂತೆ ನ್ಯಾಯಾಧೀಶರ ಬಳಿ ಮನವಿ ಮಾಡಿದರು. ವಕೀಲರ ಸಂಘದ ಅಧ್ಯಕ್ಷ ಚೌಹಳ್ಳಿ ಜಿ.ರವಿಶಂಕರ್ ಮಾತನಾಡಿ, ಖಾಸಗಿ ಬಸ್‍ಗಳ ಅತೀ ವೇಗದ ಚಾಲನೆಗೆ ಕಡಿವಾಣ ಹಾಕಲು ನ್ಯಾಯಾಲಯದ ಪ್ರಾಧಿಕಾರ ವತಿಯಿಂದ ಪರವಾನಗಿ ನೀಡಿರುವ ಸಮಯದ ಕುರಿತಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದೆಂದು ತಿಳಿಸಿದರು.

Translate »