ತಿ. ನರಸೀಪುರ, ಮೇ 26(ಎಸ್‍ಕೆ)-ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಹಾಗೂ ಖಾಸಗಿ ಫೈನಾನ್ಸ್‍ಗಳ ಸಾಲ ವಸೂಲಾತಿ ಪ್ರಕ್ರಿಯೆ 6 ತಿಂಗಳು ಮುಂದೂಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಪಟ್ಟಣದ ಕಬಿನಿ ಅತಿಥಿಗೃಹದಿಂದ ಮೆರವಣಿಗೆ ಹೊರಟ ರೈತ ಸಂಘದ ಕಾರ್ಯಕರ್ತರು ಹಾಗೂ ಮಹಿಳೆಯರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ರೈತ ಮುಖಂಡ ಕುರುಬೂರು ಶಾಂತಕುಮಾರ್, ಪ್ರಸಕ್ತ ಜಾರಿಗೊಳಿಸಲು ಉದ್ದೇಶಿಸಿರುವ ಎಪಿಎಂಸಿ ಕಾಯ್ದೆಯಿಂದ ರೈತರಿಗೆ ಬೆಲೆ, ತೂಕದದಲ್ಲಿ ವಂಚನೆ ಸೇರಿದಂತೆ ಇನ್ನಿತರ ಯಾವುದೇ ರೀತಿ ಅನ್ಯಾಯವಾದರೂ ದೂರು ದಾಖಲಿಸುವಂತಿಲ್ಲ. ಇದರಿಂದ ರೈತರ ಬೆಳೆಗೆ ಸೂಕ್ತ ಬೆಲೆ ಸಿಗುವುದಿಲ್ಲ. ರೈತರ ಉತ್ಪನ್ನಗಳನ್ನು ಬಂಡವಾಳಶಾಹಿಗಳು ಖರೀದಿಸುವ ಸಾಧ್ಯತೆ ಹೆಚ್ಚಿದ್ದು, ರೈತರಿಗೆ ನಷ್ಟವಾಗಲಿದೆ. ಆಗಾಗಿ ಕಾಯ್ದೆ ಜಾರಿ ಮಾಡಬಾರದು ಎಂದು ಆಗ್ರಹಿಸಿದರು.
ಲಾಕ್‍ಡೌನ್‍ನಿಂದ ಗ್ರಾಮೀಣ ಜನರು ಸಂಕಷ್ಟದಲ್ಲಿದ್ದಾರೆ. ಆದರೂ ಕೆಲ ಖಾಸಗಿ ಹಣಕಾಸು ಸಂಸ್ಥೆಗಳು ಮಹಿಳೆಯರ ಮೇಲೆ ಒತ್ತಡ ಹೇರಿ ಸಾಲ ಪಾವತಿಗೆ ಮುಂದಾಗುತ್ತಿರುವುದು ಖಂಡನೀಯ. ಸರ್ಕಾರ ಕೋವಿಡ್ ಸಂಕಷ್ಟದ ಪರಿಸ್ಥಿತಿ ಅರಿತು 6 ತಿಂಗಳವರೆಗೆ ಸಾಲ ಮರುಪಾವತಿ ಪ್ರಕ್ರಿಯೆ ಮುಂದೂಡಬೇಕು. ಕೃಷಿ ಭೂಮಿ ಕೃಷಿಕರೇ ಖರೀದಿಸಬೇಕೆಂಬ ನಿಯಮ ಬಿಟ್ಟು ಬಂಡವಾಳಶಾಹಿಗಳು, ಕೈಗಾರಿಕೆ, ರಿಯಲ್ ಎಸ್ಟೇಟ್ ಉದ್ಯಮಿಗಳು ಖರೀದಿಸಲು ಅವಕಾಶ ನೀಡುವ ಭೂ ಸುಧಾರಣೆ ಕಾಯ್ದೆ ಜಾರಿಯಾಗಬಾರದು ಎಂದು ಒತ್ತಾಯಿಸಿದರು. ಇದೇ ವೇಳೆ ಪ್ರತಿಭಟನಾಕಾರರು ತಹಸೀಲ್ದಾರ್ ಡಿ.ನಾಗೇಶ್‍ಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್, ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್, ಕಿರಗಸೂರು ಪ್ರಸಾದ್‍ನಾಯಕ್, ಅಪ್ಪಣ್ಣ, ವಿರೇಶ್, ರಾಮೇಗೌಡ, ಕೃಷ್ಣಪ್ಪ, ರಂಗರಾಜು, ಲಾಯರ್ ರವಿಶಂಕರ್, ಹಾಡ್ಯ ರವಿ, ಮರಿದೇವೇಗೌಡ, ಕುಪ್ಯ ಪುಟ್ಟಸ್ವಾಮಿ ಸೇರಿದಂತೆ ಹಲವು ಮುಖಂಡರು, ಮಹಿಳಾ ಸದಸ್ಯರಿದ್ದರು.