ರೈತರನ್ನು ನರಿಯಿಂದ ಪಾರು ಮಾಡುವುದಾಗಿ ಹೇಳಿ ಹುಲಿ ಪಹರೆ ಹಾಕಿದಂತಾಗಿದೆ
ಮೈಸೂರು

ರೈತರನ್ನು ನರಿಯಿಂದ ಪಾರು ಮಾಡುವುದಾಗಿ ಹೇಳಿ ಹುಲಿ ಪಹರೆ ಹಾಕಿದಂತಾಗಿದೆ

January 10, 2021

ಮೈಸೂರು,ಜ.9(ಎಂಟಿವೈ)-ಎಪಿಎಂಸಿಯಲ್ಲಿ ನರಿ ಗಳಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದು ಬಿಂಬಿಸಿ, ಈಗ ಹುಲಿಗಳನ್ನು ಬಿಟ್ಟು ರೈತ ಸಂಕುಲ ವನ್ನೇ ನಾಶ ಮಾಡಲು ಹೊರಟಂತೆ ಎಪಿಎಂಸಿ ಕಾಯ್ದೆಗೆ ಬಿಜೆಪಿ ಸರ್ಕಾರ ತಿದ್ದುಪಡಿ ಮಾಡಿದೆ ಎಂದು ಚಿಂತಕ ಶಿವಸುಂದರ್ ಆರೋಪಿಸಿದ್ದಾರೆ.

ಮೈಸೂರಿನ ಇನ್ಸ್‍ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ದೇಶಪ್ರೇಮಿ ಯುವಾಂದೋಲನ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ನೆಲೆ ಹಿನ್ನೆಲೆ-ರಂಗ ಬಳಗದ ಸಂಯುಕ್ತಾಶ್ರಯದಲ್ಲಿ ರೈತ ಹೋರಾಟ ಬೆಂಬಲಿಸಿ ನಡೆದ ಯುವಜನ ಜಾಥಾದ ಸಮಾರೋಪ ಸಮಾರಂಭದ ಅಂಗವಾಗಿ `ರೈತ ಹೋರಾಟದ ಹಿನ್ನೆಲೆ ಮತ್ತು ಸತ್ಯಗಳು-ಕೃಷಿ ಕಾಯ್ದೆಯ ಮಿಥ್ಯೆಗಳು’ ವಿಚಾರ ಸಂಚಾರ ಸಂಕಿರಣದಲ್ಲಿ `ಕೃಷಿ ಕಾಯ್ದೆಗಳು-ವಿರೋಧ ಯಾಕೆ?’ ವಿಷಯ ಕುರಿತು ಮಾತನಾಡಿದ ಅವರು, ಬಿಜೆಪಿ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿರುವುದು ಸಣ್ಣ ಹಾಗೂ ಮಧ್ಯಮ ವರ್ಗದ ರೈತರ ಬೆನ್ನೆಲುಬು ಮುರಿಯುವು ದರೊಂದಿಗೆ ಕೃಷಿ ಕ್ಷೇತ್ರವನ್ನೇ ಅಂಬಾನಿ ಸಂಸ್ಥೆಗೆ ಅಡ ಇಡುವ ಹುನ್ನಾರವಾಗಿದೆ ಎಂದು ದೂರಿದರು.

ಎಪಿಎಂಸಿಯ ಬೈಪಾಸ್(ತಿದ್ದುಪಡಿ) ಕಾಯ್ದೆ ಯಿಂದ ರೈತರಿಗೆ ಉಪಯೋಗವಾಗಲಿದೆ ಎಂದು ಬಿಂಬಿಸಲಾಗುತ್ತಿದೆ. ಇದಕ್ಕೆ ಎಪಿಎಂಸಿಯಲ್ಲಿ ನಡೆಯುವ ಸಣ್ಣಪುಟ್ಟ ಸಮಸ್ಯೆಯನ್ನು ಮುಂದಿಟ್ಟು ರೈತರನ್ನು ದಿಕ್ಕು ತಪ್ಪಿಸುವ ಸಂಚು ನಡೆಯುತ್ತಿದೆ. ಎಪಿಎಂಸಿ ತಿದ್ದುಪಡಿ ಕಾಯ್ದೆ ಖಾಸಗೀಕರಣದ ಹುನ್ನಾರವಾಗಿದೆ. ಲಾಭವಿಲ್ಲದೆ ಯಾವುದೇ ಚಟುವಟಿಕೆ ನಡೆಸಲು ಖಾಸಗಿ ಸಂಸ್ಥೆಗಳು ಮುಂದೆ ಬರುವುದಿಲ್ಲ ಎನ್ನುವು ದನ್ನು ಮನಗಾಣಬೇಕು. ಎಪಿಎಂಸಿಯಲ್ಲಿ ನರಿಗಳಿಂದ ಸಮಸ್ಯೆಯಾಗುತ್ತಿದೆ. ಅದನ್ನು ನಿವಾರಿಸುವುದಾಗಿ ಹುಲಿ ಬಿಡುತ್ತಿದ್ದೇವೆ ಎನ್ನುವ ಅರ್ಥದಲ್ಲಿ ಸರ್ಕಾರ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಪ್ರಸ್ತುತ ಸಣ್ಣಪುಟ್ಟ ಸಮಸ್ಯೆಗಳಿಂದ ರೈತರು ಬಚಾವಾಗಬಹುದು. ಆದರೆ ಖಾಸಗಿ ಸಂಸ್ಥೆಗಳ ಹಿಡಿತಕ್ಕೆ ಎಪಿಎಂಸಿ ಬಂದಾಗ ಹುಲಿ ಹೊಡೆತದಿಂದ ಪಾರಾಗಲು ಸಾಧ್ಯವೇ ಇಲ್ಲ ದಂತಹ ದುಸ್ಥಿತಿ ಎದುರಾಗುವುದು ಶತಸಿದ್ಧ. ಇದ ಕ್ಕಾಗಿ ಉಗ್ರ ಹೋರಾಟ ಅನಿವಾರ್ಯ ಎಂದರು.

ನಮ್ಮ ದೇಶದಲ್ಲಿ ಹಿಂದಿನಿಂದಲೂ ರೈತರು ಬೆಳೆದ ಫಸಲನ್ನು ಒಕ್ಕಣೆ ಮಾಡಿದ ಬಳಿಕ ಮಾರಾಟ ಮಾಡುವ ಪದ್ಧತಿ ಅನುಸರಿಸುತ್ತಾ ಬಂದಿದ್ದಾರೆ. ಬಹುತೇಕ ರೈತರಿಗೆ ಫಸಲನ್ನು ದಾಸ್ತಾನು ಮಾಡಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ. ಒಕ್ಕಣೆ ಮಾಡಿದ ತಕ್ಷಣವೇ ಮಾರಾಟ ಮಾಡು ತ್ತಿದ್ದಾರೆ. 1960ರ ವೇಳೆ ದೇಶದಲ್ಲಿ ಆಹಾರ ಸಮಸ್ಯೆ ಉಂಟಾಗಿತ್ತು. ಇಂತಹ ಸಂದರ್ಭದಲ್ಲಿ ಅಮೇರಿಕಾ ದಿಂದ ಗೋಧಿಯನ್ನು ಆಮದು ಮಾಡಿಕೊಳ್ಳಲಾಯಿತು. ಇದೇ ವೇಳೆ ಹಸಿರು ಕ್ರಾಂತಿ ನಡೆಸಿ ಹೈಬ್ರಿಡ್ ತಳಿಯ ಗೋಧಿ ಬಿತ್ತನೆ ಮಾಡಿ, ಅದಕ್ಕೆ ರಸಗೊಬ್ಬರ ಬಳಕೆ ಮಾಡಲಾಯಿತು. ಈ ಸಂದರ್ಭದಲ್ಲಿ ರೈತರು ಬೆಳೆದ ಬೆಳೆಯನ್ನು ಕಡಿಮೆ ಬೆಲೆಗೆ ವ್ಯಾಪಾರಿಗಳು ಹೊಲ, ಗದ್ದೆ ಬಳಿಯೇ ಖರೀದಿಸಿ ವಂಚಿಸುತ್ತಿರುವುದನ್ನು ಮನಗಂಡು ಎಪಿಎಂಸಿ ಸ್ಥಾಪಿಸಲಾಯಿತು. ಆದರೆ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳು ಶಾಮೀಲಾಗಿ ರೈತರನ್ನು ವಂಚಿಸುವ ಪದ್ಧತಿ ಎಪಿಎಂಸಿಯಲ್ಲಿ ನಡೆದುಕೊಂಡು ಬಂದಿದೆ. ಇದನ್ನು ಮುಂದಿಟ್ಟು ಕೊಂಡು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿ, ಕಾರ್ಪೊರೇಟ್ ವಲಯಕ್ಕೆ ಅವಕಾಶ ನೀಡಲು ಉದ್ದೇಶಿಸಲಾಗಿದೆ ಎಂದು ಕಿಡಿಕಾರಿದರು.

ದೇಶದ ಜನಸಂಖ್ಯೆಯಲ್ಲಿ ಶೇ.67ರಷ್ಟು ಮಂದಿಗೆ (87 ಕೋಟಿ) 1.50 ಲಕ್ಷ ಕೋಟಿ ರೂ. ವೆಚ್ಚದಲ್ಲಿ ತಿಂಗಳಿಗೆ 560 ಕೋಟಿ ಕೆ.ಜಿಯಷ್ಟು ಆಹಾರ ಪದಾರ್ಥ ಸರಬರಾಜು ಮಾಡಲಾಗುತ್ತಿದೆ. ಇದೀಗ ಶಾಂತಕುಮಾರ್ ಸಮಿತಿ ವರದಿಯೊಂದನ್ನು ನೀಡಿದ್ದು, ದೇಶದ 27 ಕೋಟಿ ಜನರಿಗೆ ಮಾತ್ರ ಆಹಾರ ಪದಾರ್ಥ ಸರಬರಾಜು ಮಾಡಲು ಸಾಧ್ಯ ಎಂದು ವರದಿ ಹೇಳಿದೆ. ಇದರಿಂದ ಮುಂದಿನ ದಿನಗಳಲ್ಲಿ ಪಡಿತರ ವ್ಯವಸ್ಥೆಯಲ್ಲಿ ಬಡ ಹಾಗೂ ಮಧÀ್ಯಮ ವರ್ಗದ ಜನರಿಗೆ ಆಹಾರ ಪದಾರ್ಥ ಪೂರೈಕೆ ತೊಡ ಕಾಗಲಿದೆ. ಪ್ರಸ್ತುತ 80 ಲಕ್ಷ ಟನ್ ಆಹಾರ ಪದಾರ್ಥ ಗಳ ಸಂಗ್ರಹಕ್ಕೆ ವ್ಯವಸ್ಥೆ ಇದೆ. 120 ಟನ್ ಸಾಮಥ್ರ್ಯದ ಸಂಗ್ರಹದ ಗೋಡೌನ್ ಅಗತ್ಯವಿದೆ. ಫುಡ್ ಕಾರ್ಪೊ ರೇಷನ್ ಆಫ್ ಇಂಡಿಯಾ ಗೋದಾಮು ಸ್ಥಾಪನೆಗೆ 5ಸಾವಿರ ಕೋಟಿ ರೂ. ಅಗತ್ಯವಿದ್ದು, ಹೊಸ ಗೋದಾಮು ನಿರ್ಮಿಸಲು ಸಾಧ್ಯವಿಲ್ಲ ಎಂದಿದೆ. ಆದರೆ 40 ಲಕ್ಷ ಟನ್ ಸಂಗ್ರಹಗಾರ ಹೊಂದಿರುವ ಅದಾನಿ ಕಂಪನಿಗೆ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ 1 ಕೆಜಿಗೆ ವರ್ಷಕ್ಕೆ 2 ಸಾವಿರ ರೂ.ನಂತೆ 40 ಲಕ್ಷ ಟನ್ ಆಹಾರ ಪದಾರ್ಥಗಳ ದಾಸ್ತಾನು ಮಾಡಲು 4 ಸಾವಿರ ಕೋಟಿ ಬಾಡಿಗೆ ನೀಡುತ್ತಿದೆ. 5 ಸಾವಿರ ಕೋಟಿ ರೂ. ವೆಚ್ಚ ಮಾಡಿ ಗೋದಾಮು ಕಟ್ಟಲು ಆಗದ ಸರ್ಕಾರ, ಪ್ರತಿ ವರ್ಷ 4 ಸಾವಿರ ಕೋಟಿಯನ್ನು ಅದಾನಿ ಕಂಪನಿಗೆ ಸುರಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಸಂಸ ಮುಖಂಡ ಗುರುಪ್ರಸಾದ್ ಕೆರಗೋಡು ವಹಿಸಿ ದ್ದರು. ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ನೆಲೆ ಹಿನ್ನೆಲೆ ಕಲಾ ಬಳಗದ ಗೋಪಾಲ ಕೃಷ್ಣ, ಪುಷ್ಪ, ಮಮತ, ಪಿ.ಮರಂಕಯ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »