ನಂಜನಗೂಡು, ಮೇ 26(ರವಿ)-ತಾಲೂಕಿನ ಕಾರ್ಯ ಹಾಗೂ ಹುಸ್ಕೂರು ಗ್ರಾಮದಲ್ಲಿ ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ರೈತರು ಬೆಳೆದಿದ್ದ ನೂರಾರು ಎಕರೆ ಬಾಳೆ ಬೆಳೆ ಹಾನಿಗೀಡಾಗಿ ಅಪಾರ ನಷ್ಟ ಸಂಭವಿಸಿದೆ.
ಸೋಮವಾರ ರಾತ್ರಿ ಸುರಿದ ಮಳೆಯು ಭಾರೀ ಬಿರುಗಾಳಿಯನ್ನೇ ಹೊತ್ತು ತಂದ ಪರಿಣಾಮ, ಲಕ್ಷಾಂತರ ರೂ. ಖರ್ಚು ಮಾಡಿ ಕಟಾವಿಗೆ ಬಂದಿದ್ದ ನೇಂದ್ರ ಮತ್ತು ಏಲಕ್ಕಿ ಬಾಳೆ ನೆಲಕಚ್ಚಿದೆ. ಹುಸ್ಕೂರು ಗ್ರಾಮದ ತಮ್ಮಯ್ಯಶೆಟ್ಟಿ ಅವರ 10 ಎಕರೆ, ಕುಮಾರ್-5, ನಂದೀಶ-4, ಚಿನ್ನಸ್ವಾಮಿ, ಮಲ್ಲಿಗಮ್ಮ, ಮಹದೇವಸ್ವಾಮಿ, ರಾಜಪ್ಪ ತಲಾ 3 ಎಕರೆ ಹಾಗೂ ಗಿರೀಶ್, ಮಹದೇವ, ಮಲ್ಲೇಶ್ ತಲಾ 2 ಎಕರೆಯಲ್ಲಿ ಬೆಳೆದಿದ್ದ ಬಾಳೆ ನೆಲಕ್ಕಚ್ಚಿದ್ದರೆ, ಕಾರ್ಯ ಗ್ರಾಮದ ಸ್ವಾಮಿ-2 ಎಕರೆ, ಭೋಗಣ್ಣ ಅವರ 1 ಎಕರೆ ಸೇರಿದಂತೆ ಇನ್ನೂ ಹಲವು ರೈತರ ನೂರಾರು ಎಕರೆ ಬಾಳೆ ಬೆಳೆ ಹಾನಿಯಾಗಿದೆ. ಲಾಕ್‍ಡೌನ್‍ನಿಂದ ಬೆಳೆದ ಬೆಳೆಗೆ ಬೆಲೆಯಿಲ್ಲದೆ ಕಂಗಾಲಾಗಿದ್ದ ರೈತರು, ಸದ್ಯ ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ಉಂಟಾಗಿದ್ದು, ಚಿಂತೆಗೀಡು ಮಾಡಿದೆ. ಸೂಕ್ತ ಪರಿಹಾರಕ್ಕಾಗಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.