ಸ್ವಾರ್ಥ ಸಾಧನೆ ಬಿಟ್ಟು ದಲಿತ ಸಂಘಟನೆಗಳು ಒಂದಾಗಬೇಕು
ಮೈಸೂರು, ಮೈಸೂರು ಗ್ರಾಮಾಂತರ

ಸ್ವಾರ್ಥ ಸಾಧನೆ ಬಿಟ್ಟು ದಲಿತ ಸಂಘಟನೆಗಳು ಒಂದಾಗಬೇಕು

May 27, 2020

ತಿ.ನರಸೀಪುರ, ಮೇ 26 (ಎಸ್‍ಕೆ)-ಶೋಷಣೆ ಹಾಗೂ ಅನ್ಯಾಯದ ವಿರುದ್ಧ ದನಿ ಎತ್ತುವ ನಿಟ್ಟಿನಲ್ಲಿ ಛಿದ್ರವಾಗಿರುವ ದಲಿತ ಸಂಘಟನೆಗಳ ಎಲ್ಲಾ ಬಣಗಳು ಸ್ವಾರ್ಥ ಸಾಧನೆ ಬಿಟ್ಟು ಒಂದಾಗಬೇಕಿದೆ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿಯ ಚಾಲನಾ ಸಂಚಾಲಕ ಹರಿಹರ ಆನಂದಸ್ವಾಮಿ ಸಲಹೆ ನೀಡಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ದಲಿತ ಸಂಘರ್ಷ ಸಮಿತಿಯ ತಾಲೂಕು ಶಾಖೆಯ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಇಂದು ದಲಿತ ಸಂಘರ್ಷ ಸಮಿತಿಯು ಕೆಲವರ ಸ್ವಾರ್ಥ ನಡೆಯಿಂದಾಗಿ ದಾರಿ ತಪ್ಪಿದ್ದು, ತನ್ನ ಮೂಲ ಆಶಯವನ್ನೇ ಮರೆತಿದೆ. ನೊಂದವರು, ಅಶಕ್ತರ ಕಣ್ಣು ಒರೆಸಬೇಕಾದ ಸಮಿತಿಯು ಕೆಲವರ ಸ್ವಾರ್ಥ ನಡೆಗೆ ಬಲಿಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ತಾಲೂಕು ಶಾಖೆಗೆ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಸಮಿತಿಯು ಮೂಲ ಆಶಯದೊಂದಿಗೆ ಸೈದ್ಧಾಂತಿಕ ಧೋರಣೆಯಡಿ ಕೆಲಸ ನಿರ್ವಹಿಸಲಿದೆ. ನೂತನ ಸಮಿತಿಯು ಬಣ ರಾಜಕೀಯ ಮಾಡದೇ ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ಹೋರಾಟ ನಡೆಸಲಿದೆ. ಶೋಷಣೆ, ಅನ್ಯಾಯದ ವಿರುದ್ಧ ದನಿ ಎತ್ತುವ ಮೂಲಕ ಐತಿಹಾಸಿಕ ಸಂಘಟನೆಯಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮಿತಿಯ ಜಿಲ್ಲಾ ಸಂಚಾಲಕ ಆಲಗೂಡು ಡಾ.ಚಂದ್ರಶೇಖರ್ ಮಾತನಾಡಿದರು. ಜಿಲ್ಲಾ ನಗರ ಸಂಚಾಲಕ ಪೈಲ್ವಾನ್ ಕೃಷ್ಣ, ತಾಲೂಕು ಸಂಚಾಲಕ ಕೆಂಪಯ್ಯನಹುಂಡಿ ರಾಜು, ಟೌನ್ ಸಂಚಾಲಕ ಎಸ್.ಗಿರೀಶ್, ಸಂಘಟನಾ ಸಂಚಾಲಕ ವಿನಯ್‍ಕುಮಾರ್, ಬುಡನ್ ಸಾಬ್, ರಮೇಶ್, ಕಾನೂನು ಸಲಹೆಗಾರ ಡಾ.ಎಂ.ಸಿದ್ದರಾಜು, ನೆರಗ್ಯಾತನಹಳ್ಳಿ ಮನೋಜ್‍ಕುಮಾರ್, ಮಾದಿಗಹಳ್ಳಿ ಮಹೇಶ್, ತೊಟ್ಟವಾಡಿ ರಾಜಪ್ಪ, ಕೊಳತ್ತೂರು ಪ್ರಭಾಕರ್, ಕರೋಹಟ್ಟಿ ಶಿವಮೂರ್ತಿ, ಕನ್ನಾಯಕನ ಹಳ್ಳಿ ಮರಿಸ್ವಾಮಿ ಮತ್ತಿತರರಿದ್ದರು.

ತಿ.ನರಸೀಪುರದಲ್ಲಿ ನಡೆದ ದಲಿತ ಸಂಘರ್ಷ ಸಮಿತಿಯ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ ಸಮಿತಿಯ ಹಿರಿಯ ಹೋರಾಟಗಾರ ಹರಿಹರ ಆನಂದಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

Translate »