ಕೆಆರ್‌ಎಸ್‌ ಹಿನ್ನೀರಿನ ವೇಣು ಗೋಪಾಲಸ್ವಾಮಿ ದೇವಸ್ಥಾನಕ್ಕೂ ಪ್ರವಾಸಿಗರ ದಂಡು
ಮೈಸೂರು

ಕೆಆರ್‌ಎಸ್‌ ಹಿನ್ನೀರಿನ ವೇಣು ಗೋಪಾಲಸ್ವಾಮಿ ದೇವಸ್ಥಾನಕ್ಕೂ ಪ್ರವಾಸಿಗರ ದಂಡು

July 24, 2018

ಮೈಸೂರು:  ಕೆಆರ್‌ಎಸ್‌ ಹಿನ್ನೀರು ಪ್ರದೇಶದಲ್ಲಿರುವ ವೇಣು ಗೋಪಾಲಸ್ವಾಮಿ ದೇವಾಲಯ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ.

ಸಾಗರದಂತೆ ಕಾಣುವ ಕೆಆರ್‌ಎಸ್‌ ಹಿನ್ನೀರು ಪ್ರದೇಶದಲ್ಲಿರುವ ಐತಿಹಾಸಿಕ ವೇಣುಗೋಪಾಲಸ್ವಾಮಿ ದೇವಾಲಯ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಹಿಂದೆ ಹಿನ್ನೀರಿನ ಮಟ್ಟ ಇಳಿದಿದ್ದಾಗ ಈ ದೇವಾಲಯ ಗೋಚರವಾಗಿತ್ತು. ನಂತರ ದಡಕ್ಕೆ ಸ್ಥಳಾಂತರಿಸಲಾಗಿದೆ. ದೇವಾಲಯದ ಜೊತೆಗೆ ವಿಸ್ತಾರವಾದ ಆವರಣದಲ್ಲಿ ನಿಂತು ಹಿನ್ನೀರಿನ ದೃಶ್ಯವನ್ನು ಕಣ್ತುಂಬಿಕೊಳ್ಳಲು ಇದೀಗ ಜನ ಸಾಗರವೇ ಹರಿದು ಬರುತ್ತಿದೆ.

ಕೆಆರ್‌ಎಸ್‌ ಅಣೆಕಟ್ಟೆ ವೀಕ್ಷಣೆಗೆ ಬರುವ ಪ್ರವಾಸಿಗರು, ಹಿನ್ನೀರು ಪ್ರದೇಶದಲ್ಲಿರುವ ವೇಣುಗೋಪಾಲಸ್ವಾಮಿ ದೇವಾಲಯಕ್ಕೂ ಭೇಟಿ ನೀಡುತ್ತಿದ್ದಾರೆ. ಅತ್ಯಂತ ಆಕರ್ಷಕ, ವಿಸ್ತಾರವಾದ ದೇವಾಲಯವನ್ನು ಕಂಡು ಮುದಗೊಳ್ಳುವುದರ ಜೊತೆಗೆ ಸಾಗರದಂತೆ ಕಾಣುವ ಹಿನ್ನೀರಿನ ಸೊಬಗನ್ನೂ ಸವಿಯುತ್ತಿದ್ದಾರೆ. ಸುರಕ್ಷತೆ ದೃಷ್ಟಿಯಿಂದ ಅಳವಡಿಸಿರುವ ಕಬ್ಬಿಣದ ಬೇಲಿಯ ಪಕ್ಕದಲ್ಲಿ ನಿಂತು, ದೇವಾಲಯ ಹಾಗೂ ಹಿನ್ನೀರಿನ ದೃಶ್ಯವನ್ನು ಮೊಬೈಲ್‍ಗಳಲ್ಲಿ ಚಿತ್ರೀಕರಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.ಸೆಲ್ಫೀ ತೆಗೆದುಕೊಂಡು ಪುಳಕಿತರಾಗುತ್ತಿದ್ದಾರೆ.

ಇಲ್ಲಿಗೆ ಬರುವ ಪ್ರವಾಸಿಗರಿಗೆ ಯಾವ ತೊಂದರೆಯೂ ಆಗದಂತೆ ಸೂಕ್ತ ಭದ್ರತೆ ಒದಗಿಸಲಾಗಿದೆ. ಯಾರೂ ಹಿನ್ನೀರಿನಲ್ಲಿ ಇಳಿಯದಂತೆ ಕಟ್ಟೆಚ್ಚರವಹಿಸಲಾಗಿದೆ. ಒಟ್ಟಾರೆ ವೇಣುಗೋಪಾಲಸ್ವಾಮಿ ದೇವಾಲಯ ಧಾರ್ಮಿಕ ಕೇಂದ್ರವಷ್ಟೇ ಅಲ್ಲದೆ, ಆಕರ್ಷಕ ಪ್ರವಾಸಿ ತಾಣವಾಗಿಯೂ ಸೆಳೆಯುತ್ತಿದೆ. ಮನಸ್ಸಿನಲ್ಲಿ ಏನೇ ತುಮುಲವಿದ್ದರೂ ಇಲ್ಲಿಗೆ ಕಾಲಿಟ್ಟ ಕ್ಷಣವೇ ನಿರಾಳವೆನಿಸುತ್ತದೆ. ಕಾವೇರಿ ಮಡಿಲಲ್ಲಿ ಮಲಗಿ, ಶ್ರೀಕೃಷ್ಣನ ಕೊಳಲು ನಿನಾದವನ್ನು ಆಲಿಸಿದಂತ ಭಾವ ಮೂಡುತ್ತದೆ. ದೈವಭಕ್ತರು, ಪ್ರಕೃತಿ ಪ್ರಿಯರಿಗಂತೂ ಇದು ಸ್ವರ್ಗವೇ ಸರಿ.

ಕೆಆರ್‌ಎಸ್‌ ಅಣೆಕಟ್ಟೆ ವೀಕ್ಷಣೆಗೂ ಸಹಸ್ರಾರು ಮಂದಿ ಆಗಮಿಸುತ್ತಿದ್ದಾರೆ. ನದಿಯ ಸೇತುವೆ ಮೇಲೆ ವಾಹನಗಳನ್ನು ನಿಲ್ಲಿಸಿ, ಅಣೆಕಟ್ಟೆಯಿಂದ ಧುಮ್ಮಿಕ್ಕುವ ನೀರನ್ನು ಕಂಡು ಮೊಬೈಲ್‍ಗಳಲ್ಲಿ ಸೆರೆ ಹಿಡಿಯುವ ದೃಶ್ಯ ಸಾಮಾನ್ಯವಾಗಿದೆ. ಕೆಆರ್‌ಎಸ್‌ ಹಾಗೂ ವೇಣುಗೋಪಾಲಸ್ವಾಮಿ ದೇವಾಲಯ ಮಾರ್ಗದಲ್ಲಿ ತಿಂಡಿ-ತಿನಿಸು, ಪಾನೀಯಗಳ ಮಾರಾಟವೂ ಜೋರಾಗಿದೆ.

Translate »