ಸರ್ವಿಸ್ ರಸ್ತೆಯಲ್ಲೇ ಅನಧಿಕೃತ ಮಳಿಗೆ ನಿರ್ಮಾಣ
ಮೈಸೂರು

ಸರ್ವಿಸ್ ರಸ್ತೆಯಲ್ಲೇ ಅನಧಿಕೃತ ಮಳಿಗೆ ನಿರ್ಮಾಣ

July 24, 2018

ಮೈಸೂರು: ಮೈಸೂರು ವಿವಿಯಿಂದ, ಕುದುರೆಮಾಳ, ಸರಸ್ವತಿಪುರಂ, ಶ್ರೀರಾಂಪುರ 2ನೇ ಹಂತದ ಮೂಲಕ ಮುಂದಕ್ಕೆ ಸಾಗುವ ಬೃಹತ್ ರಾಜಕಾಲುವೆಯ ಮಾರ್ಗದ ಮಧ್ಯದ ಕಿರಿದಾದ ಕಾಲುವೆಯನ್ನು ದುರಸ್ತಿ (ಕೃಷ್ಣಧಾಮದಿಂದ 353/ಎ ನಂಬರಿನ ಮನೆಯವರೆಗೆ) ಮಾಡಬೇಕೆಂದು ವಲಯ ಕಚೇರಿ-3ರ ಸಹಾಯಕ ಇಂಜಿನಿಯರ್ ನೀಡಿದ್ದ ವರದಿಯನ್ನು ತಿದ್ದಿದವರು ಯಾರು ಎಂದು ಸ್ಥಳೀಯ ನಿವಾಸಿಗಳು ಪಾಲಿಕೆ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

ಮೈಸೂರಿನ ಸಾಹುಕಾರ್ ಚನ್ನಯ್ಯ ರಸ್ತೆ, ಸರಸ್ವತಿಪುರಂ ಕೃಷ್ಣಧಾಮ ಮಂದಿರದ ಎದುರಿನ ಎಸ್‍ಬಿಐ ಪ್ರಾದೇಶಿಕ ಕಚೇರಿ ಪಕ್ಕದಲ್ಲಿನ ಸರ್ವಿಸ್ ರಸ್ತೆ ಮತ್ತೆ ಸಾರ್ವಜನಿಕರ ಕೈ ತಪ್ಪುವಂತಿದೆ. ರಾಜಕಾಲುವೆ ಪಕ್ಕದ ಈ ಸರ್ವಿಸ್ ರಸ್ತೆಯಲ್ಲಿ 13 ಅನಧಿಕೃತ ಮಳಿಗೆಗಳು ತಲೆಯೆತ್ತಿವೆ.

ಆದರೆ, ಯಾರಿಗಾಗಿ ಎಂಬುದು ಇಂದಿಗೂ ಸ್ಪಷ್ಟವಿಲ್ಲ. ಈ ವರದಿಯನ್ನು ತಿದ್ದಿ, ಯಾರಿಗಾಗಿ ಅನುಕೂಲ ಮಾಡಿಕೊಡಲು ಅಧಿಕಾರಿಗಳು ಪ್ರಯತ್ನಿಸಿದ್ದಾರೆಂಬುದು ಇನ್ನೂ ಅರ್ಥವಾಗಿಲ್ಲ ಎಂದು ಸ್ಥಳೀಯ ನಿವಾಸಿ ಎಂ.ಎಸ್.ಸತ್ಯಾನಂದ ವಿಟ್ಟು ಹಾಗೂ ಸಾಮಾಜಿಕ ಹೋರಾಟಗಾರ್ತಿ ಭಾನುಮೋಹನ್ ಅಧಿಕಾರಿಗಳ ನಡೆಯನ್ನು ಜಂಟಿಯಾಗಿ ಪ್ರಶ್ನಿಸಿದ್ದಾರೆ.
ಈ ಜಾಗದಲ್ಲಿ ಮಳೆಗಾಲ ಆರಂಭವಾದರೆ ಮೈಸೂರು ವಿವಿ, ಟಿ.ಕೆ.ಬಡಾವಣೆಯಿಂದ ಬೃಹತ್ ಪ್ರಮಾಣದ ಮಳೆ ನೀರು ಬರುತ್ತದೆ. ಈ ವೇಳೆ ಮಳೆ ನೀರು ಅಕ್ಕ-ಪಕ್ಕದ ಮನೆಗಳಿಗೆ ನುಗ್ಗುತ್ತದೆ. ಹೆಚ್ಚು ಮಳೆ ನೀರಿನಿಂದ ಇಲ್ಲಿನ ಮನೆಗಳಿಗೆ ನೀರು ನುಗ್ಗಿದಾಗ ಹಿಂದಿನ ಜಿಲ್ಲಾಧಿಕಾರಿ ಹರ್ಷಗುಪ್ತ ಅವರೇ ಖುದ್ದು ಸ್ಥಳಕ್ಕೆ ಹಾಜರಾಗಿ, ಸರಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಅದರಂತೆ, ಮಿನಿ ರಾಜಕಾಲುವೆ (ಕೃಷ್ಣಧಾಮದಿಂದ 353/ಎ ನಂಬರಿನ ಮನೆಯವರೆಗೆ)ಯನ್ನು ಅಗಲೀಕರಣಗೊಳಿಸಿ, ಮಳೆ ನೀರು ಸರಾಗವಾಗಿ ಹೋಗುವಂತೆ ಮಾಡಲು 30 ಲಕ್ಷ ರೂ. ಅನುದಾನಕ್ಕೆ ಕ್ರಿಯಾಯೋಜನೆ ರೂಪಿಸಲಾಗಿತ್ತು. ಅಲ್ಲದೆ, ಈ ವರದಿ ಆಧಾರ ಮೇಲೆ ಪಾಲಿಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಸಹಾ ಮಳಿಗೆಗಳನ್ನು ಕಟ್ಟುಬಹುದು ಎಂದು ಸ್ಥಳ ಮಹಜರು ನಡೆಸಿ, ಒಪ್ಪಿಸಿ ಸೂಚಿಸಿದ್ದಾರೆ. ಸುಪ್ರೀಂಕೋರ್ಟ್ ಆದೇಶವನ್ನೇ ಮಾರೆಮಾಚಿ ಈ ರೀತಿ ಅಕ್ರಮ ಮಳಿಗೆ ತಲೆಯೆತ್ತುತ್ತಿವೆ.

ಇದೀಗ ಸಹಾಯಕ ಇಂಜಿನಿಯರ್ ನೀಡಿರುವ ವರದಿಯನ್ನೇ ಕೈಯಲ್ಲಿ ತಿದ್ದಿ, ಮಳಿಗೆ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟ ಅಧಿಕಾರಿ ಯಾರು? ಯಾರ ಒತ್ತಡದ ಮೇಲೆ ಈ ಕೆಲಸ ಮಾಡಿದ್ದಾರೆ ಎಂಬ ವರದಿ ಕಳೆದ ಮೂರು ದಿನಗಳಿಂದ ಪತ್ರಿಕೆಗಳಲ್ಲಿ ಚರ್ಚೆಯಾಗುತ್ತಿದ್ದರೂ ಪಾಲಿಕೆ ಆಯುಕ್ತರು ಮಾತ್ರ ಇದರ ಬಗ್ಗೆ ಚಕಾರವೆತ್ತಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರಲ್ಲದೆ, ತಿದ್ದಿರುವ ದಾಖಲಾತಿಯನ್ನು ಬಿಡುಗಡೆಗೊಳಿಸಿದ್ದಾರೆ.

ಅಕ್ರಮ ಮಳಿಗೆ ನಿರ್ಮಾಣವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿರುವ ಜಾಗಕ್ಕೆ ಇಂದು ಅಥವಾ ನಾಳೆ ಭೇಟಿ ನೀಡುತ್ತೇನೆ. ಅಲ್ಲದೆ, ಈ ಘಟನೆ ಬಗ್ಗೆ ಪೂರ್ಣ ವರದಿ ನೀಡುವಂತೆ ಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ್ ಅವರಿಗೆ ಸೂಚಿಸಲಾಗಿದೆ. – ಅಭಿರಾಮ್ ಜಿ.ಶಂಕರ್, ಜಿಲ್ಲಾಧಿಕಾರಿ, ಮೈಸೂರು.

Translate »