ಮೈಸೂರಲ್ಲಿ ಯುವತಿ ನಾಪತ್ತೆ
ಮೈಸೂರು

ಮೈಸೂರಲ್ಲಿ ಯುವತಿ ನಾಪತ್ತೆ

July 24, 2018

ಮೈಸೂರು:  ಕಾಲೇಜಿಗೆ ಹೋಗಿ ಬರುವುದಾಗಿ ಮನೆಯಿಂದ ಹೊರಹೋದ ಯುವತಿ ನಾಪತ್ತೆಯಾಗಿರುವ ಪ್ರಕರಣ ಮೈಸೂರಿನ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಹೆಬ್ಬಾಳು ಬಡಾವಣೆಯ ಮಹದೇವಮ್ಮ ಹಾಗೂ ಸೋಮಣ್ಣ ದಂಪತಿ ಪುತ್ರಿ ಎಸ್.ಸೌಮ್ಯಾ(23) ನಾಪತ್ತೆಯಾಗಿರುವ ಯುವತಿ. ಜು.20ರಂದು ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಕಾಲೇಜಿಗೆ ಹೋಗಿ, ಸ್ನೇಹಿತರಿಗೆ ಪುಸ್ತಕ ಕೊಟ್ಟು ಬರುವುದಾಗಿ ತಿಳಿಸಿ ಮನೆಯಿಂದ ಹೋದವಳು ವಾಪಸ್ಸಾಗಿಲ್ಲವೆಂದು ಆಕೆಯ ಪೋಷಕರು ದೂರು ನೀಡಿದ್ದು, ಪ್ರಿಯಕರ ಮಹೇಶ್‍ನೊಂದಿಗೆ ಹೋಗಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಸೌಮ್ಯಾ ಅವರನ್ನು ವಿವಾಹ ಮಾಡಿಕೊಡುವಂತೆ ಮಹೇಶ್ ಪೀಡಿಸುತ್ತಿದ್ದ. ಇದಕ್ಕೆ ಒಪ್ಪಿ ಜು.6ರಂದು ಲಕ್ಷ್ಮೀಕಾಂತ ದೇವಸ್ಥಾನದಲ್ಲಿ ವಿವಾಹ ನೆರವೇರಿಸಲು ನಿಶ್ಚಯಿಸಿದ್ದೆವು. ಆದರೆ ಜು.3ರಂದು ಲಗ್ನ ಪತ್ರಿಕೆ ಕೊಟ್ಟು ಬರುವುದಾಗಿ ಹೋದ ಮಹೇಶ್, ವಾಪಸ್ಸು ಬರಲಿಲ್ಲ. ತನ್ನ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಆಗಿನಿಂದ ಮನೆಯಲ್ಲೇ ಇದ್ದ ಸೌಮ್ಯಾ, ಜು.20ರಂದು ಕಾಲೇಜಿಗೆ ಹೋಗಿ ಪುಸ್ತಕ ಕೊಟ್ಟು ಬರುತ್ತೇನೆಂದು ಹೊರ ಹೋದಳು. ಆದರೆ ಆಕೆಯ ದೊಡ್ಡಮ್ಮನ ಮಗನಾದ ಪ್ರಸನ್ನನ ಮೊಬೈಲ್‍ಗೆ `ಅಣ್ಣ ನನ್ನ ಹುಡಕ್ಬೇಡ. ಇದ್ರು ಅವನ್ ಜೊತೆ, ಸತ್ರು ಅವನ್ ಜೊತೆ. ಐ ಆಮ್ ಸಾರಿ ಅಣ್ಣ, ಅಪ್ಪ, ಅಮ್ಮ’ ಎಂದು ಮೆಸೆಜ್ ಕಳುಹಿಸಿ, ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾಳೆ. ಎಲ್ಲಾ ಕಡೆ ವಿಚಾರಿಸಿದರೂ ಪತ್ತೆಯಾಗಿಲ್ಲ. ಆಕೆ ಮಹೇಶ್‍ನೊಂದಿಗೆ ಹೋಗಿರಬಹುದು. ದಯಮಾಡಿ ಪತ್ತೆ ಮಾಡುವಂತೆ ಸೌಮ್ಯಾಳ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹೆಬ್ಬಾಳ್ ಠಾಣೆ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ. ಸೌಮ್ಯಾ ಅವರ ಬಗ್ಗೆ ಸುಳಿವು ಸಿಕ್ಕವರು ಹೆಬ್ಬಾಳ್ ಠಾಣೆ(0821-2418318) ಅಥವಾ ಕಂಟ್ರೋಲ್ ರೂಂ(2418339) ಸಂಪರ್ಕಿಸಿ, ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ.

Translate »