ಸಂಚಾರ ಅರಿವು ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ
ಮೈಸೂರು

ಸಂಚಾರ ಅರಿವು ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

July 24, 2018

ಮೈಸೂರು:  ಸಂಚಾರ ನಿರ್ವಹಣೆ ಮತ್ತು ರಸ್ತೆ ಸುರಕ್ಷತಾ ಅಂಗವಾಗಿ ದೇವರಾಜ ಸಂಚಾರ ಠಾಣೆಯ ಪೊಲೀಸರು, ಮಲ್ಲಮ್ಮ ಮರಿಮಲ್ಲಪ್ಪ ಮಹಿಳಾ ಕಲಾ, ವಾಣಿಜ್ಯ ಪದವಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ಸಂಚಾರ ನಿಯಮಗಳ ಅರಿವು ಮೂಡಿಸುವ ಸಲುವಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಸಂಚಾರ ಇನ್ಸ್‍ಪೆಕ್ಟರ್ ಎಲ್.ಶ್ರೀನಿವಾಸ್ ಬಹುಮಾನ ವಿತರಿಸಿದರು.

ನಂತರ ಮಾತನಾಡಿದ ಅವರು, ಇತ್ತೀಚೆಗೆ ವಿದ್ಯಾರ್ಥಿಗಳು, ಸಂಚಾರಿ ನಿಯಮಗಳನ್ನು ಪಾಲಿಸುತ್ತಿಲ್ಲ. ಇದರಿಂದ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ಹೆಲ್ಮೆಟ್ ಹಾಕದಿರುವುದು. ಲೈಸನ್ಸ್ ಇಲ್ಲದಿದ್ದರೂ ತ್ರಿಬಲ್ ರೈಡಿಂಗ್‍ನಲ್ಲಿ ಚಾಲನೆ ಮಾಡುವುದು ಹಾಗೂ ಅಗತ್ಯಕ್ಕಿಂತ ಹೆಚ್ಚು ವೇಗಮಿತಿಯಲ್ಲಿ ವಾಹನ ಚಾಲನೆ ಮಾಡುವುದರಿಂದ ಅಪಘಾತಗಳು ಹೆಚ್ಚಾಗಿವೆ ಎಂದು ತಿಳಿಸಿದರು.

ಆದ್ದರಿಂದ ವಿದ್ಯಾರ್ಥಿಗಳು, ಕಡ್ಡಾಯವಾಗಿ ರಸ್ತೆ ನಿಯಮಗಳನ್ನು ಪಾಲಿಸಿ, ದೇಶದ ಕಾನೂನಿಗೆ ಗೌರವ ನೀಡಬೇಕು. ಇದರಿಂದ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಕಿವಿಮಾತು ಹೇಳಿದರು.

ಸಭೆಯಲ್ಲಿ ಮಲ್ಲಮ್ಮ ಮರಿಮಲ್ಲಪ್ಪ ಮಹಿಳಾ ಕಲಾ, ವಾಣಿಜ್ಯ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ಪ್ರಪುಲ್ಲಾ ಚಂದ್ರ ಕುಮಾರ್, ಉಪನ್ಯಾಸಕಿ ಎಸ್.ಮನು ಇದ್ದರು. ಪೊಲೀಸ್ ಪೇದೆಗಳಾದ ಸುನಿಲ್, ಲಿಂಗರಾಜು ಇದ್ದರು.

Translate »