ಎಲ್ ಅಂಡ್ ಟಿ ಸಿಬ್ಬಂದಿಯಿಂದ ಸಂಚಾರ ಜಾಗೃತಿ
ಮೈಸೂರು

ಎಲ್ ಅಂಡ್ ಟಿ ಸಿಬ್ಬಂದಿಯಿಂದ ಸಂಚಾರ ಜಾಗೃತಿ

September 16, 2018

ಮೈಸೂರು:  ಎಲ್ ಆಂಡ್ ಟಿ ಸಂಸ್ಥೆಯ ಕಾರ್ಪೂ ರೇಟ್ ಸಾಮಾಜಿಕ ಹೊಣೆಗಾರಿಕೆ ವಿಭಾಗದ ಸಿಬ್ಬಂದಿ ಇತ್ತೀಚೆಗೆ ಮೈಸೂರು ನಗರದ ನಾಲ್ಕು ಸ್ಥಳಗಳಲ್ಲಿ ಸಂಚಾರಿ ಜಾಗೃತಿ ಅಭಿಯಾನ ಆಯೋಜಿಸಿದ್ದರು.

ಸಂಸ್ಥೆಯ 93 ಎಂಜಿನಿಯರ್‌ಗಳು, ವಿವಿ ಮೊಹಲ್ಲಾ, ಕೆ.ಆರ್. ಮೊಹಲ್ಲಾ, ಎನ್.ಆರ್.ಮೊಹಲ್ಲಾ ಹಾಗೂ ದೇವರಾಜ ಮೊಹಲ್ಲಾ ವ್ಯಾಪ್ತಿಯ ಟ್ರಾಫಿಕ್ ಪೊಲೀಸ್ ಠಾಣೆ ಸಿಬ್ಬಂದಿ ನೆರವಿನೊಂದಿಗೆ ನಗರದ ವಿವಿಧೆಡೆ ಸಂಚಾರಿ ನಿಯಮಗಳ ಕುರಿತು ಸಾರ್ವಜನಿಕರಲ್ಲಿ ಅದರಲ್ಲೂ ವಾಹನ ಚಾಲಕರು, ಪಾದಚಾರಿಗಳಲ್ಲಿ ಜಾಗೃತಿ ಮೂಡಿಸಿದರು.

ಮುಂಜಾನೆಯೇ ವಿವಿ ಮೊಹಲ್ಲಾ ಟ್ರಾಫಿಕ್ ಠಾಣೆ ಸಿಬ್ಬಂದಿ ಯೊಂದಿಗೆ ಎಲ್ ಅಂಡ್ ಟಿ ತಾಂತ್ರಿಕ ಸಿಬ್ಬಂದಿ ಕೈ ಸೂಚನೆ ಮೂಲಕ ಸಂಚಾರಿ ನಿಯಮ ಪಾಲನೆ ಸಲಹೆ ಸೂಚನೆ ಕುರಿತು ತರಬೇತಿ ಪಡೆದುಕೊಂಡು, ನಾಲ್ಕು ದಿಕ್ಕಿನಿಂದ ಬರುತ್ತಿದ್ದ ವಾಹನ ಸವಾರರಿಗೆ ನಿಯಮಗಳ ಕುರಿತು ಜಾಗೃತಿ ಮೂಡಿಸಿದರು. ಸಾರ್ವಜನಿಕರು ಹಾಗೂ ಅಂಧರಿಗೆ ರಸ್ತೆ ದಾಟುವ ವಿಧಾನ, ಸೀಟ್ ಬೆಲ್ಟ್ , ಜೀಬ್ರಾ ಕ್ರಾಸಿಂಗ್ ಹಾಗೂ ಹೆಲ್ಮೆಟ್ ಧರಿಸುವುದರಿಂದ ಆಗುವ ಅನುಕೂಲಗಳ ಬಗ್ಗೆ ಜಾಗೃತಿ ಮೂಡಿಸಿದರು. ಇಷ್ಟೆಲ್ಲದರ ಮಧ್ಯೆ ನಗರದ ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಎಲ್ಲೆಂದರಲ್ಲಿ ಆಟೋಗಳನ್ನು ನಿಲ್ಲಿಸಿ ಸುಗಮ ವಾಹನ ಸಂಚಾರಕ್ಕೆ ತೊಡಕಾಗಿದ್ದ ಆಟೋಗಳನ್ನು ನಿಯಂತ್ರಿಸಲು ಸಾಧ್ಯವಾಗದೆ ಹೈರಾಣಾಗಿ ಹೋಗಿದ್ದರು. ನಂತರ ಪೊಲೀಸ್ ಸಿಬ್ಬಂದಿ ನೆರವಿನಿಂದ ಸಿಗ್ನಲ್ ಜಂಪಿಂಗ್, ಮೂರು ಜನ ಸ್ಕೂಟರ್‍ನಲ್ಲಿ ಸವಾರಿ, ಹೆಲ್ಮೆಟ್ ಧರಿಸದಿರುವ ಕುರಿತು ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿದರು.

ಎಲ್ ಅಂಡ್ ಟಿ ಸಂಸ್ಥೆಯ ಈ ಕಾರ್ಯವನ್ನು ಶ್ಲಾಘಿಸಿದ ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಇಂತಹ ಕಾರ್ಯಕ್ರಮ ಪೊಲೀಸರ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಅಭಿಪ್ರಾಯ ಪಟ್ಟರು. ಅಲ್ಲದೆ ಈ ಸಿಬ್ಬಂದಿಯಿಂದ ಸ್ಪೂರ್ತಿ ಪಡೆದ ವಾಹನ ಚಾಲಕರು ಸಂಚಾರಿ ನಿಯಮ ಪಾಲಿಸಲು ಮುಂದಾದರು. ಇಂತಹ ಕಾರ್ಯಕ್ರಮಗಳಿಂದ ನಮ್ಮಲ್ಲಿ ಆತ್ಮಸ್ಥೈರ್ಯ ಹೆಚ್ಚಿದೆ ಎಂದು ಸಿಬ್ಬಂದಿ ತಮ್ಮ ಅನುಭವ ಹಂಚಿಕೊಂಡರು. ವಿವಿ ಮೊಹಲ್ಲಾ ಟ್ರಾಫಿಕ್ ಇನ್ಸ್‍ಪೆಕ್ಟರ್ ರವಿ, ಡಿಸಿಪಿ ಡಾ.ವಿಕ್ರಂ ಆಮ್ಟೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಎಲ್ ಅಂಡ್ ಟಿ ಸಂಸ್ಥೆಯ ಸಿಬ್ಬಂದಿಯನ್ನು ಅಭಿನಂದಿಸಿದರು.

Translate »