ಲಾರಿ ಮಾಲೀಕರು, ಗುಡಿಸಲು ನಿವಾಸಿಗಳು, ದಸಂಸದಿಂದ ಪ್ರತ್ಯೇಕ ಪ್ರತಿಭಟನೆ
ಮೈಸೂರು

ಲಾರಿ ಮಾಲೀಕರು, ಗುಡಿಸಲು ನಿವಾಸಿಗಳು, ದಸಂಸದಿಂದ ಪ್ರತ್ಯೇಕ ಪ್ರತಿಭಟನೆ

July 24, 2018

ಮೈಸೂರು:  ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲಾರಿ ಮಾಲೀಕರು ಜಿಲ್ಲಾದಿಕಾರಿ ಕಚೇರಿ ಎದುರು ಧರಣಿ. ಫಲಾನುಭವಿಗಳಿಗೆ ಮನೆ ನೀಡುವಂತೆ ಒತ್ತಾಯಿಸಿ ಗುಡಿಸಲು ನಿವಾಸಿಗಳ ಸಂಘದಿಂದ ಸ್ಮಂ ಬೋಡ್ ಕಚೇರಿ ಎದುರು ಪ್ರತಿಭಟನೆ. ಸ್ವಾಮಿ ಅಗ್ನಿವೇಶ್ ಮೇಲಿನ ಹಲ್ಲೆ ಖಂಡಿಸಿ ದಲಿತ ಸಂಘರ್ಷ ಸಮಿತಿಯಿಂದ ಡಿಸಿ ಕಚೇರಿ ಮುಂದೆ ಪ್ರತಿಭಟನೆ.
ಮೈಸೂರಲ್ಲಿ ಸೋಮವಾರ ಈ ಮೂರು ಪ್ರತ್ಯೇಕ ಪ್ರತಿಭಟನೆಗಳು ನಡೆದು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ಲಾರಿ ಮಾಲೀಕರ ಧರಣಿ: ಡೀಸೆಲ್ ದರ ಇಳಿಸಿ, ಟೋಲ್ ರದ್ದುಮಾಡಿ ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಾಲ್ಕು ದಿನದಿಂದ ಮುಷ್ಕರದಲ್ಲಿ ಪಾಲ್ಗೊಂಡಿರುವ ಲಾರಿ ಮಾಲೀಕರು ಮೈಸೂರು ಜಿಲ್ಲಾ ಲಾರಿ ಮಾಲೀಕರ ಒಕ್ಕೂಟದ ಆಶ್ರಯದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಲಾರಿ ಮಾಲೀಕರ ಒಕ್ಕೂಟದ ಅಧ್ಯಕ್ಷ ಬಿ.ಕೋದಂಡರಾಮು ಅವರು, ದೇಶದಲ್ಲಿ ಪೆಟ್ರೋಲ್, ಡೀಸೆಲ್ ವಿಮೆ ಮತ್ತು ಟೋಲ್ ಪ್ಲಾಜಾಗಳ ತಪ್ಪು ನೀತಿಯಿಂದಾಗಿ ಸಾರಿಗೆ ಉದ್ಯಮ ಸಂಪೂರ್ಣವಾಗಿ ನಾಶವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಉದ್ಯಮವನ್ನೇ ನಂಬಿ ಬದುಕುತ್ತಿರುವ ಲಕ್ಷಾಂತರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಹಲವು ಬಾರಿ ಆಲ್ ಇಂಡಿಯಾ ಮೋಟಾರ್ ಕಾಂಗ್ರೆಸ್ ವತಿಯಿಂದ ಸಂಬಂಧಪಟ್ಟ ಸಚಿವಾಲಯಗಳಿಗೆ ಮನವಿ ಪತ್ರ ನೀಡಿದ್ದರೂ ಕೇಂದ್ರ ಸರ್ಕಾರ ನಮ್ಮ ಮನವಿಯ ಬಗ್ಗೆ ನಿರ್ಲಕ್ಷ ವಹಿಸಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಎಂ.ಪದ್ಮಪ್ರಸಾದ್, ಅಬ್ದುಲ್ ಖಾದರ್ ಶಾಹಿದ್, ಬಾಲಸುಬ್ರಹ್ಮಣ್ಯ, ಆರ್.ಸತೀಶ್, ಎಂ.ಶಶಿಕುಮಾರ್, ಎಲ್.ಶಂಕರ್, ಖದೀರ್ ಅಹ್ಮದ್, ಬಾಬು, ಪ್ರಕಾಶ್ ಇನ್ನಿತರರು ಭಾಗವಹಿಸಿದ್ದರು.

ಫಲಾನುಭವಿಗಳಿಗೆ ಮನೆ ನೀಡಿ: ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕೇಂದ್ರ ಕಚೇರಿಯಲ್ಲಿ ಮಾ.7ರಂದು ನಡೆದ ಸಭೆಯಲ್ಲಿ ಅನುಮೋದನೆಯಾಗಿರುವ 98 ಫಲಾನುಭವಿಗಳಿಗೆ ಮನೆ ನೀಡಬೇಕು ಎಂದು ಆಗ್ರಹಿಸಿ ವಂದೇ ಮಾತರಂ ಸ್ಲಂ ಬಿ ಬ್ಲಾಕ್ ಗುಡಿಸಲು ನಿವಾಸಿಗಳ ಸಂಘ ಬನ್ನಿಮಂಟಪದ ಬಳಿಯಿರುವ ಕೊಳಗೇರಿ ಅಭಿವೃದ್ಧಿ ಮಂಡಳಿ ಎದುರು ಪ್ರತಿಭಟನೆ ನಡೆಸಿ, ಸ್ಲಂಬೋರ್ಡ್ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ಬನ್ನಿಮಂಟಪದ ವಂದೇ ಮಾತರಂ ಸ್ಲಂ ಬಿ ಬ್ಲಾಕ್‍ನಲ್ಲಿನ ಗುಡಿಸಲುಗಳ ಮೇಲೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ 220/66 ಕೆ.ವಿ ಜೋಡಿ ವಿದ್ಯುತ್ ಪ್ರಸರಣ ಮಾರ್ಗ ಹಾದು ಹೋಗಿದ್ದು, ವಾಸ ಮಾಡುತ್ತಿರುವ ಸ್ಥಳ ತುಂಬಾ ಅಪಾಯಕಾರಿಯಾಗಿದೆ. ವಿದ್ಯುತ್ ವೈರ್ ತುಂಡಾಗಿ ಗುಡಿಸಲುಗಳ ಮೇಲೆ ಬಿದ್ದರೆ ನಮ್ಮ ಜೀವಗಳು ಸರ್ವನಾಶವಾಗುತ್ತವೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ನೋಟೀಸ್ ನೀಡಿ ಗುಡಿಸಲುಗಳನ್ನು ತೆರವುಗೊಳಿಸಬೇಕೆಂದು ಪದೇ ಪದೇ ಒತ್ತಾಯಿಸುತ್ತಿದ್ದಾರೆ. ನಮ್ಮ ಕುಟುಂಬಗಳು ಪ್ರಾಣವನ್ನು ಕೈಯ್ಯಲ್ಲಿ ಹಿಡಿದುಕೊಂಡು ಜೀವನ ನಡೆಸುವ ದುಸ್ಥಿತಿ ಎದುರಾಗಿದೆ ಎಂದು ಪ್ರತಿಭಟನಾಕರರು ಕಿಡಿ ಕಾರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಬಿ.ರಾಜು, ಏಕಲವ್ಯ ಬಡಾವಣೆಯಲ್ಲಿರುವ ಮನೆಗಳನ್ನು ವಂದೇ ಮಾತರಂ ಸ್ಲಂ, ಬಿ.ಬ್ಲಾಕ್ ಬನ್ನಿಮಂಟಪ ಗುಡಿಸಲು ನಿವಾಸಿಗಳ 98 ಫಲಾನುಭವಿಗಳಿಗೆ ನೀಡಲು ಸಭೆಯಲ್ಲಿ ಅನುಮೋದನೆಯಾಗಿತ್ತು. ಆದರಂತೆ ನಮ್ಮ ಕುಟುಂಬಗಳಿಗೆ ಮನೆ ನೀಡದಿದ್ದರೆ ಹೋರಾಟ ಉಗ್ರ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಂಘದ ಪಪಾಧಿಕಾರಿಗಲಾದ ಆಯೂಬ್ ಖಾನ್, ಶಬಾನಾ, ಜೀನತ್ ಬಾನು, ಸೈಯದ್ ರಫೀಕ್, ಅಜಮಲ್ ಪಾಷ, ಯಾಜ್ ಮತ್ತಿತರರು ಭಾಗವಹಿಸಿದ್ದರು.

ಸ್ವಾಮಿ ಅಗ್ನಿವೇಶ ಮೇಲಿನ ಹಲ್ಲೆಗೆ ಖಂಡನೆ: ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಮೇಲೆ ನಡೆದ ಹಲ್ಲೆ ಖಂಡಿಸಿ ದಲಿತ ಸಂಘರ್ಷ ಸಮಿತಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿತು. ಈ ಸಂದರ್ಭದಲ್ಲಿ ಜಿಲ್ಲಾ ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಮಾತನಾಡಿ, ಜಾರ್ಖಂಡ್‍ನ ಪಕುರ್‍ಲ್ಲಿರುವ ಹೋಟೆಲೊಂದರ ಮುಂದೆ ಸಾಮಾಜಿಕ ಕಾರ್ಯಕರ್ತ 80 ವರ್ಷದ ಸ್ವಾಮಿ ಅಗ್ನಿವೇಶ್ ಮೇಲೆ ಬಿಜೆಪಿ ಯುವ ಸಂಘಟನೆ ಮತ್ತು ಎಬಿವಿಪಿಗೆ ಸೇರಿದವರು ಹಲ್ಲೆ ನಡೆಸಿದ್ದಾರೆ ಎಂದು ಖಂಡಿಸಿದರು.

ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಈ ರೀತಿಯ ಘಟನೆಗಳು ಅವ್ಯಾಹತವಾಗಿ ನಡೆಯುತ್ತಿವೆ. ದಾಳಿಗಳು ಮುಸ್ಲಿಮರು, ದಲಿತರು ಮತ್ತು ದಮನಿತರ ಮೇಲೆ ಕೇಂದ್ರೀಕೃತವಾಗಿವೆ. ಇವೆಲ್ಲವೂ ದೇಶಾದ್ಯಂತ ಹಬ್ಬುತ್ತಿರುವ ಹಿಂದುತ್ವವಾದಿ ಕೋಮುವಾದಿ ಪ್ಯಾಸಿಸಂನ ರೂಪಗಳಾಗಿವೆ ಎಂದು ಆರೋಪಿಸಿದರು. ತಕ್ಷಣ ಅಗ್ನಿವೇಶ್ ಘಟನೆಗೆ ಸಂಬಂಧಿಸಿದವರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಡಾ.ಲಕ್ಷ್ಮೀನಾರಾಯಣ, ಬಸವರಾಜು, ದ್ಯಾವಪ್ಪ ನಾಯಕ, ಸಣ್ಣಯ್ಯ, ಕೆ.ವಿ.ದೇವೇಂದ್ರ, ಕಿರಂಗೂರು ಸ್ವಾಮಿ ಮುಂಗಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »