ಮೈಸೂರಿನ 11ನೇ ವಾರ್ಡ್‍ನಲ್ಲಿ  ಶಾಸಕ ರಾಮದಾಸ್ ಪಾದಯಾತ್ರೆ
ಮೈಸೂರು

ಮೈಸೂರಿನ 11ನೇ ವಾರ್ಡ್‍ನಲ್ಲಿ  ಶಾಸಕ ರಾಮದಾಸ್ ಪಾದಯಾತ್ರೆ

July 24, 2018

ಮೈಸೂರು:  ಕೃಷ್ಣರಾಜ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವರಾದ ಎಸ್.ಎ.ರಾಮದಾಸ್ ಅವರು ಕೃಷ್ಣರಾಜ ಕ್ಷೇತ್ರದ ಹಿಂದಿನ 11ನೇ ವಾರ್ಡ್ ಇಂದು 61ನೇ ವಾರ್ಡ್ ಆಗಿ ಪರಿವರ್ತನೆ ಆಗಿರುವ ಪ್ರದೇಶಕ್ಕೆ ಪಾದಯಾತ್ರೆ ಮೂಲಕ ತೆರಳಿ ಸಾರ್ವಜನಿಕರ ಕುಂದು ಕೊರತೆ ಆಲಿಸಿದರು.

ಧರಂಸಿಂಗ್ ಕಾಲೋನಿಯಲ್ಲಿ ಇರುವಂತಹ ಪೌರಕಾರ್ಮಿಕರ ಬಡಾವಣೆಯಲ್ಲಿ ಸಾರ್ವಜನಿಕರೊಂದಿಗೆ ಸಂವಾದ ಮಾಡುವ ಮೂಲಕ ಪಾದಯಾತ್ರೆ ಪ್ರಾರಂಭಿಸಿದರು. ಕಳೆದ 5 ವರ್ಷಗಳಿಂದ ಯಾವುದೇ ಕಾಮಗಾರಿಗಳು ಆಗಿಲ್ಲವೆಂದು ಜನರು ದೂರಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕರು ಸ್ಲಂ ಬೋರ್ಡ್ ಅಡಿಯಲ್ಲಿ ರಸ್ತೆ ಕಾಮಗಾರಿ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚಿಸಿದರು.

ನರ್ಮ್ ಯೋಜನೆಯಡಿ ಕಟ್ಟಿರುವಂತಹ ಮನೆಗಳಲ್ಲಿ ಈಗಲೇ ಛಾವಣಿಯಿಂದ ನೀರು ಸೋರುತ್ತಿರುವ ದೂರು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಮನೆಗಳಿಗೆ ಭೇಟಿ ಮಾಡಿದ ಶಾಸಕರು, ಕಳಪೆ ಕಾಮಗಾರಿ ಮಾಡಿರುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು ಮತ್ತು ನೀರು ಸೋರದಂತೆ ರಿಪೇರಿ ಕೆಲಸ ಪ್ರಾರಂಭಿಸಲು ಆದೇಶಿಸಿದರು.

ವಿದ್ಯಾರಣ್ಯಪುರಂ 30ನೇ ಕ್ರಾಸ್‍ನಲ್ಲಿರುವ ಗುಡಿಸಲುಗಳನ್ನು ತೆರವುಗೊಳಿಸಿ ಮನೆಗಳನ್ನು ಕಟ್ಟುವ ದೃಷ್ಟಿಯಿಂದ ಹಿಂದೆ ಸ್ಲಂ ಬೋರ್ಡ್‍ನಲ್ಲಿ ಆಗಿದ್ದಂತಹ ತಕರಾರಿನ ಬಗ್ಗೆ ಸಾರ್ವಜನಿಕರು ಅಹವಾಲು ನೀಡಿದರು. ಇಲ್ಲಿರುವ ತೊಂದರೆಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಒಳ ಚರಂಡಿಗೆ ಮತ್ತು ರಸ್ತೆಗೆ ಒಂದು ನಕ್ಷೆಯನ್ನು ತಯಾರಿಸಲು ತಿಳಿಸಿದರಲ್ಲದೆ, ಕೇಂದ್ರ ಸರ್ಕಾರದ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ ಫಲಾನುಭವಿಗಳೇ ಇಚ್ಛೆ ಪಟ್ಟಲ್ಲಿ ಅವರೇ ಮನೆಗಳನ್ನು ನಿರ್ಮಿಸಲು ಅವಕಾಶ ಮಾಡಲು ಅಥವಾ ಸರ್ಕಾರವೇ ನಿರ್ಮಿಸುವ ಅವಕಾಶ ದೊರಕಿಸಿಕೊಡುವ ನಿರ್ಣಯವನ್ನು ಪಡೆದರು ಹಾಗೂ ಇನ್ನು 15 ದಿನಗಳಲ್ಲಿ ಮನೆ ಕಟ್ಟುವ ಕೆಲಸ ಪ್ರಾರಂಭಿಸಲು ಸೂಚನೆ ನೀಡಿದರು.

ಪ್ರಧಾನಮಂತ್ರಿ ಯೋಜನೆಗಳಲ್ಲಿ ನಿರ್ಮಾಣವಾಗಿರುವ ಮನೆಗಳಲ್ಲಿ ಹಣ ಪಡೆದು ಅಕ್ರಮವಾಗಿ ಬೇರೆಯವರನ್ನು ಸೇರಿಸಿದ್ದಾರೆಂಬ ದೂರುಗಳು ಕೇಳಿಬಂದ ಕಾರಣ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು, ಪಡಿತರ ಚೀಟಿ, ಆಧಾರ್ ಕಾರ್ಡ್, ಮತದಾರರ ಚೀಟಿ ಒಂದೇ ವಿಳಾಸ ಇದ್ದಲ್ಲಿ ಬೇರೆ ಯಾವುದೇ ಕಡೆ ಮನೆಗಳು ಇರುವುದಿಲ್ಲ ಎಂಬ ಮಾಹಿತಿಯನ್ನು ಖಚಿತ ಪಡಿಸಿಕೊಂಡು ಅಲಾಟ್ಮೆಂಟ್ ಕೊಟ್ಟು ಆಮೇಲೆ ಮನೆಗಳನ್ನು ನಿರ್ಮಿಸಿಕೊಡಬೇಕೆಂದು ಆದೇಶಿಸಿದರು.

ಜೆಪಿ ನಗರದ ಪಾರ್ಕಿನಲ್ಲಿ ಮಳೆ ಬಂದಂತಹ ಸಮಯದಲ್ಲಿ ಪೂರ್ಣವಾಗಿ ಮುಚ್ಚಿ ಹೋದಂತಹ ಉದಾಹರಣೆಗಳು ಸಾಕಷ್ಟಿದ್ದು ಅರ್ಧಭಾಗವನ್ನು ಆಟದ ಮೈದಾನ ಮಾಡಲು ಮೈಸೂರಿನಲ್ಲಿ ಬೇರೆ ಬೇರೆ ಕಡೆಯಿಂದ ಬರುವ ಡೆಬ್ರಿಸ್ ಮಣ್ಣನ್ನು ಸುರಿದು ಎತ್ತರ ಮಾಡಲು ಹಾಗೂ ಆಟದ ಮೈದಾನ ನಿರ್ಮಿಸಿ ಯೋಗಾಭ್ಯಾಸ ನಡೆಸಲು ಬೇಕಿರುವಂತಹ ಒಂದು ವೇದಿಕೆಯನ್ನು ನಿರ್ಮಿಸಲು ಶಾಸಕರು ಆದೇಶಿಸಿದರು.

ಅಕ್ರಮವಾಗಿ ಸರ್ಕಾರಿ ಜಾಗದಲ್ಲಿ ಕಟ್ಟಡ ಕಾಮಗಾರಿ ಪ್ರಾರಂಭವಾಗಿದ್ದು, ಈ ಜಾಗಗಳು ನಗರ ಪಾಲಿಕೆಗೆ ಸೇರಿದ್ದೆ ? ಮುಡಾಗೆ ಸೇರಿದ್ದೇ ಅನ್ನುವ ಮಾಹಿತಿ ಇಲ್ಲದೆ ಅಕ್ರಮವಾಗಿ ಖಾತೆ ಮಾಡಿಸಿಕೊಂಡಿರುವ ವಿಷಯ ಬೆಳಕಿಗೆ ಬಂದಿದ್ದು, ಈ ವಿಷಯವಾಗಿ ಶಾಸಕರು ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿ, ಮುಡಾ, ರೆವಿನ್ಯೂ ಇಲಾಖೆ ಒಳಗೊಂಡಂತೆ ಎಲ್ಲೆಲ್ಲಿ ಅಕ್ರಮ ಕಟ್ಟಡಗಳು ತಲೆ ಎತ್ತಿದೆಯೋ ಅದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ಇದಕ್ಕೆ ಜಿಲ್ಲಾಧಿಕಾರಿಗಳು ಇವತ್ತು ಸಂಜೆಯೇ ಒಂದು ಸಭೆಯನ್ನು ಕರೆದು ನಿರ್ಣಯ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಅತಿ ಹೆಚ್ಚು ಸ್ಲಂ ಪ್ರದೇಶವಾಗಿರುವ ನಾಚನಹಳ್ಳಿ ಪಾಳ್ಯ, ಮುಸ್ಲಿಂ ಬಡಾವಣೆಗಳಲ್ಲಿ ಬಹಳ ವರ್ಷಗಳಿಂದ ಕಾಮಗಾರಿಗಳು ಯಾವುದು ಆಗದೆ ಇರುವುದು ಸ್ಥಳೀಯ ನಿವಾಸಿಗಳಿಂದ ತಿಳಿದು ಬಂತು. ಈ ದೂರಿನ ಅನ್ವಯ ಸ್ಲಂ ಬೋರ್ಡಿನ ಅಧಿಕಾರಿಗಳಿಗೆ ಈ ಪ್ರದೇಶದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಒಂದು ನಕ್ಷೆಯನ್ನು ಸಿದ್ಧಪಡಿಸಲು ಆದೇಶಿಸಿದರು. ವಿಶೇಷವಾಗಿ ಮಾನಂದವಾಡಿ ರಸ್ತೆ ಮತ್ತು ಪಕ್ಕದಲ್ಲಿ ಗೊರೂರಿಗೆ ಸಂಪರ್ಕ ನೀಡುವ ರಸ್ತೆಯ ಅಭಿವೃದ್ಧಿಗೆ ಕಳೆದ 5 ವರ್ಷದ ಹಿಂದೆ ಹಣ ಕೊಡಲಾಗಿದ್ದು ಇನ್ನೂ ಕಾಮಗಾರಿಯನ್ನು ಪ್ರಾರಂಭಿಸಿಲ್ಲ ಎಂದು ದೂರು ಬಂದ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ತಕ್ಷಣದಲ್ಲಿಯೇ ಟೆಂಡರ್ ಕರೆಯುವ ಮೂಲಕ ಕಾಮಗಾರಿ ಪ್ರಾರಂಭಿಸಬೇಕೆಂದು ಅಧಿಕಾರಿಗಳಿಗೆ ಆದೇಶಿಸಿದರು.

ನಾಚನಹಳ್ಳಿಪಾಳ್ಯದ ಮುಖ್ಯರಸ್ತೆಯಲ್ಲಿ ಹೆಚ್ಚು ಟ್ರಾಫಿಕ್ ಸಮಸ್ಯೆ ಎದುರಿಸುತ್ತಿದ್ದು ಆ ಸ್ಥಳಕ್ಕೆ ಪೊಲೀಸರನ್ನು ನಿಯೋಜಿಸಲು ತಿಳಿಸಿದ್ದಲ್ಲದೆ, ಒಂದು ಹೈ ಮಾಸ್ಟ್ ದೀಪವನ್ನು ಅಳವಡಿಸಲು ಶಾಸಕರು ಆದೇಶಿಸಿದರು.

ಉಳಿದ ಭಾಗಗಳಲ್ಲಿ ಒಳ ಚರಂಡಿ ರಸ್ತೆ ಕಾಮಗಾರಿ ಎಲ್ಲೆಲ್ಲಿ ಆಗಬೇಕೋ ಆ ಪ್ರದೇಶದಲ್ಲಿ ಒಂದು ತಿಂಗಳ ಒಳಗಾಗಿ ಕಾಮಗಾರಿ ಪ್ರಾರಂಭಿಸಲು ಅಧಿಕಾರಿಗಳಿಗೆ ಎಸ್.ಎ.ರಾಮದಾಸ್‍ರವರು ಸೂಚಿಸಿದರು.

Translate »