ಮೈಸೂರು: ಅನಾಮಿಕನೋರ್ವ ಆತಂಕ ಹುಟ್ಟಿಸಿದ್ದಾನೆಂದು ಹೇಳಲಾಗಿರುವ ಮೈಸೂರಿನ ಕೆ.ಆರ್.ಆಸ್ಪತ್ರೆ ಆವರಣದ ನರ್ಸಿಂಗ್ ಕಾಲೇಜು ಹಾಸ್ಟೆಲ್ ವಿದ್ಯಾರ್ಥಿಗಳನ್ನು ರಜೆ ಮೇಲೆ, ಮನೆಗೆ ಕಳುಹಿಸಲಾಗಿದೆ.
ಘಟನೆಯಿಂದ ಆತಂಕಗೊಂಡು, ಮಾನಸಿಕವಾಗಿ ವಿಚಲಿತರಾಗಿದ್ದ 112 ನರ್ಸಿಂಗ್ ಶಾಲೆ ವಿದ್ಯಾರ್ಥಿಗಳು ಹಾಗೂ 165 ಮಂದಿ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳನ್ನು ಜು 31ರವರೆಗೆ ರಜೆ ಮೇಲೆ ಅವರ ಪೋಷಕರನ್ನು ಕರೆಸಿ ಕಳುಹಿಸಿಕೊಡಲಾಗಿದೆ ಎಂದು ಕೆ.ಆರ್.ಆಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಡಾ|| ಎಂ.ಎಸ್.ರಾಜೇಶ್‍ಕುಮಾರ್ ತಿಳಿಸಿದ್ದಾರೆ.
ಮಂಗಳವಾರ ಸಂಜೆಯೇ ಬಹುತೇಕ ವಿದ್ಯಾರ್ಥಿಗಳು ತಮ್ಮ ಹಾಸ್ಟೆಲ್ ಕೊಠಡಿಗಳನ್ನು ತೆರವುಗೊಳಿಸಿ ಲಗೇಜ್‍ನೊಂದಿಗೆ ತೆರಳಿದರೆ, ಉಳಿದವರು ಇಂದು ಬೆಳಿಗ್ಗೆ ಹೊರಟರು ಎಂದು ತಿಳಿಸಿದರು. ಎಲ್ಲರೂ ತಂತಮ್ಮ ಕೊಠಡಿಗಳಿಗೆ ಬೀಗ ಹಾಕಿಕೊಂಡು ಹೋಗಿರುವುದರಿಂದ ಸದ್ಯ ಯಾರೂ ಹಾಸ್ಟೆಲ್ ಕಟ್ಟಡದಲ್ಲಿ ವಾಸ ಮಾಡುತ್ತಿಲ್ಲ. ಆದರೂ, ಮುಂಜಾಗ್ರತಾ ಕ್ರಮವಾಗಿ ಹಾಸ್ಟೆಲ್ ಕಟ್ಟಡಗಳ ಬಳಿ ಸೆಕ್ಯೂರಿಟಿ ಗಾರ್ಡ್‍ಗಳನ್ನು ನಿಯೋಜಿಸಿ ಕಟ್ಟೆಚ್ಚರ ವಹಿಸಲಾಗಿದೆ. ಪೋಷಕರಿಂದ ಮುಚ್ಚಳಿಕೆ ಬರೆಸಿಕೊಂಡು ನರ್ಸಿಂಗ್ ಶಾಲೆ ಪ್ರಾಂಶುಪಾಲೆ ಹೆಲೆನ್ ಡಿ.ಶಿಲ್ಪಾ ಅವರು ವಿದ್ಯಾರ್ಥಿನಿಯರನ್ನು ಕಳುಹಿಸಿಕೊಟ್ಟು, ಆಗಸ್ಟ್ 1ರಂದು ಮತ್ತೆ ಕರೆತರುವಂತೆ ಹೇಳಿದ್ದಾರೆ.
ಇಂದು ಬೆಳಿಗ್ಗೆಯೂ ಕೆ.ಆರ್.ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ|| ಶ್ರೀನಿವಾಸ್, ಆರ್‍ಎಂಜೆ ಡಾ|| ಎಂ.ಎಸ್. ರಾಜೇಶ್‍ಕುಮಾರ್, ಪ್ರಾಂಶುಪಾಲೆ ಹೆಲೆನ್ ಡಿ.ಶಿಲ್ಪಾ ಹಾಗೂ ಹಾಸ್ಟೆಲ್ ವಾರ್ಡನ್‍ಗಳು ಹಾಸ್ಟೆಲ್ ಕಟ್ಟಡಕ್ಕೆ ಅನುಚಿತ ವರ್ತನೆ ತೋರಿದ ಅನಾಮಿಕನ ಬಗ್ಗೆ ಘಟನೆಯ ಸಾಧ್ಯಾ ಸಾಧ್ಯತೆಗಳ ಬಗ್ಗೆ ಸ್ಥಳದಲ್ಲಿ ಪರಿಶೀಲನೆ ನಡೆಸಿದರು.
ಮುಂಜಾಗ್ರತಾ ಕ್ರಮವಾಗಿ ಹಾಸ್ಟೆಲ್ ಬಳಿ ಹೆಚ್ಚುವರಿ ಸೆಕ್ಯೂರಿಟಿ ಸಿಬ್ಬಂದಿಗಳನ್ನು ನಿಯೋಜಿಸಿ ದಿನದ 24 ಗಂಟೆಯೂ ಕಟ್ಟೆಚ್ಚರ ವಹಿಸಿರುವ ಆಸ್ಪತ್ರೆ ಅಧಿಕಾರಿಗಳು, ತೀವ್ರ ನಿಗಾ ವಹಿಸಿದ್ದಾರೆ.