ರಾತ್ರಿ 12 ಗಂಟೆ ನಂತರ ಓಡಾಡುವವರ ಫೋಟೋ ತೆಗೆದು ವಿಚಾರಣೆ
ಮೈಸೂರು

ರಾತ್ರಿ 12 ಗಂಟೆ ನಂತರ ಓಡಾಡುವವರ ಫೋಟೋ ತೆಗೆದು ವಿಚಾರಣೆ

July 26, 2018

ಮೈಸೂರು: ಮಧ್ಯರಾತ್ರಿ 12 ಗಂಟೆ ನಂತರ ಓಡಾಡುವವರು ಎಚ್ಚರದಿಂದಿರಬೇಕು. ಏಕೆಂದರೆ ಮೈಸೂರು ಪೊಲೀಸರು ತಡೆದು ನಿಲ್ಲಿಸಿ ಫೋಟೋ ತೆಗೆದು, ವಿಚಾರಣೆ ಮಾಡುತ್ತಿದ್ದಾರೆ.

ಅಪರಾಧಗಳನ್ನು ತಡೆಗಟ್ಟಲು ಮೈಸೂರು ನಗರದಾದ್ಯಂತ ಕಾನೂನು ಸುವ್ಯವಸ್ಥೆ(ಐ&ಔ) ಪೊಲೀಸರು ರಾತ್ರಿ ಗಸ್ತನ್ನು ಚುರುಕುಗೊಳಿಸಿದ್ದು, ಮಧ್ಯರಾತ್ರಿ 12 ಗಂಟೆ ನಂತರ ಓಡಾಡುವವರ ನಿಲ್ಲಿಸಿ, ಅವರ ಫೋಟೋ ತೆಗೆದು ವಿಚಾರಣೆ ಮಾಡಲಿದ್ದಾರೆ ಎಂದು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಡಾ|| ವಿಕ್ರಂ ವಿ.ಅಮಟೆ ಅವರು ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಹೆಸರು, ವಿಳಾಸ, ವೃತ್ತಿ, ಎಲ್ಲಿಂದ ಎಲ್ಲಿಗೆ ಹೋಗುತ್ತಿರುವುದು, ರಾತ್ರಿ ಓಡಾಡಲು ಕಾರಣ ಇತ್ಯಾದಿ ಮಾಹಿತಿಗಳನ್ನು ನೀಡಬೇಕಾಗುತ್ತದೆ. ಒಂದು ವೇಳೆ ಸಂಶಯ ಬಂದಲ್ಲಿ ಅಥವಾ ಮಾಹಿತಿ ಸಮಂಜಸವಲ್ಲ ಎಂದು ಕಂಡು ಬಂದಲ್ಲಿ ಪೊಲೀಸರು ಅವರನ್ನು ಠಾಣೆಗೆ ಕರೆದೊಯ್ದು ತೀವ್ರ ವಿಚಾರಣೆಗೊಳಪಡಿಸಲಾಗುವುದು.

ನಗರದಲ್ಲಿ ಮೊಹಲ್ಲವಾರು ಹಾಗೂ ಠಾಣೆಗಳಲ್ಲಿ ಜನಸಂಪರ್ಕ ಸಭೆಗಳನ್ನು ನಡೆಸಿ ಎಚ್ಚರದಿಂದಿರಬೇಕು, ಮನೆಗೆ ಬೀಗ ಹಾಕಿ ಹೊರಗೆ ಹೋಗುವಾಗ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು, ಅಪರಿಚಿತರು ಅನುಮಾನಾಸ್ಪದವಾಗಿ ಓಡಾಡುವುದು ಕಂಡಲ್ಲಿ ಅವರ ಫೋಟೋ ತೆಗೆದು ವಿಚಾರಿಸಬೇಕು ಎಂದು ಸಾರ್ವಜನಿಕರಿಗೆ ಜಗೃತಿ ಮೂಡಿಸಲಾಗುತ್ತಿದೆ ಎಂದು ಡಾ|| ಅಮಟೆ ತಿಳಿಸಿದರು.

Translate »