ಕೆ.ಆರ್.ಆಸ್ಪತ್ರೆ ನರ್ಸಿಂಗ್ ಹಾಸ್ಟೆಲ್‍ಗೆ 2 ದಿನದಲ್ಲಿ ಸೂಕ್ತ ಭದ್ರತೆ
ಮೈಸೂರು

ಕೆ.ಆರ್.ಆಸ್ಪತ್ರೆ ನರ್ಸಿಂಗ್ ಹಾಸ್ಟೆಲ್‍ಗೆ 2 ದಿನದಲ್ಲಿ ಸೂಕ್ತ ಭದ್ರತೆ

July 25, 2018

ಮೈಸೂರು:  ಕೆ.ಆರ್.ಆಸ್ಪತ್ರೆ ಆವರಣದಲ್ಲಿರುವ ನರ್ಸಿಂಗ್ ಹಾಸ್ಟೆಲ್‍ಗೆ ಇನ್ನೂ 2 ದಿನಗಳಲ್ಲಿ ಸೂಕ್ತ ಭದ್ರತೆ ಒದಗಿಸುವುದಾಗಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ವಿದ್ಯಾರ್ಥಿನಿಯ ರಿಗೆ ಭರವಸೆ ನೀಡಿದರು.

ಕಳೆದ ಮೂರ್ನಾಲ್ಕು ದಿನಗಳಿಂದ ಕೆ.ಆರ್.ಆಸ್ಪತ್ರೆಯ ಆವರಣದಲ್ಲಿರುವ ನರ್ಸಿಂಗ್ ಹಾಸ್ಟೆಲ್‍ಗೆ ವಿಕೃತ ಕಾಮಿಯೊಬ್ಬ ನುಗ್ಗಿ ದಾಂಧಲೆ ನಡೆಸಿದ್ದು, ನಿನ್ನೆ ರಾತ್ರಿಯೂ ಹಾಸ್ಟೆಲ್ ಕಟ್ಟಡದ ಮೇಲೆ ಆಗಂತುಕನೊಬ್ಬ ಕಲ್ಲು ತೂರಾಟ ನಡೆಸಿ ಕಿಟಕಿ ಗಾಜು ಒಡೆದು ಹಾಕಿದ್ದು, ವಿದ್ಯಾರ್ಥಿನಿಯರು ಹಾಸ್ಟೆಲ್ ನಲ್ಲಿರಲು ಭಯಪಡುತ್ತಿದ್ದಾರೆ. ಅಲ್ಲದೆ ಪ್ರತಿಭಟನೆ ನಡೆಸಿ, ಆಕ್ರೋಶವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಂಗಳವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವಿದ್ಯಾರ್ಥಿಗಳಿಂದ ಸಮಸ್ಯೆಯನ್ನು ಆಲಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತ ನಾಡಿ, ಸಿವಿಲ್ ಕಾಮಗಾರಿಗೆ ಹೆಚ್ಚು ಹಣ ಬೇಕಿದ್ದು, ಟೆಂಡರ್ ಕರೆಯಬೇಕಾಗುತ್ತದೆ. ಹಾಗಾಗಿ ಸದ್ಯ ತುರ್ತು ಅಗತ್ಯವಿರುವ ಅಂದರೆ, ಹಾಸ್ಟೆಲ್ ಹಿಂಭಾಗ ತಂತಿಬೇಲಿ ಅಳವಡಿಕೆ, ಆವರಣದ ನಾಲ್ಕೂ ಕಡೆಗಳಲ್ಲಿ ಸಿಸಿಟಿವಿ, ಎಲ್‍ಇಡಿ ಲೈಟ್ ಅಳವಡಿಕೆ, ಗಾಜಿನ ಕಿಟಕಿಗಳಿರುವುದನ್ನು ಕಬ್ಬಿಣದ ರಾಡು ಗಳಿಂದ ಮುಚ್ಚಲಾಗುವುದು ಹಾಗೂ ಹಾಸ್ಟೆಲ್ ಕಟ್ಟಡಕ್ಕೆ ಹೊಂದಿಕೊಂಡಂತಿರುವ ಮರದ ಕೊಂಬೆಗಳನ್ನು ತೆರವುಗೊಳಿಸುವುದು. ಇವೆಲ್ಲವುಗಳನ್ನು ಇನ್ನೂ 2 ದಿನಗಳಲ್ಲಿ ಹೆಚ್ಚಿನ ಕೆಲಸಗಾರರನ್ನು ತೆಗೆದುಕೊಂಡು ಕೂಡಲೇ ಬಗೆಹರಿಸುವಂತೆ ಡೀನ್ ಅವರಿಗೆ ಸೂಚಿಸಿದ್ದೇನೆ ಎಂದರು.
ಅಲ್ಲದೆ, ನಗರ ಪೊಲೀಸ್ ಆಯುಕ್ತರು ಮತ್ತು ಡಿಸಿಪಿ ಅವರೊಂದಿಗೆ ಮಾತನಾ ಡಿದ್ದು, ತಾತ್ಕಾಲಿಕವಾಗಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನೇಮಿಸು ವಂತೆ ಹೇಳಿದ್ದೇನೆ. ಅವರೂ ಕೂಡ ಒಪ್ಪಿದ್ದಾರೆ. ಜತೆಗೆ ಪೊಲೀಸರೂ ಗಸ್ತು ತಿರುಗಲಿದ್ದಾರೆ. ಅಷ್ಟೇ ಅಲ್ಲದೆ, ಗೃಹರಕ್ಷಕ ದಳ ಸಿಬ್ಬಂದಿಯನ್ನು ನೇಮಿಸುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

ಪರೀಕ್ಷೆ ಸಮೀಪಿಸುತ್ತಿದ್ದು, ಯಾರೂ ಹಾಸ್ಟೆಲ್ ಬಿಟ್ಟು ಹೋಗಬೇಡಿ. ಸೂಕ್ತ ಭದ್ರತೆ ಒದಗಿಸುತ್ತೇವೆಂದು ಹೇಳಿದರೂ ಹೋಗುತ್ತಿದ್ದೀರಿ. 2 ದಿನ ಸ್ವಗ್ರಾಮಕ್ಕೆ ಹೋಗಿ ಬನ್ನಿ. ಆದರೆ, ಇಲ್ಲಿ ಸೂಕ್ತ ಬಂದೋ ಬಸ್ತ್ ಮಾಡುತ್ತೇವೆ ಎಂದು ಹೇಳಿದರು. ಈ ವೇಳೆ ವಿದ್ಯಾರ್ಥಿನಿಯೊಬ್ಬರು ವಿಕೃತ ಕಾಮಿಯನ್ನು ಬಂಧಿಸಿ, ಶಿಕ್ಷೆ ನೀಡಬೇಕು ಎಂದು ಮನವಿ ಮಾಡಿದರು.

ಬಹುಪಾಲು ವಿದ್ಯಾರ್ಥಿನಿಯರು ತಮ್ಮಪೋಷಕರನ್ನು ಕರೆಯಿಸಿಕೊಂಡು, ಊರಿಗೆ ತೆರಳುತ್ತಿರುವುದಾಗಿ ಮುಚ್ಚಳಿಕೆ ಪತ್ರ ಬರೆದುಕೊಟ್ಟು ತೆರಳಿದರು.

Translate »