ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಶ್ರಮಿಸಿ
ಮೈಸೂರು

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಶ್ರಮಿಸಿ

July 25, 2018
  • ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ವಿಧಾನ ಪರಿಷತ್ ಮಾಜಿ ಸಭಾಪತಿ ಸುದರ್ಶನ್ ಸಲಹೆ

ಮೈಸೂರು:  ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಉತ್ತಮ ಆಡಳಿತ ನೀಡಿದ್ದರೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಹಿನ್ನಡೆಯಾಗಿದೆ. ಈ ಹಿನ್ನೆಲೆ ಯಲ್ಲಿ ಸೋಲಿಗೆ ಆತ್ಮಾವಲೋಕನ ಮಾಡಿ ಕೊಂಡು ಮುಂಬರುವ ಲೋಕಸಭಾ ಚುನಾ ವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿ ಗಾಗಿ ಇಂದಿನಿಂದಲೇ ಪಣ ತೊಡುವಂತೆ ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಸಲಹೆ ನೀಡಿದ್ದಾರೆ.

ಮೈಸೂರಿನ ಕೇಂದ್ರ ರೈಲ್ವೆ ನಿಲ್ದಾಣದ ಬಳಿಯಿರುವ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ್‍ರಾಮ್ ಸ್ಮರಣೋತ್ಸವ ಹಾಗೂ ನೂತನ ಶಾಸಕರು ಗಳಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಸಮಸ್ಯೆ ಹಾಗೂ ಕೊರತೆ ಗಳ ನಡುವೆ ಸವಾಲುಗಳನ್ನು ಎದುರಿಸು ವುದು ಅನಿವಾರ್ಯ. ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಂಘಟಿಸಬೇಕಾದ ಜವಾಬ್ದಾರಿ ಪಕ್ಷದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರ ಮೇಲಿದೆ. ಕಾಂಗ್ರೆಸ್ ಆರಂಭದಿಂದಲೂ ಸಾಮಾಜಿಕ ನ್ಯಾಯ, ಸಮಾನತೆ, ಆರ್ಥಿಕ ಅಭಿವೃದ್ಧಿ ಸೇರಿದಂತೆ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದಿದೆ.

ದೇಶದಲ್ಲಿನ ಕೋಮು ಕಲಹಗಳಂತಹ ಕೃತ್ಯಗಳನ್ನು ಗಮನಿಸಿದರೆ ಆತಂಕವಾಗುತ್ತದೆ. ಡಾ.ಬಿ.ಆರ್. ಅಂಬೇಡ್ಕರ್ ರಚಿಸಿರುವ ಸಂವಿಧಾನವು ಸರ್ವಧರ್ಮಗಳನ್ನು ಸಮಾನವಾಗಿ ಕಾಣುವ, ಎಲ್ಲವನ್ನೂ, ಎಲ್ಲರನ್ನೂ ಒಳಗೊಂಡಿರುವ ಶ್ರೇಷ್ಠ ಗ್ರಂಥವಾಗಿದೆ. ಪ್ರತಿಯೊಬ್ಬರು ತಮ್ಮ ಧರ್ಮದ ಮೇಲಿನ ಪ್ರೀತಿಯೊಂದಿಗೆ ಇತರ ಧರ್ಮಗಳನ್ನು ಗೌರವಿಸಬೇಕು ಎಂದು ಅದು ಸಾರುತ್ತದೆ.

ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಆತ್ಮವಿಮರ್ಶೆ ಮಾಡಿಕೊಳ್ಳುವು ದರೊಂದಿಗೆ ವಿರೋಧಿಗಳ ಅಪಪ್ರಚಾರ ಹಾಗೂ ಪಕ್ಷದ ಸಂಘಟನೆ ಕೊರತೆ ಹಾಗೂ ಸೋಲಿಗೆ ಕಾರಣ ತಿಳಿದು ಅವುಗಳಿಂದ ಆಗುವ ಹಿನ್ನಡೆಯನ್ನು ಸರಿಮಾಡಿ ಕೊಳ್ಳಬೇಕು. ಕೇಂದ್ರದಲ್ಲಿ ಬಿಜೆಪಿ ಜನ ವಿರೋಧಿ ಆಡಳಿತ ನಡೆಸುತ್ತಿರುವುದರಿಂದ 2019ಕ್ಕೆ ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ. ಕಾಂಗ್ರೆಸ್‍ಗೆ ರಾಷ್ಟ್ರೀಯ ಜವಾಬ್ದಾರಿಯಿದೆ. ಇದರಿಂದ ಮತ್ತೆ ಕಾಂಗ್ರೆಸ್‍ನ ಆಡಳಿತವನ್ನು ಜನರು ನಿರೀಕ್ಷಿಸುತ್ತಿದ್ದಾರೆ. ಈ ನಡುವೆಯೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಮೂಲಕ ಜನರ ಸೇವೆಯಲ್ಲಿ ತೊಡಗಿದ್ದು, ಬಹಳ ಅವಕಾಶ, ಜೊತೆಗೆ ಸವಾಲುಗಳಿವೆ. ನಮ್ಮತನ ಕಳೆದು ಕೊಳ್ಳದೇ ಕಾರ್ಯನಿರ್ವಹಿಸಬೇಕು. ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಅನಾವಶ್ಯಕ ಹೇಳಿಕೆ ನೀಡಬೇಡಿ: ಮುಂದಿನ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಅನಾವಶ್ಯಕ ಹೇಳಿಕೆಗಳನ್ನು ಪಕ್ಷದ ಯಾವುದೇ ಮುಖಂಡರು ನೀಡದೆ, ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡುವುದು ಅಗತ್ಯವಾಗಿದೆ. ಪ್ರಜಾಪ್ರಭುತ್ವ ಬದಲಾವಣೆ ಯನ್ನು ಬಯಸುವುದಾಗಿದೆ. ಹಾಗಾಗೀ ಬದಲಾವಣೆಯನ್ನು ಅರಿತು ಹಾಗೂ ಲೋಪ ದೋಷಗಳನ್ನು ಸರಿಪಡಿಸಿಕೊಂಡು ಸಾಗುವ ಕಾರ್ಯವಾಗಬೇಕು ಎಂದು ತಿಳಿಸಿದರು.

ಕೋಮುವಾದಿಗಳನ್ನು ತಿರಸ್ಕರಿಸಿ: ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಕೋಮು ವಾದಿಗಳನ್ನು ದೂರವಿಡುವ ನಿಟ್ಟಿನಲ್ಲಿ ಸಮ್ಮಿಶ್ರ ಸರ್ಕಾರ ರಚಿಸಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್‍ರಾಮ್ ಅವರ ಸೇವೆ ಅಪಾರ. ಅವರ ಸಾಧನೆ ಗಳನ್ನು ಸ್ಮರಿಸುವುದು ಅಗತ್ಯ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಸುಳ್ಳು ಭರವಸೆ ನೀಡುತ್ತಿದೆ. ಜನರಿಗೆ ಸುಳ್ಳು ಹೇಳಿ ಮೋಸ ಮಾಡು ತ್ತಿದೆ. ಇದನ್ನು ಕಾಂಗ್ರೆಸ್ ಕಾರ್ಯಕರ್ತರು ಜನರಿಗೆ ತಿಳಿಸುವ ಮೂಲಕ ಮುಂದಿನ ಬಾರಿ ಕಾಂಗ್ರೆಸ್ ಸರ್ಕಾರವನ್ನು ತರಲು ಶ್ರಮಿಸಬೇಕು ಎಂದು ಕರೆ ನೀಡಿದರು.

ದೇಶದಲ್ಲಿ ಕೋಮುವಾದಿ ಪಕ್ಷ ಅಧಿಕಾರ ಹಿಡಿದಿದೆ. ಸಂವಿಧಾನ ರಕ್ಷಣಾ ದೃಷ್ಟಿಯಿಂದ ಈ ಪಕ್ಷವನ್ನು ಕಿತ್ತೊಗೆದು ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡಬೇಕು. ಬೂತ್ ಮಟ್ಟದಿಂದಲೇ ಪಕ್ಷ ಸಂಘಟನೆಗೆ ಮುಂದಾಗಬೇಕು ಎಂದು ಸಲಹೆ ನೀಡಿದ ಅವರು, ನಾನು ಯಾವುದೇ ಜಿಲ್ಲೆಗೆ ಹೋದರೂ ಪಕ್ಷದ ಕಚೇರಿಗೆ ಹೋಗು ವುದು ವಾಡಿಕೆ. ಅದರಂತೆ ಮೈಸೂರು- ಚಾಮರಾಜನಗರ ಜಿಲ್ಲಾ ಪ್ರವಾಸ ವೇಳೆ ಬಂದಿದ್ದೇನೆ. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಉತ್ತಮ ಕೆಲಸ ಮಾಡಿದ್ದರೂ ನಾವು ನಿರೀಕ್ಷಿಸಿ ದಷ್ಟು ಸ್ಥಾನಗಳು ಲಭಿಸಲಿಲ್ಲ. ನಮ್ಮ ಸರ್ಕಾರದ ವಿರುದ್ಧ ಬಿಜೆಪಿ ಸುಳ್ಳು ಹಬ್ಬಿಸಿತು ಎಂದು ಅವರು ವಿಷಾದಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ತನ್ವೀರ್ ಸೇಠ್, ಡಾ.ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು ಅವರನ್ನು ಸನ್ಮಾನಿಸ ಲಾಯಿತು. ಡಾ,ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್‍ರಾಮ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ವಿಜಯ್ ಕುಮಾರ್, ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ, ಕೆ.ಆರ್. ನಗರದ ಪರಾಜಿತ ಅಭ್ಯರ್ಥಿ ಡಿ.ರವಿಶಂಕರ್, ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾ ಧ್ಯಕ್ಷ ಆರ್. ಪ್ರಕಾಶ್ ಕುಮಾರ್, ಮೈಸೂರು ನಗರ ಕಾಂಗ್ರೆಸ್ ಉಪಾಧ್ಯಕ್ಷೆ ಮಂಜುಳಾ ಮಾನಸ, ಗ್ರಾಮಾಂತರ ಮಹಿಳಾ ಅಧ್ಯಕ್ಷೆ ನಂದಿನಿ ಚಂದ್ರಶೇಖರ್, ಹುಣಸೂರು ಬಸವಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »