ಪತ್ನಿ ಕತ್ತು ಹಿಸುಕಿ ಕೊಂದ ಪತಿಗೆ ಜೀವಾವಧಿ ಶಿಕ್ಷೆ
ಮೈಸೂರು

ಪತ್ನಿ ಕತ್ತು ಹಿಸುಕಿ ಕೊಂದ ಪತಿಗೆ ಜೀವಾವಧಿ ಶಿಕ್ಷೆ

July 25, 2018

ಮೈಸೂರು: ಕತ್ತು ಹಿಸುಕಿ ಪತ್ನಿಯನ್ನು ಕೊಲೆ ಮಾಡಿದ ಪತಿರಾಯನಿಗೆ ಜೀವಾವಧಿ ಶಿಕ್ಷೆ ಹಾಗೂ ಸಾವಿರ ರೂ. ದಂಡ ವಿಧಿಸಿ ಮೈಸೂರಿನ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿಜಯಕುಮಾರ್ ಎಂ. ಆನಂದಶೆಟ್ಟಿ ತೀರ್ಪು ನೀಡಿದ್ದಾರೆ.

ಕೆ.ಆರ್.ನಗರ ತಾಲೂಕು ದೇವಿತಂದ್ರೆ ಗ್ರಾಮದ ಜಯರಾಂ ಅಲಿಯಾಸ್ ಬಂಗಾರು (38) ಶಿಕ್ಷೆಗೆ ಗುರಿ ಯಾದವನಾಗಿದ್ದು, ಈತ 2013ರ ಏಪ್ರಿಲ್ 10ರಂದು ತನ್ನ ಪತ್ನಿ ರತ್ನಮ್ಮಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ.

ವಿವರ: ಹೊಳೆನರಸೀಪುರ ತಾಲೂಕಿನ ಗುಲಗಂಜಿಹಳ್ಳಿ ಗ್ರಾಮದ ಬೇಲೂರಯ್ಯ ಎಂಬುವರ ಪುತ್ರಿ ರತ್ನಮ್ಮ ಳನ್ನು 15 ವರ್ಷಗಳ ಹಿಂದೆ ಜಯರಾಂನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಅವರಿಗೆ ಇಬ್ಬರು ಮಗಳು ಜನಿಸಿದ್ದರು. ಜಯರಾಂ ಕುಡುಕನಾಗಿದ್ದು, ಪ್ರತೀ ದಿನ ಕುಡಿದು ಬಂದು ಪತ್ನಿಯನ್ನು ಹೊಡೆಯುತ್ತಿದ್ದ.

ಇದರಿಂದ ಬೇಸತ್ತ ರತ್ನಮ್ಮ ಮಕ್ಕಳೊಂದಿಗೆ ತವರು ಮನೆ ಸೇರಿಕೊಂಡಿದ್ದರು. ಅಲ್ಲದೇ ತನಗೆ ಹಾಗೂ ಮಕ್ಕಳಿಗೆ ಜೀವನಾಂಶ ನೀಡಬೇಕೆಂದು ಕೆ.ಆರ್.ನಗರ ಜೆಎಂ ಎಫ್‍ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. 2013ರ ಏಪ್ರಿಲ್ 10ರಂದು ನ್ಯಾಯಾಲಯಕ್ಕೆ ಹಾಜರಾಗಿದ್ದ ಆಕೆ, ತವರು ಮನೆಗೆ ತೆರಳಲು ಬಸ್‍ಗಾಗಿ ಕಾಯುತ್ತಿದ್ದ ಜಯರಾಂ, ಹಬ್ಬಕ್ಕೆ ಅಕ್ಕಿ ಮತ್ತು ಮಕ್ಕಳಿಗೆ ಹೊಸ ಬಟ್ಟೆ ಕೊಡಿಸು ತ್ತೇನೆಂದು ತನ್ನ ಊರಿಗೆ ಕರೆದೊಯ್ದು, ಆಕೆಯ ಕತ್ತು ಹಿಸುಕಿ ಸಾಯಿಸಿದ್ದ.

ಈ ಸಂಬಂಧ ರತ್ನಮ್ಮ ಸಹೋದರ ಮಂಜುನಾಥ ನೀಡಿದ ದೂರನ್ನು ದಾಖಲಿಸಿಕೊಂಡ ಸಾಲಿಗ್ರಾಮ ಪೊಲೀಸರು, ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು, ಜಯರಾಂ ನಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಅಜೀತ್ ಕುಮಾರ್ ಡಿ. ಹಮಿಗಿ ವಾದ ಮಂಡಿಸಿದ್ದರು.

Translate »