ನ್ಯಾಯಾಲಯ ಜಪ್ತಿ ಆದೇಶ ಹಿಂಪಡೆದ ಹಿನ್ನೆಲೆ: ಜಿಲ್ಲಾಧಿಕಾರಿ ಕಚೇರಿ ವಸ್ತುಗಳು ವಾಪಸ್
ಮೈಸೂರು

ನ್ಯಾಯಾಲಯ ಜಪ್ತಿ ಆದೇಶ ಹಿಂಪಡೆದ ಹಿನ್ನೆಲೆ: ಜಿಲ್ಲಾಧಿಕಾರಿ ಕಚೇರಿ ವಸ್ತುಗಳು ವಾಪಸ್

January 28, 2020

ಮೈಸೂರು: ಮೈಸೂರು ಜಿಲ್ಲಾಧಿಕಾರಿ ಕಚೇರಿ ಜಪ್ತಿಗೆ ಮುಂದಾದ ಕಂಪನಿಯೊಂದರ ಪ್ರತಿನಿಧಿ ಗಳು, ನ್ಯಾಯಾಲಯ ಆದೇಶ ಹಿಂಪಡೆದ ಹಿನ್ನೆಲೆಯಲ್ಲಿ ಬರಿಗೈಲಿ ವಾಪಸ್ಸಾದ ಘಟನೆ ಸೋಮವಾರ ನಡೆದಿದೆ. 2013ರಲ್ಲಿ ಅಟಲ್‍ಜೀ ಜನಸ್ನೇಹಿ ಯೋಜನೆಯಡಿ ಯುಪಿಎಸ್‍ಗಳನ್ನು ಪೂರೈಸಿದ್ದ ಕಂಪನಿಗೆ 3.98 ಲಕ್ಷ ರೂ. ಬಾಕಿ ಹಣ ನೀಡಿರಲಿಲ್ಲ. ಹಾಗಾಗಿ ಕಂಪನಿಯು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಲೋಕ್ ಅದಾಲತ್‍ನಲ್ಲಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಕೂಡಲೇ ಹಣ ಪಾವತಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದರು. ಆದರೆ ಹಣ ಪಾವತಿಸದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ವಸ್ತುಗಳನ್ನು ಜಪ್ತಿ ಮಾಡಲು ನ್ಯಾಯಾಲಯ ಆದೇಶಿಸಿತ್ತು. ಅದರಂತೆ ಕಂಪನಿ ಸಿಬ್ಬಂದಿ, ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿನ ಪೀಠೋಪಕರಣಗಳನ್ನು ಹೊರಕ್ಕೆ ತಂದು, ವಾಹನಕ್ಕೆ ತುಂಬಲು ಮುಂದಾದರು. ಕೆ.ಆರ್.ನಗರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾರ್ಯಕ್ರಮದಲ್ಲಿದ್ದ ಎಡಿಸಿ ಪೂರ್ಣಿಮಾ ಅವರು ವಿಷಯ ತಿಳಿದ ಕೂಡಲೇ ಕಚೇರಿಗೆ ಆಗಮಿಸಿ, ಬುಧವಾರ ಡಿಸಿ ಅಭಿರಾಮ್ ಜಿ.ಶಂಕರ್ ಅವರು ಬಂದು, ಚೆಕ್ ನೀಡುತ್ತಾರೆಂದು ತಿಳಿಸಿದರು. ಆದರೂ ಜಪ್ತಿ ಕಾರ್ಯ ಮುಂದುವರೆಸಿದ್ದರಿಂದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಸಮಯಾ ವಕಾಶ ಕೇಳಲಾಯಿತು. ಇದಕ್ಕೆ ಒಪ್ಪಿದ ನ್ಯಾಯಾಧೀಶರು ಜಪ್ತಿ ಆದೇಶವನ್ನು ವಾಪಸ್ ಪಡೆದ ಹಿನ್ನೆಲೆಯಲ್ಲಿ ವಸ್ತುಗಳನ್ನು ಹಿಂದಿರುಗಿಸಿ, ವಾಪಸ್ಸಾದರು.

Translate »