ಮಾನಸಗಂಗೋತ್ರಿಯಲ್ಲಿ ‘ಫ್ರೀ ಕಾಶ್ಮೀರ್’ ಫಲಕ ಪ್ರದರ್ಶನ ಪ್ರಕರಣ: ಜ.27ಕ್ಕೆ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಕೋರ್ಟ್
ಮೈಸೂರು

ಮಾನಸಗಂಗೋತ್ರಿಯಲ್ಲಿ ‘ಫ್ರೀ ಕಾಶ್ಮೀರ್’ ಫಲಕ ಪ್ರದರ್ಶನ ಪ್ರಕರಣ: ಜ.27ಕ್ಕೆ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಕೋರ್ಟ್

January 25, 2020

ಮೈಸೂರು: ಮಾನಸಗಂಗೋತ್ರಿಯಲ್ಲಿ ‘ಫ್ರೀ ಕಾಶ್ಮೀರ್’ ಫಲಕ ಪ್ರದರ್ಶಿಸಿದ ಪ್ರಕರಣ ಸಂಬಂಧ ಸಲ್ಲಿಸಿದ್ದ ಜಾಮೀನು ಅರ್ಜಿ ತೀರ್ಪನ್ನು ನ್ಯಾಯಾ ಲಯವು ಜನವರಿ 27ಕ್ಕೆ ಕಾಯ್ದಿರಿಸಿದೆ.

ಈಗಾಗಲೇ ಮಧ್ಯಂತರ ಜಾಮೀನು ಮಂಜೂರಾಗಿರುವ ಪ್ರಕರಣದ ಆರೋಪಿ ನಳಿನಿ ಬಾಲಕುಮಾರ್‍ಗೆ ರೆಗ್ಯುಲರ್ ಬೇಲ್ ನೀಡುವಂತೆ ಆಕೆ ಪರ ಬೆಂಗಳೂರಿನ ಹಿರಿಯ ವಕೀಲ ದ್ವಾರಕಾನಾಥ್ ಹಾಗೂ ತಂಡ, ಮೈಸೂರಿನ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಾಧೀಶ ಜೆರಾಲ್ಡ್ ರುಡಾಲ್ಫ್ ಮಂಡೊನ್ಯಾ ಅವರು, ಸರ್ಕಾರಿ ಅಭಿಯೋಜಕ ಎಂ.ಆನಂದ್‍ಕುಮಾರ್ ಅವರು ಬೇರೊಂದು ನ್ಯಾಯಾಲಯದಲ್ಲಿ ಪ್ರಮುಖ ಕೇಸೊಂದರ ವಿಚಾರಣೆಯಲ್ಲಿ ವಾದ ಮಂಡಿಸುತ್ತಿದ್ದ ಕಾರಣ, ಅವರ ಹಾಜರಿಗೆ ಅವಕಾಶವಾಗುವಂತೆ ನಳಿನಿ ಜಾಮೀನು ಅರ್ಜಿ ವಿಚಾರಣೆಯನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.

ನಿಗದಿಯಂತೆ ಇಂದು ಮಧ್ಯಾಹ್ನ ವಿಚಾರಣೆ ಆರಂಭವಾಗಿ, ಅರ್ಜಿದಾರರ ಪರ ಬೆಂಗಳೂರಿನ ಜಗದೀಶ, ಮಂಜುನಾಥ ಸೇರಿದಂತೆ ಐವರು ವಕೀಲರು ಸುಮಾರು 45 ನಿಮಿಷಗಳ ಕಾಲ ವಾದ ಮಂಡಿಸಿದರು.

ಪ್ರಕರಣದ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶ ಜೆರಾಲ್ಡ್ ರುಡಾಲ್ಫ್ ಮೆಂಡೋನ್ಸಾ ಅವರು, ಜಾಮೀನು ಅರ್ಜಿ ತೀರ್ಪನ್ನು ಸೋಮವಾರಕ್ಕೆ ಕಾಯ್ದಿರಿಸಿದರು. ವಿಚಾರಣೆ ವೇಳೆ ಕೋರ್ಟ್‍ಹಾಲ್‍ನಲ್ಲಿ ವಕೀಲರು ಕಿಕ್ಕಿರಿದು ತುಂಬಿದ್ದರು. ವಿಚಾರಣೆ ಹಿನ್ನೆಲೆಯಲ್ಲಿ ಮೈಸೂರಿನ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಬಳಿ ಲಕ್ಷ್ಮೀ ಪುರಂ ಠಾಣೆ ಇನ್ಸ್‍ಪೆಕ್ಟರ್ ಗಂಗಾಧರ್ ನೇತೃತ್ವದಲ್ಲಿ ಸುಮಾರು 40 ಮಂದಿ ಸಿಬ್ಬಂದಿ ಯನ್ನು ನಿಯೋಜಿಸಿ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶಿಸಿದ ನಳಿನಿ ಬಾಲಕುಮಾರ್ ಪರ ವಕಾಲತ್ತು ವಹಿಸದೇ ಇರಲು ಮೈಸೂರು ವಕೀಲರ ಸಂಘ ನಿರ್ಣಯ ಕೈಗೊಂಡಿದ್ದರೆ, ಅದಕ್ಕೆ ಪ್ರತಿಯಾಗಿ ಬೆಂಗಳೂರಿನ ವಕೀಲ ದ್ವಾರಕನಾಥ್ ತಂಡದವರು ವಕಾಲತ್ತು ವಹಿಸಲು ಮುಂದೆ ಬಂದು, ನಳಿನಿ ಪರ ಜಾಮೀನು ಅರ್ಜಿ ಸಲ್ಲಿಸಿ ವಿಚಾರಣೆಗೂ ಹಾಜರಾಗಿರುವುದು ಮೈಸೂರು ವಕೀಲರಿಗೆ ಮುಜುಗರ ಉಂಟುಮಾಡಿದೆ.

Translate »